ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ರೋಗಿಗಳ ಸೇವೆ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಕಾರ್ಯ. ವೈದ್ಯಕೀಯ ರಂಗದಲ್ಲಿ ರೋಗಿಗಳ ಆರೈಕೆ ಮಾಡುವ ನರ್ಸ್‌ಗಳ ಸೇವೆಗೆ ಬೆಲೆ ಕಟ್ಟಲಾಗದು. ಅವರು ಮಾಡುವ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಮುಧೋಳ ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ಹೇಳಿದರು.ನಗರದ ದಿ.ಡಾ.ವಿ.ಪಿ. ಕನಕರೆಡ್ಡಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ದೀಪ ಬೆಳಗಿಸುವ ಹಾಗೂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೇಡಿ ವಿತ್ ದಿ ಲ್ಯಾಂಪ್ ಎಂದೇ ಖ್ಯಾತಳಾದ ಇಟಲಿಯ ಪ್ಲಾರೆನ್ಸ್ ನೈಟಿಂಗೆಲ್ ಜಗತ್ತಿನ ಎಲ್ಲ ಬಡಜನರಿಗೆ ವೈದ್ಯಕೀಯ ನೆರವು ದೊರೆಯಬೇಕೆಂದು ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಜಾರಿಗೆ ತರಲು ಜೀವನವನ್ನೇ ಮೂಡಿಪಾಗಿಟ್ಟವರು. ಇಂದಿಗೂ ಈಕೆ ರೂಪಿಸಿದ ಸುಧಾರಣಾ ಕ್ರಮಗಳು ಜಗತ್ತಿನ ಎಲ್ಲ ಆಸ್ಪತ್ರೆಗಳೂ ಒಂದಲ್ಲ ಒಂದು ರೀತಿಯಲ್ಲಿ ಅನುಸರಿಸಲ್ಪಡುತ್ತಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹೃದಯರೋಗ ತಜ್ಞ ಡಾ.ಅಜಿತ ಕನಕರಡ್ಡಿ ಮಾತನಾಡಿ, ರೋಗಿಗಳ ಆರೋಗ್ಯದ ದೃಷ್ಟಿಯಿಂದ ನರ್ಸ್‌ಗಳ ಸೇವೆ ಅಗತ್ಯವಿದೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ರೋಗಿಗಳನ್ನು ಮುತುವರ್ಜಿಯಿಂದ ಆರೈಕೆ ಮಾಡಿ ಮಾನಸಿಕವಾಗಿ ಸದೃಢರನ್ನಾಗಿ ಮಾಡುವ ನರ್ಸಿಂಗ್ ಕ್ಷೇತ್ರಕ್ಕೆ ಹೆಚ್ಚೆಚ್ಚು ಜನ ಬರಬೇಕಿದೆ. ಈ ಕ್ಷೇತ್ರಕ್ಕೆ ಸರ್ಕಾರ ಕೂಡ ಸೂಕ್ತ ಬೆಂಬಲ ನೀಡುವ ಅಗತ್ಯವಿದೆ. ಈ ಕ್ಷೇತ್ರಕ್ಕೆ ವಿಶ್ವಮಟ್ಟದಲ್ಲಿ ಬೆಳಕು ಚೆಲ್ಲಿದ್ದು ಪ್ಲಾರೆನ್ಸ್ ನೈಟಿಂಗೆಲ್ ಅವರ ಮನೋಜ್ಞ ಸೇವೆಗೆ ಇಂದಿಗೂ ಜಗತ್ತು ಚಿರಋಣಿಯಾಗಿದೆ ಎಂದರು.ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಡಾ.ಸಂಜೀವ ತೇಲಿ ಮಾತನಾಡಿ, ಜಾಗತಿಕವಾಗಿ ಆಸ್ಪತ್ರೆಗಳಲ್ಲಿ ನರ್ಸ್‌ಗಳ ಕೊರತೆ ಇದ್ದು, ಭವಿಷ್ಯದ ದಿನಗಳಲ್ಲಿ ನರ್ಸಿಂಗ್ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ. ನರ್ಸಿಂಗ್ ಉತ್ತಮ ಪ್ರೊಫೆಷನಲ್ ವೃತ್ತಿಯಾಗಿದೆ. ನರ್ಸಿಂಗ್ ಮೆಡಿಕಲ್ ಒರಿಯೆಂಟೆಡ್ ಕೋರ್ಸ್ ಆಗಿದ್ದು. ವೈದ್ಯರಿಗೆ ಇರುವಷ್ಟೇ ಬೇಡಿಕೆ ಸರ್ಸ್‌ಗಳಿಗೂ ಇದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಕಷ್ಟವಾಗಿದೆ. ಆದರೆ ನರ್ಸಿಂಗ್ ಮಾಡಿದವರಿಗೆ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳುವ ಅವಕಾಶಗಳಿವೆ. ನರ್ಸ್ ಅಂದಾಕ್ಷಣ ಕೇವಲ ಮಹಿಳೆಯರೇ ಮಾಡಬೇಕೆಂದಿಲ್ಲ, ಪುರುಷರೂ ಈ ಕೋರ್ಸ್ ಮಾಡಬಹುದು, ಈ ಕ್ಷೇತ್ರದಲ್ಲಿ ಪುರುಷ ನರ್ಸ್‌ಗಳಿಗೆ ವಿಶ್ವದಾದ್ಯಂತ ಅಪಾರ ಬೇಡಿಕೆ ಇದೆ ಎಂದರು.
ಪತ್ರಕರ್ತ ಜಯರಾಮ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ.ರಾಜೇಶ ಮುರಗೋಡ, ಡಾ.ಅರ್ಜುನ ಕಾಮತ್ ಮಾತನಾಡಿದರು.ಡಾ.ಶರ್ವಾಣಿ ಕನಕರಡ್ಡಿ, ಡಾ.ರಾಜೇಶ ಮುರುಗೋಡ, ಪ್ರಾಚಾರ್ಯ ಜೂಲಿಯಾ ಜಾಧವ, ಡಾ.ಚಂದ್ರಕಾಂತ ಶೆಟ್ಟಿ, ಸವಿತಾ ಎಚ್, ಆನಂದ ಗೌಡರ, ಸಂಗೀತಾ ಎಸ್, ವಿನಾಯಕ ಬಿ, ಅರ್ಜುನ ಕಾಮತ, ಪತ್ರಕರ್ತರಾದ ಮಹೇಶ ಮನ್ನಯ್ಯನವರಮಠ ಉಪಸ್ಥಿತರಿದ್ದರು.ಡಾ.ಅಜೀತ ಕನಕರಡ್ಡಿ ಗಣ್ಯರು, ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.