ಸಾರಾಂಶ
ಶಿರಸಿ: ತಾಲೂಕಿನ ಸೋದೆ ವಾದಿರಾಜ ಮಠದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭಾವಿಸಮೀರ ಶ್ರೀವಾದಿರಾಜ ಗುರು ಸಾರ್ವಭೌಮರ ಭವ್ಯ ಶಿಲಾಮಯ ಮಂದಿರವನ್ನು ಇನ್ನೆರಡು ವರ್ಷದಲ್ಲಿ ಪೂರ್ಣ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಸೋದೆ ವಾದಿರಾಜ ಮಠಾಧೀಶ ವಿಶ್ವವಲ್ಲಭ ತೀರ್ಥ ಶ್ರೀಪಾದರು ನುಡಿದರು.
ಶುಕ್ರವಾರ ತಾಲೂಕಿನ ಸೋದೆಯ ವಾದಿರಾಜ ಮಠದಲ್ಲಿ ಅಂದಾಜು ₹೫೦ ಕೋಟಿ ವೆಚ್ಚದ ಭಾವಿಸಮೀರ ಶ್ರೀವಾದಿರಾಜ ಗುರು ಸಾರ್ವಭೌಮರ ಭವ್ಯ ಶಿಲಾಮಯ ಮಂದಿರಕ್ಕೆ ಪಾದುಕಾನ್ಯಾಸ ನೆರವೇರಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಮಂದಿರ ನಿರ್ಮಾಣ ಮಾಡಲು ೭ ವರ್ಷದ ಹಿಂದೆ ಸಂಕಲ್ಪಿಸಿದ್ದೆವು. ಅದರ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗ ಪಾದುಕಾನ್ಯಾಸ ತನಕ ಬಂದಿದ್ದೇವೆ. ಹಲವು ಶೈಲಿಯಲ್ಲಿ ಈ ಮಂದಿರ ಬರಲಿದೆ. ಯಾವುದೇ ಕಾರ್ಯ ಎಷ್ಟು ಬೇಗ ಆಯಿತೆಂದುಕೊಳ್ಳುವುದು ಮುಖ್ಯವಲ್ಲ. ಎಷ್ಟು ಚೆನ್ನಾಗಿ ಆಯಿತು ಎಂಬುದು ಮುಖ್ಯ. ಕೆಲಸ ನಿಧಾನವಾಗಿ ಆಗಬೇಕು. ಮೂಲ ಗಟ್ಟಿಯಾಗಿ ಇದ್ದರೆ ಸದೃಢವಾಗಿ ಮಂದಿರ ನಿರ್ಮಾಣ ಆಗಲಿದೆ. ಪಾದುಕಾನ್ಯಾಸ ಕಾರ್ಯ ಇದೊಂದು ಐತಿಹಾಸಿಕ ಕ್ಷಣ. ಬಹು ವರ್ಷಗಳ ಕನಸು ನನಸಾಗುವ ಕ್ಷಣ ಎಂದ ಅವರು, ವಾದಿರಾಜರ ವ್ಯಕ್ತಿತ್ವ ವಿಶಾಲ, ಅಪರೂಪದ್ದು. ಅಖಂಡ ಭಾರತವನ್ನು ೪ ಬಾರಿ ಓಡಾಡಿದ್ದಾರೆ. ಅನೇಕ ದೇವಸ್ಥಾನಗಳ ನಿರ್ಮಾಣಕ್ಕೆ ಹರಿಕಾರ ಆಗಿದ್ದಾರೆ. ದೇವರ ದರ್ಶನ ನಡೆಸಿದ್ದಾರೆ. ಅನೇಕ ದೇವಾಲಯದ ನಿರ್ಮಾಣ ಮಾಡಿದವರು. ಭಗವಂತನ ಆರಾಧನೆಗೆ ಭಕ್ತರಿಗೆ ಅನುಕೂಲ ಮಾಡಿದವರು. ಅವರು ಕೊನೆಯದಾಗಿ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು, ಸೋದೆಯನ್ನು ಅವರ ವೃಂದಾವನಕ್ಕೆ ಶಿಲಾಮಯ ಮಂಟಪಕ್ಕೆ ಎಲ್ಲರ ಸಹಕಾರ ಬೇಕು ಎಂದರು.
