ಹೆಣ್ಣು ಜನಿಸಿದರೆ ಹೆಮ್ಮೆ ಪಡುವ ಕಾಲ: ನ್ಯಾಯಾಧೀಶೆ ಕೆ.ಜಿ. ಶಾಂತಿ

| Published : Mar 14 2024, 02:03 AM IST

ಹೆಣ್ಣು ಜನಿಸಿದರೆ ಹೆಮ್ಮೆ ಪಡುವ ಕಾಲ: ನ್ಯಾಯಾಧೀಶೆ ಕೆ.ಜಿ. ಶಾಂತಿ
Share this Article
  • FB
  • TW
  • Linkdin
  • Email

ಸಾರಾಂಶ

ಭವಿಷ್ಯದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಕಲ್ಪಿಸಿಕೊಂಡು ಭಯಪಡುತ್ತಿದ್ದ ಪಾಲಕರಿಗೆ, ಪೋಷಕರಿಗೆ ಇಂದಿನ ಕಾಯ್ದೆ, ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆಯು ಧೈರ್ಯ, ಸ್ಥೈರ್ಯ, ಗೌರವ ನೀಡಿದೆ. ಹೆಣ್ಣು ಜನಿಸಿದರೆ ಹೆಮ್ಮೆಪಡುವ ಕಾಲ ಬಂದಿದೆ.

ಧಾರವಾಡ:

ಭವಿಷ್ಯದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಕಲ್ಪಿಸಿಕೊಂಡು ಭಯಪಡುತ್ತಿದ್ದ ಪಾಲಕರಿಗೆ, ಪೋಷಕರಿಗೆ ಇಂದಿನ ಕಾಯ್ದೆ, ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆಯು ಧೈರ್ಯ, ಸ್ಥೈರ್ಯ, ಗೌರವ ನೀಡಿದೆ. ಹೆಣ್ಣು ಜನಿಸಿದರೆ ಹೆಮ್ಮೆಪಡುವ ಕಾಲ ಬಂದಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಹೇಳಿದರು.ನಗರದ ಆಲೂರು ವೇಂಕಟರಾವ್ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಆಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಢಾವೋ ಜಾಗೃತಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಟುಂಬಕ್ಕಾಗಿ ಸರ್ವವನ್ನು ಸಮರ್ಪಿಸುವ ಹೆಣ್ಣು ತನ್ನ ಆರೋಗ್ಯದ ಬಗ್ಗೆಯೂ ಕಾಳಜಿ, ಎಚ್ಚರಿಕೆ ವಹಿಸುವ ಅಗತ್ಯವಿದೆ. ಕೆಲಸದ ಒತ್ತಡ, ಮಾನಸಿಕ ಒತ್ತಡ ಮತ್ತು ವಿಶ್ರಾಂತಿ ರಹಿತ ಜೀವನಶೈಲಿಯಿಂದ ಅನೇಕ ರೀತಿಯ ರೋಗ ರುಜಿನ ಹೆಣ್ಣುಮಕ್ಕಳನ್ನು ಬಾಧಿಸುತ್ತಿವೆ. ಸರಿಯಾದ ಸಮಯಕ್ಕೆ ಅಗತ್ಯ ಚಿಕಿತ್ಸೆ ಲಭಿಸದೆ ಅನೇಕ ಮಧ್ಯ ವಯಸ್ಕ ಮಹಿಳೆಯರು ಕ್ಯಾನ್ಸರ್, ಹೃದಯಾಘಾತ, ರಕ್ತಹೀನತೆ, ರಕ್ತದೊತ್ತಡ, ಮಧುಮೇಹದಂತ ವಿವಿಧ ರೀತಿಯ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಧನಾತ್ಮಕ ಚಿಂತನೆ ಮತ್ತು ಸಂಗೀತ, ಸಾಹಿತ್ಯ ಆಸ್ವಾದನೆ, ಕಥೆ-ಕಾದಂಬರಿ ಓದು, ಮನರಂಜನೆ ಆಟಗಳು ಮಹಿಳೆಯರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ ಎಂದರು.ಭೇಟಿ ಬಚಾವೋ ಭೇಟಿ ಪಡಾವೋ ಜಾಗೃತಿಯ ಕಾರ್ಯಕ್ರಮವನ್ನು ಪ್ರತಿಯೊಂದು ಜಿಲ್ಲೆ ಮತ್ತು ರಾಷ್ಟ್ರಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಹೆಣ್ಣು ಮಕ್ಕಳ ತಾಯಂದಿರಿಗೆ ಮಾನಸಿಕ ಸಾಮರ್ಥ್ಯ, ಧೈರ್ಯ ತುಂಬಿಸುವಂತಹ ಒಂದು ಹಣಕಾಸಿನ ಯೋಜನೆಯಾಗಿ ಸುಕನ್ಯಾ ಸಮೃದ್ಧಿ ಬಂದು ನಿಂತಿದೆ. ಪ್ರತಿಯೊಬ್ಬರು ಇಂತಹ ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಆರ್ಥಿಕ ಸಬಲತೆ, ಸ್ವಾವಲಂಬತೆ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಮಹಿಳೆಯರ ಸುರಕ್ಷತೆ, ಸುಭದ್ರತೆಗೆ ಬರೀ ಕಾನೂನು ಬಂದರೆ ಸಾಲದು. ಅದರ ಸದುಪಯೋಗವನ್ನು ಹೆಣ್ಣುಮಕ್ಕಳು ಪಡೆದುಕೊಳ್ಳುವಂತಾಗಬೇಕು. ಹೆಣ್ಣು ಮಕ್ಕಳಿಗೆ ಅವರು ಸ್ವಯಂ ಉದ್ಯೋಗಿಗಳಾಗಲು, ಸ್ವಾವಲಂಬಿಗಳಾಗಲು ಬೆಂಬಲಿಸಿಬೇಕೆಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ ಮಾತನಾಡಿ, ಮೊದಲು ಮಹಿಳೆಯರಿಗೆ ಉದ್ಯೋಗ ಸೇರಿ ವಿಶೇಷ ವಲಯಗಳಲ್ಲಿ ಯಾವುದೇ ರೀತಿ ಅವಕಾಶವಿರಲಿಲ್ಲ. ಅವರ ಸಾಮರ್ಥ್ಯ ಶಕ್ತಿ ಎಷ್ಟು ಅಂತ ಗೊತ್ತಿರಲಿಲ್ಲ. ಸ್ವಾತಂತ್ರ‍್ಯದ ನಂತರದಲ್ಲಿ ಸಂವಿಧಾನದ ಮೂಲಕವಾಗಿ ಲಿಂಗ ತಾರತಮ್ಯವಿಲ್ಲದೆ, ಎಲ್ಲರಿಗೂ ಸಮಾನವಾದ ಅವಕಾಶ ಲಭಿಸಿವೆ ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಯೋಜನಾ ನಿರ್ದೇಶಕಿ ಭಾರತಿ ಶೆಟ್ಟರ ಮಾತನಾಡಿದರು.ಡಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಡಿ.ಜೆ. ಅನಂತರಾಮು ಒತ್ತಡ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿ ಅನುಪಮಾ ಅಂಗಡಿ ವಂದಿಸಿದರು.