ಮಳಿಗೆಗೆ ನಗರಸಭೆ ಜಡಿದ ಬೀಗ ತೆಗೆದು ವ್ಯಾಪಾರ

| Published : Dec 30 2024, 01:02 AM IST

ಸಾರಾಂಶ

ನಗರಸಭೆಯ ಒಟ್ಟು 63ವಾಣಿಜ್ಯ ಮಳಿಗೆಗಳಿದ್ದು, ವಾರ್ಷಿಕ 70ಲಕ್ಷ ಬಾಡಿಗೆ ವಸೂಲಿಯಾಗಬೇಕಿತ್ತು. ಆದರೆ, ಡಿಸೆಂಬರ್ ಕಳೆಯುತ್ತಾ ಬಂದರೂ ಕೇವಲ 40 ಲಕ್ಷ ವಸೂಲಿಯಾಗಿದೆ. ಇನ್ನೂ 30ಲಕ್ಷ ವಸೂಲಿಯಾಗಬೇಕಿದೆ. ನೋಟಿಸ್ ನೀಡಿದರು ಉತ್ತರಿಸುತ್ತಿಲ್ಲ ಎಂದು ನಗರಸಭೆ ಈಗ 17 ಅಂಗಡಿಗಳನ್ನು ಮುಚ್ಚಿಸಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿರುವ ನಗರಸಭೆಯ ತರಕಾರಿ ಮಾರುಕಟ್ಟೆಯ ವಾಣಿಜ್ಯ ಮಳಿಗೆಗಳ ಮಾಲಿಕರು ಕಳೆದ ಎರಡು ವರ್ಷದಿಂದ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಅಂತಹ ಮಳಿಗೆಗಳಿಗೆ ನಗರಸಭೆಯ ಅಧಿಕಾರಿಗಳು ಬೀಗ ಜಡಿದರು. ಆದರೆ ವ್ಯಾಪಾರಿಗಳು ಬೀಗ ತೆಗೆದು ಎಂದಿನಂತೆ ವ್ಯಾಪಾರ ನಡೆಸಿದ ಘಟನೆ ಪಟ್ಟಣದಲ್ಲಿ ನಡೆಯಿತು. ಈ ಬಗ್ಗೆ ನಗರಸಭೆ ಅಧಿಕಾರಿ ಮಧುಸೂಧನ್ ಪ್ರತಿಕ್ರಿಯಿಸಿ, ಒಟ್ಟು 63ವಾಣಿಜ್ಯ ಮಳಿಗೆಗಳಿದ್ದು, ವಾರ್ಷಿಕ 70ಲಕ್ಷ ಬಾಡಿಗೆ ವಸೂಲಿಯಾಗಬೇಕಿತ್ತು. ಆದರೆ, ಡಿಸೆಂಬರ್ ಕಳೆಯುತ್ತಾ ಬಂದರೂ ಕೇವಲ 40 ಲಕ್ಷ ವಸೂಲಿಯಾಗಿದೆ. ಇನ್ನೂ 30ಲಕ್ಷ ವಸೂಲಿಯಾಗಬೇಕಿದೆ. ನೋಟಿಸ್ ನೀಡಿದರು ಉತ್ತರಿಸುತ್ತಿಲ್ಲ. ಈಗ 17 ಅಂಗಡಿಗಳನ್ನು ಮುಚ್ಚಿಸಿದ್ದೇವೆ ಎಂದರು. ಬೀಗ ತೆಗೆದಿದ್ದಕ್ಕೆ ಆಕ್ಷೇಪ

