ಮೈಸೂರು ದಸರಾ ಗಜಪಡೆಯ ಎರಡನೇ ತಂಡ ಇಂದು ಕಾಡಿನಿಂದ ನಾಡಿಗೆ :ಈ ಬಾರಿ 14 ಆನೆಗಳು ಆಯ್ಕೆ

| Published : Sep 05 2024, 12:41 AM IST / Updated: Sep 05 2024, 12:33 PM IST

ಮೈಸೂರು ದಸರಾ ಗಜಪಡೆಯ ಎರಡನೇ ತಂಡ ಇಂದು ಕಾಡಿನಿಂದ ನಾಡಿಗೆ :ಈ ಬಾರಿ 14 ಆನೆಗಳು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ದಸರೆಗೆ 14 ಆನೆಗಳು ಆಯ್ಕೆ ಮಾಡಲಾಗಿದ್ದು, ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು, ಧನಂಜಯ, ಗೋಪಿ, ಭೀಮ, ಕಂಜನ್, ರೋಹಿತ್, ಏಕಲವ್ಯ, ವರಲಕ್ಷ್ಮಿ ಮತ್ತು ಲಕ್ಷ್ಮಿ ಆನೆಗಳು ಈಗಾಗಲೇ ಮೈಸೂರು ಅರಮನೆ ಪ್ರವೇಶಿಸಿ ಪ್ರತಿದಿನ ತಾಲೀಮು ನಡೆಸುತ್ತಿವೆ.

ಬಿ.ಶೇಖರ್‌ ಗೋಪಿನಾಥಂ

 ಮೈಸೂರು :  ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಕ್ಕಾಗಿ ಗಜಪಡೆಯ ಎರಡನೇ ತಂಡದಲ್ಲಿ 5 ಆನೆಗಳು ಸೆ.5 ರಂದು (ಗುರುವಾರ) ಕಾಡಿನಿಂದ ನಾಡಿಗೆ ಆಗಮಿಸಲಿವೆ.

ಎರಡನೇ ತಂಡದಲ್ಲಿ 3 ಗಂಡು, 2 ಹೆಣ್ಣು ಆನೆಗಳಿವೆ. ಪ್ರಶಾಂತ, ಮಹೇಂದ್ರ, ಸುಗ್ರೀವ, ದೊಡ್ಡಹರವೆ ಲಕ್ಷ್ಮಿ ಮತ್ತು ಹಿರಣ್ಯಾ ಆನೆಗಳು ವಿವಿಧ ಆನೆ ಶಿಬಿರಗಳಿಂದ ಲಾರಿಗಳಲ್ಲಿ ಮೈಸೂರಿಗೆ ಕರೆ ತರಲಾಗುತ್ತಿದೆ.

ಈ ಬಾರಿಯ ದಸರೆಗೆ 14 ಆನೆಗಳು ಆಯ್ಕೆ ಮಾಡಲಾಗಿದ್ದು, ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು, ಧನಂಜಯ, ಗೋಪಿ, ಭೀಮ, ಕಂಜನ್, ರೋಹಿತ್, ಏಕಲವ್ಯ, ವರಲಕ್ಷ್ಮಿ ಮತ್ತು ಲಕ್ಷ್ಮಿ ಆನೆಗಳು ಈಗಾಗಲೇ ಮೈಸೂರು ಅರಮನೆ ಪ್ರವೇಶಿಸಿ ಪ್ರತಿದಿನ ತಾಲೀಮು ನಡೆಸುತ್ತಿವೆ. ಈಗ 2ನೇ ತಂಡದಲ್ಲಿ 5 ಆನೆಗಳು ಆಗಮಿಸಿ ಮೊದಲ ತಂಡದೊಂದಿಗೆ ಸೇರಿಕೊಳ್ಳಲಿದ್ದು, ಇದರೊಂದಿಗೆ ಗಜಪಡೆಯ ಸಂಖ್ಯೆಯು 14ಕ್ಕೆ ಏರಿಕೆಯಾಗಲಿದೆ.

ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಕಳೆದ ಆ.21 ರಂದು ಹುಣಸೂರು ತಾಲೂಕು ನಾಗರಹೊಳೆಯ ವೀರನಹೊಸಹಳ್ಳಿಯಿಂದ ಮೈಸೂರಿಗೆ ಆಗಮಿಸಿ, ಅಶೋಕಪುರಂ ಅರಣ್ಯ ಭವನ ಆವರಣದಲ್ಲಿ 2 ದಿನಗಳ ವಿಶ್ರಾಂತಿ ಬಳಿಕ ಆ.23 ರಂದು ಮೈಸೂರು ಅರಮನೆಗೆ ಪ್ರವೇಶಿಸಿದ್ದವು. ಆ.24 ರಂದು ತೂಕ ಪರೀಕ್ಷೆಯ ಬಳಿಕ, ಆ.25 ರಿಂದ ನಡಿಗೆ ತಾಲೀಮು, ಸೆ.1 ರಿಂದ ಮರಳು ಮೂಟೆ ಭಾರ ಹೊರಿಸುವ ತಾಲೀಮಿನಲ್ಲಿ ಪಾಲ್ಗೊಳ್ಳುತ್ತಿವೆ. ಎರಡನೇ ತಂಡದಲ್ಲಿ ಆಗಮಿಸುವ ಆನೆಗಳು, 1- 2 ದಿನ ವಿಶ್ರಾಂತಿಯ ಬಳಿಕ ಮೊದಲ ತಂಡದೊಂದಿಗೆ ತಾಲೀಮಿನಲ್ಲಿ ಭಾಗವಹಿಸಲಿವೆ.

