ಹಡಪದ ಅಪ್ಪಣ್ಣ ನಾಡು, ನುಡಿಗೆ ಸಲ್ಲಿಸಿದ ಸೇವೆ ಶ್ಲಾಘನೀಯ: ದಿನಕರ ಹೇರೂರು

| Published : Jul 11 2025, 01:47 AM IST

ಹಡಪದ ಅಪ್ಪಣ್ಣ ನಾಡು, ನುಡಿಗೆ ಸಲ್ಲಿಸಿದ ಸೇವೆ ಶ್ಲಾಘನೀಯ: ದಿನಕರ ಹೇರೂರು
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಗುರುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರು ಸುಮಾರು 12ನೇ ಶತಮಾನದಲ್ಲಿ ಸಮಾಜವು ಎದುರಿಸುತ್ತಿದ್ದ ಮೌಢ್ಯತೆಗಳನ್ನು ಧಿಕ್ಕರಿಸಿ, ಸಮಾನತೆಗಾಗಿ ಹೋರಾಡುವ ಮೂಲಕ ನಾಡು ನುಡಿಗಾಗಿ ಸಲ್ಲಿಸಿದ ಸೇವೆ ಶ್ಲಾಘನೀಯ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹೇಳಿದ್ದಾರೆ.ಗುರುವಾರ ನಗರದ ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಶಿವಶರಣ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.ದಾರ್ಶನಿಕರು ವಚನಗಳ ಮೂಲಕ ಬದುಕಿಗೆ ಮಾರ್ಗದರ್ಶನವನ್ನು ನೀಡಿದ್ದು, ವಿದ್ಯಾರ್ಥಿಗಳು ಅವುಗಳನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಆಳವಡಿಸಿಕೊಂಡು, ವಿವಿಧತೆಯನ್ನು ಕಂಡ ನಾಡಿನಲ್ಲಿ ಒಳ್ಳೆಯ ಪ್ರಜೆಯಾಗಿ ಜೀವನ ನಡೆಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದರು.

ಡಾ.ಟಿ.ಎಂ.ಎ ಪೈ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹಾಬಲೇಶ್ವರ ರಾವ್ ಮಾತನಾಡಿ, ವಚನಕಾರರು ಕಾಯಕವೇ ಶ್ರೇಷ್ಠವಾದದ್ದು, ಕಾಯಕದಲ್ಲಿ ಮೇಲು ಕೀಳು ಎಂಬ ಯಾವುದೇ ತಾರತಮ್ಯವಿಲ್ಲ, ಎಲ್ಲಾ ಕಾಯಕಗಳು ಸಮಾನತೆಯ ಒಟ್ಟು ಬಾಳ್ವೆಗೆ ಪೂರಕವಾಗಿದೆ ಎಂಬುವುದನ್ನು ತಿಳಿಸುವ ಮೂಲಕ ಶ್ರಮ ಗೌರವದ ತತ್ವವನ್ನು ಪ್ರತಿಪಾದಿಸಿದವರು ಎಂದರು.

ಸಾಂಸ್ಕೃತಿಕ ಚಿಂತಕ ಡಾ. ಶ್ರೀಕಾಂತ್ ಸಿದ್ದಾಪುರ ಶಿವಶರಣ ಹಡಪದ ಅಪ್ಪಣ್ಣರ ಕುರಿತು ವಿಶೇಷ ಉಪನ್ಯಾಸ ನೀಡಿ, ಶಿವಶರಣ ಹಡಪದ ಅಪ್ಪಣ್ಣ ಅವರ ಸಿದ್ದಾಂತದಂತೆ ಪ್ರತಿಯೊಬ್ಬರು ತಮ್ಮ ಕಾಯಕದ ಕುರಿತು ಯಾವುದೇ ಕೀಳರಿಮೆ ಇಲ್ಲದೆ ಗೌರವ ಮತ್ತು ಪ್ರಾಮಾಣಿಕತೆ ಹೊಂದಿದಾಗ ಮಾತ್ರ ಬದುಕಿನಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಸಮಾಜದಲ್ಲಿದ್ದ ಅಸಮಾನತೆ, ಅಸ್ಪೃಶ್ಯತೆ ಮೂಢನಂಬಿಕೆಯನ್ನು ಹೋಗಲಾಡಿಸಿ ಸಾಮಾಜಿಕ ಬದಲಾವಣೆಗಳಿಗಾಗಿ ಶ್ರಮಿಸಿದ ಶಿವಶರಣ ಹಡಪದ ಅಪ್ಪಣ್ಣ ರವರ ಬದುಕು ಆದರ್ಶಮಯ ಸಿದ್ದಾಂತ ನಮ್ಮೆಲ್ಲರಿಗೂ ಸ್ಪೂರ್ತಿ ಮತ್ತು ಮಾದರಿ ಎಂದರು.

ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ತೇಜಸ್ ಜೆ. ಬಂಗೇರ ನಿರೂಪಿಸಿ ವಂದಿಸಿದರು.