ಶಾಲೆ ಆವರಣ ಗೋಡೆ ಕುಸಿದು ಬಾಲಕಿ ಸ್ಥಳದಲ್ಲೇ ಸಾವು

| Published : May 21 2024, 12:33 AM IST

ಸಾರಾಂಶ

ಉಳ್ಳಾಲ ತಾಲೂಕು ಹರೇಕಳ ನ್ಯೂಪಡ್ಪು ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿತ್ತು. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಇರುವ ವಿದ್ಯಾರ್ಥಿನಿ ಶಾಝಿಯಾ ಭಾನು ಕೂಡಾ ಭಾಗವಹಿಸಿದ್ದಳು. ಅಲ್ಲಿಂದ ಮನೆಗೆ ಹಿಂದಿರುಗುವಾಗ ಈಕೆ ಶಾಲಾ ಕಂಪೌಂಡ್ ಗೇಟಿನಲ್ಲಿ ಆಟವಾಡುವ ಸಂದರ್ಭ ಕಂಪೌಂಡ್ ಬಾಲಕಿ ಶಾಝಿಯಾ ಮೇಲೆ ಕುಸಿದುಬಿದ್ದು ಆಕೆ ಸ್ಥಳದಲ್ಲೇ ಮೃತಪಟ್ಟಳು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಶಾಲೆಯ ಆವರಣ ಗೋಡೆ ಕುಸಿದು 3ನೇ ತರಗತಿ ವಿದ್ಯಾರ್ಥಿನಿ ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ತಾಲೂಕಿನ ಹರೇಕಳ ನ್ಯೂಪಡ್ಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದೆ. ನ್ಯೂಪಡ್ಬು ನಿವಾಸಿ ಸಿದ್ದೀಖ್ - ಜಮೀಲಾ ದಂಪತಿ ಪುತ್ರಿ ಶಾಝಿಯಾ ಬಾನು (7) ಮೃತಳು.

ಘಟನೆ ವಿವರ:

ಹರೇಕಳ ನ್ಯೂಪಡ್ಪು ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿತ್ತು. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಇರುವ ವಿದ್ಯಾರ್ಥಿನಿ ಶಾಝಿಯಾ ಭಾನು ಕೂಡಾ ಭಾಗವಹಿಸಿದ್ದಳು.

ಸಂಜೆ ವೇಳೆ ಮನೆಗೆ ಹಿಂತಿರುಗುವ ಸಂದರ್ಭ ಇಲ್ಲಿ ಮಳೆ ಸುರಿಯುತ್ತಿತ್ತು. ಈಕೆ ಶಾಲಾ ಕಂಪೌಂಡ್ ಗೇಟಿನಲ್ಲಿ ಆಟವಾಡುವ ಸಂದರ್ಭ ಕಂಪೌಂಡ್ ಬಾಲಕಿ ಶಾಝಿಯಾ ಮೇಲೆ ಕುಸಿದುಬಿದ್ದಿದೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ, ಬಾಲಕಿ ಪ್ರಾಣಪಕ್ಷಿ ಹಾರಿಹೋಗಿತ್ತು. ಬೆಳಗ್ಗೆಯಿಂದ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗ ಮಳೆಯಾಗುತ್ತಿದ್ದು, ಮಳೆ ಹಿನ್ನೆಲೆಯಲ್ಲಿ ಕಂಪೌಂಡ್ ಶಿಥಿಲಗೊಂಡು ಬಿದ್ದಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆ ಹಾನಿ:

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಅಲ್ಲಲ್ಲಿ ಹಾನಿಯಾಗಿದ್ದು,ಕೆಲವು ಕಡೆಗಳಲ್ಲಿ ಸಿಡಿಲು ಬಡಿದು ಲಕ್ಷಾಂತರ ರು. ನಷ್ಟ ಸಂಭವಿಸಿದೆ.ವಿಟ್ಲ ಹೋಬಳಿ, ಅಳಿಕೆ ಗ್ರಾಮದ ಕೋಡಿಜಾಲು ನಿವಾಸಿ ನಾರಾಯಣ ಪಾಟಾಳಿ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಘಟನೆಯಿಂದ ಸುಮಾರು ರು. 40 ಸಾವಿರ ರು. ನಷ್ಟ ಸಂಭವಿಸಿದೆ. ತೆಂಕಕಜೆಕಾರ್ ಗ್ರಾಮದ ಕರ್ಲ ಎಂಬಲ್ಲಿ ರಹಿಮತ ಎಂಬವರ ವಾಸ್ತವ್ಯದ ಮನೆಗೆ ಗಾಳಿ ಮಳೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಪುಣಚ ಗ್ರಾಮದ ಆಜೇರು ಎಂಬಲ್ಲಿನ ನಿವಾಸಿಯಾದ ಶಿವಪ್ಪ ನಾಯ್ಕ ಎಂಬವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ. ಸೋಮವಾರ ಸಂಜೆಯ ಬಳಿಕ ಮಳೆಯ ಆರ್ಭಟ ಜೋರಾಗಿದ್ದು, ತಾಲೂಕಿನೆಲ್ಲೆಡೆ ಸೋಮವಾರ ತಡರಾತ್ರಿ ತನಕ ಧಾರಾಕಾರ ಮಳೆ ಸುರಿಯಿತು.