ಗಜಪಡೆ 2ನೇ ತಂಡದ ಆನೆಗಳ ವಿವರ:

1. ಪ್ರಶಾಂತ- 51 ವರ್ಷ, ಶರೀರದ ಎತ್ತರ- 3 ಮೀಟರ್, ಅಂದಾಜು ತೂಕ- 4700 ರಿಂದ 4900 ಕೆ.ಜಿ., ದುಬಾರೆ ಆನೆ ಶಿಬಿರ. ಮಾವುತ- ಚಿನ್ನಪ್ಪ, ಕಾವಾಡಿ- ಚಂದ್ರ.

ಪ್ರಶಾಂತ ಆನೆಯನ್ನು 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಇದು ಬಲಿಷ್ಠ ಆನೆಯಾಗಿದ್ದು, ಸಮಾರಂಭ ಮೆರವಣಿಗೆಯಲ್ಲಿ ಭಾಗವಹಿಸಿದ ಅನುಭವ ಹೊಂದಿದೆ. ಈ ಆನೆಯು ಕೆಲವು ವರ್ಷಗಳ ಬಿಡುವಿನ ನಂತರ 15ನೇ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ.

2. ಮಹೇಂದ್ರ- 41 ವರ್ಷ, ಶರೀರದ ಎತ್ತರ- 2.75 ಮೀಟರ್, ಶರೀರದ ಉದ್ದ- 3.25 ಮೀಟರ್, ಮತ್ತಿಗೋಡು ಆನೆ ಶಿಬಿರ, ಅಂದಾಜು ತೂಕ- 4000 ರಿಂದ 4600 ಕೆ.ಜಿ., ಮಾವುತ- ರಾಜಣ್ಣ, ಕಾವಾಡಿ- ಮಲ್ಲಿಕಾರ್ಜುನ.

ಮಹೇಂದ್ರ ಆನೆಯನ್ನು 2018ರಲ್ಲಿ ರಾಮನಗರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಈ ಆನೆಯು ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ದಸರೆಯಲ್ಲಿ ಭಾಗವಹಿಸಿದ್ದು, ಈ ಆನೆಯು ಶ್ರೀರಂಗಪಟ್ಟಣ ದಸರಾದಲ್ಲಿ ಅಂಬಾರಿ ಹೊತ್ತು ಗಮನ ಸೆಳೆದಿತ್ತು. ಈಗ 3ನೇ ಬಾರಿಗೆ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿದೆ.

3. ಸುಗ್ರೀವ- 42 ವರ್ಷ, ಶರೀರದ ಎತ್ತರ- 2.77 ಮೀಟರ್, ಅಂದಾಜು ತೂಕ- 4800 ರಿಂದ 5000 ಕೆ.ಜಿ., ದುಬಾರೆ ಆನೆ ಶಿಬಿರ. ಮಾವುತ- ಶಂಕರ್, ಕಾವಾಡಿ- ಅನಿಲ್.

ಈ ಆನೆಯನ್ನು 2016ರಲ್ಲಿ ಕೊಡಗಿನ ಕುಶಾಲನಗರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಕಳೆದ ಎರಡು ವರ್ಷಗಳಿಂದ ದಸರೆಗೆ ಆಗಸಿದ್ದರೂ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರಲಿಲ್ಲ. ದಸರಾ ಜಂಬಸವಾರಿಯಲ್ಲಿ ಭಾಗವಹಿಸುವ ನಿರೀಕ್ಷೆಯೊಂದಿಗೆ 3ನೇ ಬಾರಿಗೆ ದಸರೆಗೆ ಆಗಮಿಸಿದೆ.

4. ದೊಡ್ಡಹರವೆ ಲಕ್ಷ್ಮೀ- 53 ವರ್ಷ, ಶರೀರದ ಎತ್ತರ- 2.52 ಮೀಟರ್, ಅಂದಾಜು ತೂಕ- 3000 ರಿಂದ 3500 ಕೆ.ಜಿ., ದೊಡ್ಡಹರವೆ ಆನೆ ಶಿಬಿರ. ಮಾವುತ- ರವಿ, ಕಾವಾಡಿ- ಮಂಜುನಾಥ್. ಲಕ್ಷ್ಮೀ ಆನೆಯು ಕಳೆದ ಎರಡು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

5. ಹಿರಣ್ಯಾ- 47 ವರ್ಷ, ಶರೀರದ ಎತ್ತರ- 2.50 ಮೀಟರ್, ಅಂದಾಜು ತೂಕ- 2800 ರಿಂದ 3000 ಕೆ.ಜಿ., ರಾಮಪುರ ಆನೆ ಶಿಬಿರ. ಮಾವುತ- ಶಫಿವುಲ್ಲಾ, ಕಾವಾಡಿ- ಮನ್ಸೂರ್.

ಈ ಆನೆಯನ್ನು 2021ರಲ್ಲಿ ಕೊಡಗಿನ ಆನೆ ಮನೆ ಫೌಂಡೇಶನ್ ನಿಂದ ವಶಕ್ಕೆ ಪಡೆದಿದ್ದು, ರಾಮಪುರ ಆನೆ ಶಿಬಿರದಲ್ಲಿರುತ್ತದೆ. ಈ ಆನೆಯು ಎರಡನೇ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ.