ಸಾರಾಂಶ
ಮತ್ತೆ ‘ಲಿಂಗಾಯತ ಪ್ರತ್ಯೇಕ ಧರ್ಮ’ದ ಕೂಗು ಮುನ್ನಲೆಗೆ ಬಂದಿದೆ. ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲೇಬೇಕು ಎಂದು ಪಟ್ಟು ಹಿಡಿದಿರುವ ಹಲವು ಸ್ವಾಮೀಜಿಗಳು, ಮುಖಂಡರು ಮತ್ತೊಂದೆಡೆ, ಸಮೀಕ್ಷೆ ಸಮಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬರೆಸಲೂ ಕರೆ ನೀಡಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾದ ಬೆನ್ನಲ್ಲೇ ಮತ್ತೆ ‘ಲಿಂಗಾಯತ ಪ್ರತ್ಯೇಕ ಧರ್ಮ’ದ ಕೂಗು ಮುನ್ನಲೆಗೆ ಬಂದಿದೆ. ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲೇಬೇಕು ಎಂದು ಪಟ್ಟು ಹಿಡಿದಿರುವ ಹಲವು ಸ್ವಾಮೀಜಿಗಳು, ಮುಖಂಡರು ಮತ್ತೊಂದೆಡೆ, ಸಮೀಕ್ಷೆ ಸಮಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬರೆಸಲೂ ಕರೆ ನೀಡಿದ್ದಾರೆ.
ಇದೇ ವೇಳೆ, ‘ಕೇಂದ್ರ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ತಿರಸ್ಕರಿಸಿಲ್ಲ. ಈ ಬಗ್ಗೆ ಪುನಃ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಹೋರಾಟದ ರೂಪುರೇಷೆ ಮತ್ತೆ ಸಿದ್ಧಪಡಿಸುತ್ತೇವೆ’ ಎಂದು ಲಿಂಗಾಯತ ನಾಯಕರು ಹೇಳಿದ್ದಾರೆ.
ಅ.5 ರಂದು ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಬಸವ ಸಾಂಸ್ಕೃತಿಕ ಅಭಿಯಾನ’ದ ಸಮಾರೋಪ ಸಮಾರಂಭಕ್ಕೆ ಸಂಬಂಧಿಸಿ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಲವು ಸ್ವಾಮೀಜಿಗಳು, ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಪ್ರತಿಪಾದಿಸಿದರು.
ಲಿಂಗಾಯತ ಮಠಾಧೀಶರ ಒಕ್ಕೂಟದ ಮುಖ್ಯಸ್ಥರಾಗಿರುವ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು ಮಾತನಾಡಿ, ಸಮೀಕ್ಷೆ ಸಮಯದಲ್ಲಿ ಇತೆರೆ ಕಾಲಂನಲ್ಲಿ ಲಿಂಗಾಯತ ಧರ್ಮ ಎಂದು ಬರೆಸಲು ಈಗಾಗಲೇ ನಾವು ಸಮುದಾಯಕ್ಕೆ ಕರೆ ನೀಡಿದ್ದೇವೆ. ಒಕ್ಕೂಟದಲ್ಲಿ 400ಕ್ಕೂ ಅಧಿಕ ಸ್ವಾಮೀಜಿಗಳಿದ್ದು ಒಮ್ಮತವಿದೆ. ಆದರೆ ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದರು.
ಭಾನುವಾರ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ 500ಕ್ಕೂ ಅಧಿಕ ಬಸವಣ್ಣನವರ ಸಿದ್ಧಾಂತ ಒಪ್ಪುವ ಶ್ರೀಗಳು, ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ. ನಮ್ಮ ಬೇಡಿಕೆಯಂತೆ ಬಸವಣ್ಣನನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಬಸವಧರ್ಮ ಪೀಠದ ಮಾತೆ ಗಂಗಾದೇವಿ, ಅಥಣಿ ಮೋಟಗಿ ಮಠದ ಪ್ರಭು ಚೆನ್ನಬಸವ ಸ್ವಾಮೀಜಿ, ಬೆಳಗಾವಿಯ ನಾಗನೂರು ಮಠದ ಅಲ್ಲಮಪ್ರಭು ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಭಾರತದಲ್ಲಿ ಜನಿಸಿದವರೆಲ್ಲರೂ ಸಾಂಸ್ಕೃತಿಕ ದೃಷ್ಟಿಯಿಂದ ಹಿಂದೂಗಳಾಗಿದ್ದಾರೆ. ಆದರೆ ಧರ್ಮ ಮತ್ತು ಜಾತಿಗಳ ನಡುವೆ ಗೊಂದಲ ಮಾಡಿಕೊಳ್ಳಬಾರದು. ಸಮೀಕ್ಷೆ ವೇಳೆ ಧರ್ಮದ ಇತರೆ ಕಾಲಂನಲ್ಲಿ ಲಿಂಗಾಯತರು ಬರೆಸಿದರೂ ಅವರನ್ನು ಹಿಂದೂ ಎಂದೇ ಪರಿಗಣಿಸಲಾಗುವುದು ಎಂದು ಕೆಲವರು ಹೇಳಿಕೆ ನೀಡಿದ್ದು ಇದಕ್ಕೆ ಕಿವಿಗೊಡಬೇಡಿ.
-ಶಿವರುದ್ರ ಸ್ವಾಮೀಜಿ, ಬೇಲಿಮಠ
ಹೋರಾಟ ಕುಂದಿದರೂ ಕೂಗು
ಹಾಗೆಯೇ ಇದೆ: ಜಾಮದಾರ್
ರಾಜಕೀಯ ಹಿತಾಸಕ್ತಿಯಿಂದಾಗಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಕುಂದಿರಬಹುದು. ಆದರೆ ನಮ್ಮ ಕೂಗು ಹಾಗೆಯೇ ಇದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ತಣ್ಣಗಾಗಿಲ್ಲ. ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಇತರೆಯಲ್ಲಿ ಲಿಂಗಾಯತ ಎಂದು ಬರೆಸಲು ಈಗಾಗಲೇ ಹಲವು ಸ್ವಾಮೀಜಿಗಳು ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ತಿರಸ್ಕರಿಸಿಲ್ಲ. ಮೂರು ಕಾರಣಗಳನ್ನು ಕೇಳಿದೆ. ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಿದ್ದೇವೆ. ಹೋರಾಟದ ರೂಪುರೇಷೆ ಮತ್ತೆ ಸಿದ್ಧಪಡಿಸುತ್ತೇವೆ. ಕೇಂದ್ರ, ರಾಜ್ಯಕ್ಕೂ ಪತ್ರ ಬರೆಯುತ್ತೇವೆ ಎಂದು ವಿವರಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))