ಆದರೆ ವರ್ತಕರು ನಗರಸಭೆಗೆ ಯಾವುದೇ ಮಾಹಿತಿ ನೀಡದೆ ಮಳಿಗೆಗಳ ಬೀಗವನ್ನು ತೆರವುಗೊಳಿಸಿ ಎಂದಿನಂತೆ ತಮ್ಮ-ತಮ್ಮ ವ್ಯಾಪಾರ ವಹಿವಾಟನ್ನು ನಡೆಸಿದರು. ಇದನ್ನು ತಿಳಿದು ನಗರಸಭೆ ಅಧ್ಯಕ್ಷ-ಲಕ್ಷ್ಮೀನಾರಾಯಣಪ್ಪ, ಅಧಿಕಾರಗಳ ಜೊತೆಯಲ್ಲಿ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ವರ್ತಕರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ವರ್ತಕರು, ನಾವು ಬಾಡಿಗೆ ಕಟ್ಟುವುದಿಲ್ಲವೆಂದು ಹೇಳುವುದಿಲ್ಲ, ಕಳೆದ ೨೦ವರ್ಷಗಳಿಂದ ನಮಗೆ ಮೂಲಭೂತ ಸೌಕರ್ಯಗಳಿಲ್ಲ, ಮಳೆ ಬಂದರೆ ನೆಲಮಹಡಿ ಕೆಸರುಗದ್ದೆಯಂತಾಗುತ್ತದೆ, ವ್ಯಾಪಾರ ಮಾಡಲು ಬಂದಂತಹ ಗ್ರಾಹಕರು ಮೂಗುಮುಚ್ಚಿ ಓಡಾಡುತ್ತಾರೆ., ಶೌಚಾಲಯಗಳಿಲ್ಲ, ಮಾರ್ಕೆಟ್ ಸಂಪೂರ್ಣ ಕತ್ತಲುಮಯವಾಗಿದೆ, ವಾಹನ ನಿಲುಗಡೆ ವ್ಯವಸ್ಥೆ ಇರುವುದಿಲ್ಲ.ಅಗತ್ಯ ಸೌಲಭ್ಯ ಕಲ್ಪಿಸಿ

ತರಕಾರಿ ಮಾಡುಕಟ್ಟೆ ಸುತ್ತಲೂ ಬಾಡಿಗೆ ಕಟ್ಟದೆ ಮಾರ್ಕೆಟ್‌ ಮುಂಭಾಗ ಒತ್ತುವರಿ ಮಾಡಿಕೊಂಡಿರುವ ಮತ್ತು ತಳ್ಳುವಬಂಡಿಗಳಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳನ್ನು ಸ್ಥಳಾಂತರಿಸಿದಲ್ಲಿ ನಮಗೆ ಅನುಕೂಲವಾಗಲಿದೆ. ಇಷ್ಟೆಲ್ಲಾ ಅವ್ಯವಸ್ಥೆಗಳು ಇದ್ದರೂ ಸಹ ಸರಿಪಡಿಸದೆ ನಗರಸಭೆಯವರು ನಮ್ಮನ್ನು ಬಾಡಿಗೆ ಕಟ್ಟಿಎಂದು ಕೇಳುವುದು ಸರಿಯಲ್ಲ ಎಂದು ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯ ಹಾಗೂ ವ್ಯಾಪಾರಿ ಮಾರ್ಕೆಟ್ ಮೋಹನ್ ಎಲ್ಲ ವರ್ತಕರ ಪರವಾಗಿ ಮಾತನಾಡಿ, ಬಾಡಿಗೆಯನ್ನು ಹಂತಹಂತವಾಗಿ ಪಾವತಿಸಲು ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿ ಮಧುಸೂದನ್ ಹಾಗೂ ವ್ಯಾಪಾರಸ್ಥ ವರ್ತಕರು ಹಾಗೂ ಸಾರ್ವಜನಿಕರು ಇದ್ದರು.ಕೋಟ್‌................ ವರ್ತಕರು ನಗರಸಭೆ ಅಧಿಕಾರಿಗಳ ಗಮನಕ್ಕೆ ತಿಳಿಸದೆ ಅಂಗಡಿ ಬೀಗಗಳನ್ನು ಮುರಿದು ವ್ಯಾಪಾರ ನಡೆಸುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ. ವ್ಯಾಪಾರಸ್ಥರ ಸಮಸ್ಯೆ ಪರಿಹರಿಸಲು ಶಾಸಕರನ್ನು ಸಂಪರ್ಕಿಸಿ ಚರ್ಚಿಸಲಾಗುವುದು. ವರ್ತಕರಿಗೆ ಮಳಿಗೆಗೆಳ ಬಾಡಿಗೆ ಪಾವತಿಸಲಿ.

-- ಲಕ್ಷ್ಮೀನಾರಾಯಣಪ್ಪ, ನಗರಸಭೆ ಅಧ್ಯಕ್ಷ