ಬಳ್ಳಾರಿ ಸಂಸದ ಈ. ತುಕಾರಾಮ ಮಾತನಾಡಿ, ವಾದಿರಾಜರ ಸೇವೆ ಪೂರ್ವಜನ್ಮದ ಪುಣ್ಯ. ಗುರುಗಳ ಕೃಪೆಯಿಂದ ಸಂಸದನಾಗಿದ್ದೇನೆ. ಇಲ್ಲಿನ ಶಿಲಾಮಂಟಪ ಆದಷ್ಟು ಬೇಗ ಪೂರ್ಣವಾಗಲಿ. ೩೦೦ ವರ್ಷದ ಇತಿಹಾಸದಲ್ಲಿ ಗುರುವಿನ ಕೃಪೆಯಿಂದ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲೊ ಶಿಲಾಮಾಯ ದೇವಸ್ಥಾನ, ಮಾದರಿ ಶಾಲೆಗಳನ್ನು, ಹಳ್ಳಿಗೆ ತೆರಳಿ ಆರೋಗ್ಯ ಉಪಚಾರ ಮಾಡಲಾಗುತ್ತದೆ. ಸರಳವಾಗಿ ಬದುಕುವುದನ್ನು ಕಲಿಯಬೇಕು. ಮಠಗಳ, ಗುರುಗಳ ಆಶೀರ್ವಾದ ಸದಾ ಸಮಾಜದ ಮೇಲೆ ಇರಲಿ ಎಂದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜೀವನದ ಧನ್ಯತೆಯ ಪಾದುಕಾನ್ಯಾಸ ಕಾರ್ಯದಲ್ಲಿ ಭಾಗಿಯಾಗಿದ್ದೇವೆ. ಭಾರತಿಯರು ಜಗತ್ತಿಗೆ ಬೆಳಕು ಕೊಟ್ಟವರು. ಸೃಷ್ಟಿಯ ಸತ್ಯವನ್ನು ಜೀವನ ಸಮರ್ಪಿಸಿ ಋಷಿ- ಮುನಿಗಳು ಹುಡುಕಿದ ನೆಲ. ಎಲ್ಲರೂ ಸುಖವಾಗಿ ಇರಲಿ ಎಂಬ ಪೂರ್ವಜರ ಮಾತು ಹೇಳಿದ್ದರು. ಅದೇ ಪರಂಪರೆಯಲ್ಲಿ ಬಂದಿದ್ದು, ಅವರ ದಾರಿ ಸ್ಮರಿಸಿಕೊಳ್ಳಬೇಕು. ನಂಬಿಕೆಯಲ್ಲಿ ಬದುಕು ನಡೆಸಬೇಕು. ಸರ್ವರಿಗೂ ಒಳ್ಳೆಯದಾಗಲಿ. ಆ ಮೂಲಕ, ಜ್ಞಾನ ಸಂಪತ್ತನ್ನೂ ಉಳಿಸಿಕೊಳ್ಳಬೇಕು ಎಂಬ ಸಂಕಲ್ಪದೊಂದಿವೆ ಕೆಲಸ ಮಾಡಬೇಕು. ಸೋದೆ ಮಠವು ಎತ್ತರೆತ್ತರಕ್ಕೆ ಬೆಳೆಯುತ್ತಿದೆ. ಪುಣ್ಯದ ಭಾವ, ಪವಿತ್ರ ಮಂದಿರವಾಗಿ ಈ ಶಿಲಾಮಯ ಮಂದಿರ ಬೆಳೆಯಬೇಕು ಎಂದರು.
ಸೋದೆಯ ಅರಸು ವಂಶಸ್ಥ ಶ್ರೀಮಧುಲಿಂಗ ರಾಜೇಂದ್ರ ಒಡೆಯರ್, ಮಠದ ಶ್ರೀನಿವಾಸ ತಂತ್ರಿಗಳು ಇದ್ದರು. ವಿದ್ವಾನ್ ಗುರುರಾಜ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿಜಯೇಂದ್ರ ಆಚಾರ್ಯರು ನಿರ್ವಹಿಸಿದರು. ಮಧ್ವೇಶ ತಂತ್ರಿ ವಂದಿಸಿದರು.