ಪ್ಯಾಸ್ ಫೌಂಡೇಶನ್ ನಿಸ್ವಾರ್ಥ ಸೇವೆ ಶ್ಲಾಘನೀಯ

| Published : May 02 2025, 12:17 AM IST

ಸಾರಾಂಶ

ಪ್ಯಾಸ್ ಫೌಂಡೇಶನ್ ಕಳೆದ 8- 9 ವರ್ಷಗಳಿಂದ ಉತ್ತಮವಾಗಿ ಕೆಲಸ ಮಾಡುತ್ತಿದೆ. ನೀರಿನ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿರುವುದು ದೇವರ ಕೆಲಸಕ್ಕೆ ಸಮನಾದುದು. ಸ್ವಾರ್ಥರಹಿತವಾಗಿ ಪ್ಯಾಸ್ ಫೌಂಡೇಶನ್ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ಯಾಸ್ ಫೌಂಡೇಶನ್ ಕಳೆದ 8- 9 ವರ್ಷಗಳಿಂದ ಉತ್ತಮವಾಗಿ ಕೆಲಸ ಮಾಡುತ್ತಿದೆ. ನೀರಿನ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿರುವುದು ದೇವರ ಕೆಲಸಕ್ಕೆ ಸಮನಾದುದು. ಸ್ವಾರ್ಥರಹಿತವಾಗಿ ಪ್ಯಾಸ್ ಫೌಂಡೇಶನ್ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಗಜಪತಿಯಲ್ಲಿ ಬುಧವಾರ ಪ್ಯಾಸ್ ಫೌಂಡೇಶನ್ ಅಭಿವೃದ್ಧಿಪಡಿಸಿದ ಕೆರೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ರಾಜಕಾರಣಿಗಳು ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಆದರೆ, ನಿಸ್ವಾರ್ಥವಾಗಿ ಕೆಲಸ ಮಾಡುವುದು ದೇವರ ಕೆಲಸ ಮಾಡಿದಂತೆ. ಅಂತಹ ಪ್ಯಾಸ್ ಫೌಂಡೇಶನ್ ಕೆಲಸ ಇನ್ನಷ್ಟು ದೊಡ್ಡದಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.ಈ ಭಾಗದಲ್ಲಿ ಮೊದಲು ಕೆರೆ ತುಂಬುವ ಯೋಜನೆಯ ಪರಿಕಲ್ಪನೆಯೇ ಇರಲಿಲ್ಲ. ಕೆರೆ ತುಂಬುವ ಯೋಜನೆ ಎಂದರೇನೆಂದೇ ಈ ಭಾಗದ ಜನರಿಗೆ ಗೊತ್ತಿರಲಿಲ್ಲ. ಕೇವಲ ದಕ್ಷಿಣಕರ್ನಾಟಕ ಭಾಗದವರು ಯೋಜನೆ ತೆಗೆದುಕೊಂಡು ಹೋಗುತ್ತಿದ್ದರು. ನಾನು ಶಾಸಕಿಯಾದ ತಕ್ಷಣ ಕೆರೆ ತುಂಬುವ ಯೋಜನೆ ಕೈಗೆತ್ತಿಕೊಂಡಿದ್ದೇನೆ. ನಮ್ಮ ಗ್ರಾಮೀಣ ಕ್ಷೇತ್ರಕ್ಕೆ ಕೆರೆ ತುಂಬುವ ಯೋಜನೆಗೆ ಸುಮಾರು₹ 900 ಕೋಟಿ ಅನುದಾನ ತಂದಿದ್ದೇನೆ ಎಂದರು.ಭೂಮಿಯಲ್ಲಿ ಶೇ.70ಷ್ಟು ನೀರಿದ್ದರೂ ಬಳಸಬಹುದಾದ ನೀರಿನ ಪ್ರಮಾಣ ಕೇವಲ ಶೇ.3ರಷ್ಟು ಮಾತ್ರ. ಹಾಗಾಗಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ದಿಸೆಯಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಜಲಮೂಲಗಳನ್ನು ರಕ್ಷಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ವಿನಂತಿಸಿದರು.

ಜಿನಾಬಕುಲ್ ಫೋರ್ಜ್ ಪ್ರೈವೇಟ್ ಲಿಮಿಟೆಡ್ ನ ಆರ್ಥಿಕ ಸಹಕಾರದೊಂದಿಗೆ ಪ್ಯಾಸ್ ಫೌಂಡೇಷನ್ ವತಿಯಿಂದ ಪುನರುಜ್ಜೀವನಗೊಳಿಸಿದ ಕೆರೆಯನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಯಿತು.ಈ ವೇಳೆ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಪ್ಯಾಸ್ ಫೌಂಡೇಶನ್‌ ಅಧ್ಯಕ್ಷ ಡಾ.ಮಾಧವ್ ಪ್ರಭು, ಉಪಾಧ್ಯಕ್ಷ ಅಭಿಮನ್ಯು ಡಾಗಾ, ಕಾರ್ಯದರ್ಶಿ ಪ್ರೀತಿ ಕೋರೆ, ಸದಸ್ಯರಾದ ಸೂರ್ಯಕಾಂತ ಹಿಂಡಾಲ್ಗೆಕರ್, ಅವಧೂತ ಸಾಮಂತ, ದೀಪಕ್ ಓವುಳಕರ್, ಸತೀಶ ಲಾಡ್, ರೋಹನ ಕುಲಕರ್ಣಿ, ಲಕ್ಷ್ಮೀಕಾಂತ ಪಸಾರೆ, ರಮೇಶ ಪಾಟೀಲ, ಜಿನಾಬಕುಲ್ ಫೋರ್ಜ್ ನ ಬಾಳು ಬದನ್, ಕಿರಣ ಜಿನಗೌಡ, ಸಂತೋಷ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶೋಭಾ ಕುರುಬರ್, ಉಪಾಧ್ಯಕ್ಷ ಸುನಿಲ್ ದಳವಾಯಿ ಮತ್ತಿತರರು ಉಪಸ್ಥಿತರಿದ್ದರು.