ಕನ್ನಡಪ್ರಭ ವಾರ್ತೆ ಬೆಳಗಾವಿ ಕಳೆದ ಅಧಿವೇಶನದ ವೇಳೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆದ ಹೋರಾಟದ ವೇಳೆ ಪೊಲೀಸರು ನಡೆಸಿದ್ದ ದೌರ್ಜನ್ಯ ಖಂಡಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಪಂಚಮಸಾಲಿ ಸಮಾಜದ ಹೋರಾಟಗಾರರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಳೆದ ಅಧಿವೇಶನದ ವೇಳೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆದ ಹೋರಾಟದ ವೇಳೆ ಪೊಲೀಸರು ನಡೆಸಿದ್ದ ದೌರ್ಜನ್ಯ ಖಂಡಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಪಂಚಮಸಾಲಿ ಸಮಾಜದ ಹೋರಾಟಗಾರರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದರು.ನಗರದ ಗಾಂಧಿ ಭವನದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕರಾದ ಅರವಿಂದ ಬೆಲ್ಲದ, ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ಸಿ.ಸಿ.ಪಾಟೀಲ ನೇತೃತ್ವದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿದ ಹೋರಾಟಗಾರರು ಕೈಯಲ್ಲಿ ಧ್ವಜ ಹಿಡಿದು ಮೌನ ಪ್ರತಿಭಟನೆ ಆರಂಭಿಸಿದರು. ಪ್ರತಿಭಟನಾ ರ್‍ಯಾಲಿಯೂ ಕಾಲೇಜು ರಸ್ತೆಯಿಂದ ಚನ್ನಮ್ಮವೃತ್ತದ ಮೂಲಕ ಹಾಯ್ದು ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಾಗಿತು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಚನ್ನಮ್ಮ ವೃತ್ತದಲ್ಲಿ ಪ್ರತಿಭಟನಾಕಾರರು ರಸ್ತೆಯ ಮೇಲೆಯೇ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಿದರು. ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ತೆರಳಿದ ರ್‍ಯಾಲಿಯನ್ನು ಪೊಲೀಸರು ತಡೆದರು. ಧರಣಿ ಕುಳಿತಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತೆರಳಿತು. ಈ ವೇಳೆ ಪೊಲೀಸ್ ಅಧಿಕಾರಿಗಳು ಶಾಸಕ ಅರವಿಂದ ಬೆಲ್ಲದ ಅವರನ್ನು ಹೊತ್ತೊಯ್ದುಕೊಂಡು ವಾಹನದಲ್ಲಿ ಕೂರಿಸಿದರು. ಬಳಿಕ ಒಬ್ಬೊಬ್ಬರನ್ನೇ ಪೊಲೀಸರು ವಶಕ್ಕೆ ಪಡೆದರು. ಆಗ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಪೊಲೀಸರು ವಶಕ್ಕೆ ಪಡೆದು, ವಾಹನದಲ್ಲಿ ಕೂರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಲಿಂಗಾಯತ ಪಂಚಮಸಾಲಿಗಳ ಮೇಲೆ ನಡೆದ ಪ್ರಹಾರದ ಕರಾಳ ದಿನ ನೆನಪು