ಪುಂಡರ ಅಡ್ಡೆಗಳಾಗುತ್ತಿರುವ ಶಾಲಾ ಆವರಣ!

| Published : Mar 28 2024, 12:49 AM IST

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಸೂಕ್ತ ಭದ್ರತೆಯ ಕೊರತೆ ಕಾಡುತ್ತಿದೆ. ಪರಿಣಾಮವಾಗಿ ರಜೆ ದಿನಗಳಲ್ಲಿ ಶಾಲಾ ಆವರಣಗಳು ಪುಂಡರ ಅಡ್ಡೆಗಳಾಗುತ್ತಿದ್ದು, ಇದರಿಂದಾಗಿ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ.

ದೊಡ್ಡಬಳ್ಳಾಪುರ: ತಾಲೂಕಿನ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಸೂಕ್ತ ಭದ್ರತೆಯ ಕೊರತೆ ಕಾಡುತ್ತಿದೆ. ಪರಿಣಾಮವಾಗಿ ರಜೆ ದಿನಗಳಲ್ಲಿ ಶಾಲಾ ಆವರಣಗಳು ಪುಂಡರ ಅಡ್ಡೆಗಳಾಗುತ್ತಿದ್ದು, ಇದರಿಂದಾಗಿ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ.

ತಾಲೂಕಿನ ಸರ್ಕಾರಿ ಶಾಲೆಗಳಿಗೆ ಕಿಡಿಗೇಡಿಗಳ ಹಾವಳಿ ಮಿತಿಮೀರುತ್ತಿದ್ದು, ಶಿಕ್ಷಕರು, ವಿದ್ಯಾರ್ಥಿಗಳು ತೊಂದರೆಗೆ ಒಳಗಾಗುವಂತಾಗಿದೆ. ತಾಲೂಕಿನ ಅನೇಕ ಗ್ರಾಮಗಳ ಸರ್ಕಾರಿ ಶಾಲೆಯ ಆವರಣಗಳು ಸೂಕ್ತ ಭದ್ರತೆ ಕೊರತೆಯಿಂದಾಗಿ ಸಂಜೆ ಹಾಗೂ ರಜಾ ದಿನಗಳಲ್ಲಿ ಪುಂಡರ ಆಶ್ರಯ ತಾಣವಾಗುತ್ತಿದ್ದು, ಮದ್ಯ ಸೇವನೆ, ಜೂಜು ಸೇರಿದಂತೆ ಅಕ್ರಮಗಳ ತಾಣವಾಗುತ್ತಿವೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.

ಇತ್ತೀಚಿಗಷ್ಟೆ ಲಕ್ಷ್ಮೀದೇವಿಪುರ ಗ್ರಾಮದ ಶಾಲೆಯ ನೀರಿನ ತೊಟ್ಟಿಯಲ್ಲಿ ಶೌಚ ಮಾಡುವ ಮೂಲಕ ಕಿಡಿಗೇಡಿಗಳು ಅಮಾನವೀಯ ವರ್ತನೆ ರೋರಿದ್ದರು. ಇದೀಗ ತಾಲೂಕಿನ ಆರೂಢಿ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಶಾಲೆಯ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದು, ಕ್ರೀಡಾ ವಸ್ತುಗಳನ್ನು ದೋಚಿದ್ದಾರೆ.

ಅಲ್ಲದೆ ನೂತನವಾಗಿ ನಿರ್ಮಿಸಿರುವ ಕಟ್ಟದ ಬಾಗಿಲು ಗಳನ್ನು ಕಿತ್ತೊಯ್ಯಲು ಪ್ರಯತ್ನಿಸಿದ್ದಾರೆ. ಇದೇ ಆವರಣದಲ್ಲಿನ ಶೌಚಾಲಯ ಬಾಗಿಲಿನ ಬೀಗ, ಕೊಳಾಯಿಗಳನ್ನು ಮುರಿಯುವುದು ಸೇರಿದಂತೆ ಕಿಡಿಗೇಡಿಗಳ ಉಪಟಳ ಮಿತಿಮೀರಿದೆ!

ಆರೂಢಿ ಗ್ರಾಮ ತಾಲೂಕಿನ ಗಡಿ ಗ್ರಾಮವಾಗಿದ್ದು, ಇಲ್ಲಿನ ಸಮೀಪದ ಅಲ್ಲಿಪುರದಲ್ಲಿನ ಖಾಸಗಿ ಶಾಲೆಗಳ ಹಾವಳಿಯಿಂದ ಮೈಸೂರು ಮಹಾರಾಜರು ನಿರ್ಮಿಸಿದ ಸರ್ಕಾರಿ ಶಾಲೆ ಮುಚ್ಚುವ ಆತಂಕ ಎದುರಾಗಿತ್ತು. ಆದರೆ ಉತ್ತಮ ಮುಖ್ಯ ಶಿಕ್ಷಕರು, ವಿದ್ಯಾವಂತ ಎಸ್‌ಡಿಎಂಸಿ ತಂಡ, ಗ್ರಾಮದ ಹಿರಿಯರು, ನಿಕಟ ಪೂರ್ವ ಶಾಸಕ ಟಿ.ವೆಂಕಟರಮಣಯ್ಯ, ಅಜಾಕ್ಸ್ ಸಂಸ್ಥೆಯ ಮಂಜುನಾಥ್ ಮತ್ತಿತರರ ಕಾಳಜಿಯಿಂದ ಸುಸಜ್ಜಿತ ಕೊಠಡಿಗಳು ನಿರ್ಮಾಣಗೊಂಡಿದ್ದವು. ಆಗಿನ ಬಿಇಒ ಬೈಯ್ಯಪ್ಪರೆಡ್ಡಿ, ಆರ್.ರಂಗಪ್ಪರ ಕಾಳಜಿಯಿಂದ ಶಿಕ್ಷಕರ ನೇಮಕ ಮಾಡಿಸಿಕೊಂಡ ಈ ಶಾಲೆ ಇಂದು ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

ದಿನ ಕಳೆದಂತೆ ಖಾಸಗಿ ಶಾಲೆಯ ವ್ಯಾಮೋಹದಿಂದ ಹೊರಬರುತ್ತಿರುವ ಪೋಷಕರು ಆರೂಢಿಯ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುತ್ತಿದ್ದು ಪ್ರಸ್ತುತ 230 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಇಂತಹ ಶಾಲೆಗೆ ಕಿಡಿಗೇಡಿಗಳ ಹಾವಳಿ ತಲೆನೋವಾಗಿ ಪರಿಣಮಿಸಿದ್ದು, ಈ ಕುರಿತು ಮಂಗಳವಾರ ಹೊಸಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅಲ್ಲದೆ ಶಾಲೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲು ಎಸ್‌ಡಿಎಂಸಿ ಪ್ರಮುಖರು ನಿರ್ಧರಿಸಿದ್ದಾರೆ.26ಕೆಡಿಬಿಪಿ1-

ಆರೂಢಿ ಶಾಲೆಯ ಗಾಜು ಒಡೆದಿರುವ ಕಿಡಿಗೇಡಿಗಳು.