ಸಾರಾಂಶ
ತುಮಕೂರು: ದಾದಿಯರ ನಿರಂತರ ಆರೋಗ್ಯ ಸೇವೆ ಆಸ್ಪತ್ರೆಯ ಎಲ್ಲಾ ಯಶಸ್ವಿ ಚಿಕಿತ್ಸೆಯ ಹಿಂದಿನ ಶಕ್ತಿಯಾಗಿದ್ದಾರೆ ಎಂದು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ ಹೇಳಿದರು. ನಗರದಲ್ಲಿ ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಉದ್ಘಾಟಿಸಿ ಮಾತನಾಡಿದರು. ರೋಗಿಗಳ ಸಂಪೂರ್ಣ ಆರೋಗ್ಯ ಸುಧಾರಣೆಯಲ್ಲಿ ಚಿಕಿತ್ಸೆ ನೀಡುವ ವೈದ್ಯರಷ್ಟೇ ಜವಾಬ್ದಾರಿಯನ್ನು ದಾದಿಯರು ಹೊರುತ್ತಾರೆ. ಅವರ ಸರ್ವಾಂಗೀಣ ಆರೋಗ್ಯ ಸುಧಾರಿಸಲು ಶುಶ್ರೂಷಕ ಸಿಬ್ಬಂದಿ ನೀಡುವ ಸೇವೆ, ಆತ್ಮಸ್ಥೈರ್ಯವೇ ಪ್ರಧಾನ ಪಾತ್ರ ವಹಿಸಲಿದೆ ಎಂದರು.ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ದಾದಿಯರು ರೋಗಿಗಳ ಆರೈಕೆಯನ್ನು ಉದ್ಯೋಗವೆಂದು ಪರಿಗಣಿಸದೆ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಆಸ್ಪತ್ರೆಯ ಕುರಿತಾದ ರೋಗಿಗಳ ಅಭಿಪ್ರಾಯ ಬದಲಾಗಲು ಸಾಧ್ಯವಿದೆ. ನಮ್ಮ ಆಸ್ಪತ್ರೆಯಲ್ಲಿ ೨೦೦ ಕ್ಕೂ ಹೆಚ್ಚು ದಾದಿಯರ ತಂಡವಿದ್ದು, ಕಳೆದ ಏಳು ವರ್ಷಗಳಿಂದ ನಿರಂತರ ಸೇವೆ ನೀಡುತ್ತಾ ರೋಗಿಗಳು ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ವೈದ್ಯಕೀಯ ಕಾಲೇಜು ಪ್ರಾಚರ್ಯ ಡಾ.ಶಾಲಿನಿ, ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ವಿಭಾಗದ ನಿರ್ದೇಶಕ ಡಾ.ಭಾನುಪ್ರಕಾಶ್, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ಸಿಇಒ ಡಾ.ಸಂಜೀವಕುಮಾರ್ ಹಾಗೂ ಆಸ್ಪತ್ರೆ ಶೂಶ್ರೂಷಕರ ತಂಡ ಉಪಸ್ಥಿತರಿದ್ದರು.