ಮಾಡಿ, ನಮ್ಮ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿದ್ದೇವೆ. ಮೀಸಲಾತಿ ಘೋಷಿಸುವ ವಿಚಾರದಲ್ಲಿ ಈ ಸರ್ಕಾರ ಮಲಗಿದೆ. ಜೊತೆಗೆ ಕೋರ್ಟ್ ಆದೇಶ ನೀಡಿದರೂ ಲಾಠಿ ಚಾರ್ಜ್ ನಡೆಸಿದ ಅಧಿಕಾರಿಗಳ ವಿರುದ್ಧ ಈವರೆಗೂ ಕ್ರಮ ಆಗಿಲ್ಲ. ಲಿಂಗಾಯತ ಸಮಾಜದ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ. ಸದನದಲ್ಲೂ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ನಮ್ಮ ಹೋರಾಟದ ಬಗ್ಗೆ ಧ್ವನಿ ಎತ್ತಿ ಬಂದಿದ್ದೇನೆ. ಸದನದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದ್ದಾರೆ. ನಾನು, ಬಸನಗೌಡ ಪಾಟೀಲ ಯತ್ನಾಳ್, ಸಿ.ಸಿ.ಪಾಟೀಲ, ಸಿದ್ದು ಸವದಿ ಸೇರಿ ಎಲ್ಲರೂ ಮಾತನಾಡುತ್ತೇವೆ ಎಂದರು.ಅಸಲು ಬಡ್ಡಿ ಸಮೇತ ತೀರಿಸುತ್ತಾರೆ- ಯತ್ನಾಳ:
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಪಂಚಮಸಾಲಿ ಮೀಸಲಾತಿ ವಿರುದ್ಧ ರಾಜ್ಯ ಸರ್ಕಾರ ಇದೆ. ಕಾಂಗ್ರೆಸ್ ಸರ್ಕಾರಕ್ಕೆ ಟಿಪ್ಪು ಜಯಂತಿ ಬೇಕಾಗಿದೆ. ನಮ್ಮ ಮೀಸಲಾತಿ ಬಗ್ಗೆ ಅವರಿಗೆ ಗಮನಕ್ಕಿಲ್ಲ. ಟಿಪ್ಪು ಜಯಂತಿ ವಿಚಾರವಾಗಿ ಚರ್ಚೆ ಮಾಡಲು ನಿನ್ನೆ ಸದನಕ್ಕೆ ಸಿಎಂ ಬರಲಿಲ್ಲ. ಇನ್ನು ಕಳೆದ ವರ್ಷ ಡಿ.10ರಂದು ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ, ಹೋರಾಟಕ್ಕೆ ತೊಂದರೆ ಮಾಡಿದ್ದರು. ಆದರೂ, ಪಂಚಮಸಾಲಿ ಹೋರಾಟ ನಿಂತಿಲ್ಲ. ಮೀಸಲಾತಿ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಸಮಾಜದ ಇತರೆ ಜನಪ್ರತಿನಿಧಿಗಳು, ಸಚಿವರು, ಶಾಸಕರು ಹೋರಾಟದಲ್ಲಿ ಭಾಗಿಯಾಗಿಲ್ಲ. ಜನರು ಐದು ವರ್ಷದ ಅವಧಿಗೆ ಮತ ಹಾಕಿದ್ದಾರೆ. ಚುನಾವಣೆ ನಡೆಯುವವರೆಗೂ ಅಧಿಕಾರ ಇರಲಿದೆ. ಮುಂದಿನ ಚುನಾವಣೆಯಲ್ಲಿ ಅಸಲು, ಬಡ್ಡಿ ಸಮೇತ ತೀರಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.---------
ಕೋಟ್...ಲಿಂಗಾಯತ ಪಂಚಮಸಾಲಿಗಳ ಮೇಲೆ ಮೊದಲ ಬಾರಿ ಸರ್ಕಾರ ದೌರ್ಜನ್ಯ ನಡೆಸಿದೆ. ಈ ಮೂಲಕ ಕರಾಳ ಘಟನೆಗೆ ಕಾರಣವಾಗಿದೆ. ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದ್ದರು. ಆ ಘಟನೆ ಖಂಡಿಸಿ ನಾವು ಮೌನ ಪ್ರತಿಭಟನೆ ಮಾಡುತ್ತಿದ್ದೇವೆ. ಮೀಸಲಾತಿ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ. ಸರ್ಕಾರ ಕೂಡಲೇ ನಮ್ಮ ಸಮುದಾಯದ ಕ್ಷಮೆ ಕೇಳಬೇಕು.
- ಬಸವಜಯ ಮೃತ್ಯುಂಜಯ ಸ್ವಾಮೀಜಿ