ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ: ಶಿವಾನಂದ ಮುಕ್ತೆದಾರ

| Published : Jun 11 2024, 01:31 AM IST

ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ: ಶಿವಾನಂದ ಮುಕ್ತೆದಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಔರಾದ್ ತಾಲೂಕು ಘಟಕದಿಂದ ಸಂತಪೂರಿನ ಅನುಭವ ಮಂಟಪದಲ್ಲಿ ಪ್ರೊ. ಬಿ.ಕೃಷ್ಣಪ್ಪನವರ ಜಯಂತ್ಯುತ್ಸವ ನಿಮಿತ್ತ ಆಶಾ ಕಾರ್ಯಕರ್ತೆಯರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಜರುಗಿತು.

ಔರಾದ್: ಕೊರೋನಾ ಮತ್ತು ಲಾಕ್‌ಡೌನ್ ವಿಷಮ ಪರಿಸ್ಥಿತಿಯಲ್ಲಿ ಕೋವಿಡ್ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ತಳ ಹಂತದಿಂದ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾಗಿದೆ ಎಂದು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮುಕ್ತೆದಾರ ಹೇಳಿದರು.

ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಔರಾದ್ ತಾಲೂಕು ಘಟಕದಿಂದ ಸಂತಪೂರಿನ ಅನುಭವ ಮಂಟಪದಲ್ಲಿ ಪ್ರೊ. ಬಿ.ಕೃಷ್ಣಪ್ಪನವರ ಜಯಂತ್ಯುತ್ಸವ ಪ್ರಯುಕ್ತ ಆಯೋಜಿಸಿರುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇಡೀ ಜಗತ್ತು ಲಾಕ್‌ಡೌನ್‌ನಿಂದ ಸ್ತಬ್ಧಗೊಂಡಿದೆ. ಎಲ್ಲಾ ಸಾರ್ವಜನಿಕರು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ವೈದ್ಯಕೀಯ ಸೇವೆ ಭಾಗವಾಗಿ ಆಶಾ ಕಾರ್ಯಕರ್ತೆಯರು ತಮ್ಮ ಎಲ್ಲ ವೈಯಕ್ತಿಕ ಕಷ್ಟಗಳನ್ನು ಬದಿಗೊತ್ತಿ ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.

ಸಂಜುಕುಮಾರ ಲಾಧ ಮಾತನಾಡಿ, ಸಮಾಜಮುಖಿ ಆಲೋಚನೆ ಮೈಗೂಡಿಸಿಕೊಂಡಿದ್ದ ಪ್ರೊ. ಬಿ.ಕೃಷ್ಣಪ್ಪ ಶೋಷಿತರ ಶ್ರೇಯಸಿಗೆ ಪ್ರತ್ಯೇಕ ಸಂಘಟನೆ ಹುಟ್ಟುಹಾಕಿದ ಸಾಮಾಜಿಕ ಚಿಂತಕ. ಪ್ರೊ.ಬಿ.ಕೃಷ್ಣಪ್ಪನವರ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪೂರೆಯವರು ಕೂಡ ಜಿಲ್ಲೆಯ ಅನೇಕ ಭ್ರಷ್ಟಾಚಾರ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತುವ ಮೂಲಕ ನಿರಂತರವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿ ತಾಲೂಕಿನ ಸಮಾಜ ಸೇವೆಯಲ್ಲಿ ಅವರ ಸೇವೆ ಅನನ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಹಾಗೂ 20 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಲಿತ ಸಂಘರ್ಷ ಸಮಿತಿಯಿಂದ ಸನ್ಮಾನ ಮಾಡಲಾಯಿತು.

ವೈದ್ಯಾಧಿಕಾರಿ ಡಾ.ಅಬ್ದುಲ್ ವಾಜಿದ್, ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪೂರೆ, ಪತ್ರಕರ್ತ ಚನ್ನಬಸವ ಮುಕ್ತೆದಾರ, ಸತೀಶ ವಗ್ಗೆ, ಗಣಪತಿ ವಾಸುದೇವ, ಪ್ರಾಚಾರ್ಯ ನವೀಲಕುಮಾರ ಉತ್ಕಾರ, ಮನೋಹರ ನಿಟ್ಟೂರೆ, ನಾಗಶೆಟ್ಟಿ ಬಿಜಲವಾಡೆ, ಸುದೀರ್, ಪತ್ರಕರ್ತ ಶಿವಕುಮಾರ ಸಾದುರೆ, ಜೈಪ್ರಕಾಶ ಅಷ್ಟೂರೆ, ತುಕಾರಾಮ ಹಸನ್ಮುಖಿ, ನಿತೀಶ್ ಸಕಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.