ಆತ್ಮರಕ್ಷಣೆ ಕಲೆ ವುಶು ಸ್ತ್ರೀಯರಿಗೆ ಅವಶ್ಯ

| Published : Mar 14 2024, 02:03 AM IST

ಸಾರಾಂಶ

ಬಾಗಲಕೋಟೆ: ಅಪಾಯದ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸ್ತ್ರೀಯರಿಗೆ ವುಶು, ಕರಾಟೆಗಳಂತಹ ಆತ್ಮರಕ್ಷಣಾ ಕಲೆಗಳು ಅವಶ್ಯಕವಾಗಿವೆ ಎಂದು ರಾಜ್ಯ ವುಶು ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಪಾಯದ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸ್ತ್ರೀಯರಿಗೆ ವುಶು, ಕರಾಠೆಗಳಂತಹ ಆತ್ಮರಕ್ಷಣಾ ಕಲೆಗಳು ಅವಶ್ಯಕವಾಗಿವೆ ಎಂದು ರಾಜ್ಯ ವುಶು ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಖಾಸಗಿ ಹೋಟೆಲ್‌ನಲ್ಲಿ ನಡೆದ ವುಶು ಕ್ರೀಡೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ವುಶು ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ ಚಂದನಾ ವಿವೇಕಾನಂದ ಗರಸಂಗಿ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿನಿಯರು, ಮಹಿಳೆಯರು ಶಿಕ್ಷಣ ಪಡೆಯಲು, ಉದ್ಯೋಗಕ್ಕೆ ಹೋಗುವಾಗ ಅದರಲ್ಲೂ ವಿಶೇಷವಾಗಿ ರಾತ್ರಿ ಸಮಯದಲ್ಲಿ ಅಥವಾ ಒಬ್ಬೊಬ್ಬರೆ ಇದ್ದ ಸಮಯದಲ್ಲಿ ಕಿಡಿಗೇಡಿಗಳಿಂದ ಮತ್ತು ಇತರೆ ಸಂಕಷ್ಟ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ಕಲೆ ಸಹಾಯಕ್ಕೆ ಬರುತ್ತದೆ ಎಂದರು.

ಆಧುನಿಕತೆಯ ಭರಾಟೆಯಲ್ಲಿ ಪಾಲಕರು ಉದ್ಯೊಗಕ್ಕೆ ಹೋಗುವ ಮತ್ತು ಹಣ ಕೂಡಿಸುವತ್ತ ಗಮನಹರಿಸಿ ದಿನಬೆಳಗಾದರೆ ಸಂಜೆವರೆಗೆ ದುಡಿತದಲ್ಲೆ ಮಕ್ಕಳ ಭವಿಷ್ಯ ಮರೆತು ಕೇವಲ ಸಂಡೆ ಪಪ್ಪಾ ಸಂಡೆ ಮಮ್ಮಿ ಯಾಗಿ ಬಿಟ್ಟಿದ್ದಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವುದರ ಜೊತೆಗೆ ತಂದೆ-ತಾಯಿಗಳ ಬಗ್ಗೆ ಗೌರವ ಕುಂಠಿತಗೊಂಡಿದ್ದರಿಂದ ಇಂದು ವೃದ್ಧಾಶ್ರಮಗಳು ತಲೆಯತ್ತಿವೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ, ಇಂದು ಶಿಕ್ಷಣವಂತರೇ ತಪ್ಪುದಾರಿ ಹಿಡಿಯುತ್ತಿರುವುದು ದುರಂತ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ರಾಜ್ಯ ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶೋಕ ಮೋಕಾಶಿ, ತರಬೇತುದಾರ ಸಂಗಮೇಶ ಲಾಯದಗುಂದಿ ಇದ್ದರು.

ಕಾವ್ಯ ಮತ್ತು ಅಂಜಲಿ ಸಹೋದರಿಯರ ಪ್ರಾರ್ಥಿಸಿದರು. ಗುರುನಾಥ ತಳವಾರ ಸ್ವಾಗತಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು. ಸಮೀರ ಅಲಿ ರಫೂಗರ ವಂದಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅಭಿಮಾನಿಗಳು ಚಂದನಾ ಗರಸಂಗಿಗೆ ಫಲಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.

ಛಲವಾದಿ ಸಮಾಜದ ರಾಜ್ಯ ಅಧ್ಯಕ್ಷ, ಚಿತ್ರನಟ ದಿ.ಕೆ. ಶಿವರಾಮ ಹಾಗೂ ಬಾಗಲಕೋಟೆಯ ಹಿರಿಯ ಪತ್ರಕರ್ತ ರಾಮ ಮನಗೂಳಿ ನಿಧನಕ್ಕೆ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗರಸಂಗಿ ದಂಪತಿ ವಿವೇಕಾನಂದ ಹಾಗೂ ಕಾವೇರಿ ಗರಸಂಗಿ ಅವರಿಗೂ ಸತ್ಕರಿಸಲಾಯಿತು.