ಬಸವನಬಾಗೇವಾಡಿ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವ ನಿಮಿತ್ತ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ಸೋಮವಾರ ತೆರಳಿದ್ದ ಅಲಂಕೃತ ಮೂಲನಂದೀಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ಮಂಗಳವಾರ ನಸುಕಿನ ಜಾವ ಬಸವಣ್ಣನ ಕುದರಿ, ಶಿವಾನಂದ ಈರಕಾರಮುತ್ಯಾ ಅವರ ಹೇಳಿಕೆ ಬಳಿಕ ದೇವಸ್ಥಾನದಲ್ಲಿರುವ ಕಟ್ಟೆಗೆ ಮರಳುವ ಮೂಲಕ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವ ನಿಮಿತ್ತ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ಸೋಮವಾರ ತೆರಳಿದ್ದ ಅಲಂಕೃತ ಮೂಲನಂದೀಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ಮಂಗಳವಾರ ನಸುಕಿನ ಜಾವ ಬಸವಣ್ಣನ ಕುದರಿ, ಶಿವಾನಂದ ಈರಕಾರಮುತ್ಯಾ ಅವರ ಹೇಳಿಕೆ ಬಳಿಕ ದೇವಸ್ಥಾನದಲ್ಲಿರುವ ಕಟ್ಟೆಗೆ ಮರಳುವ ಮೂಲಕ ಸಂಪನ್ನಗೊಂಡಿತು.

ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ಸೋಮವಾರ ತೆರಳಿದ್ದ ಮೂಲನಂದೀಶ್ವರ(ಬಸವೇಶ್ವರ) ದೇವರ ಅಲಂಕೃತ ಬೆಳ್ಳಿ ಪಲ್ಲಕ್ಕಿ ಉತ್ಸವ ಸಂಜೆ ಆಕರ್ಷಕ ಸಿಡಿಮದ್ದು, ವಿವಿಧ ಕಲಾ ತಂಡಗಳೊಂದಿಗೆ ಪುರ ಪ್ರವೇಶ ಮಾಡಿದ ನಂತರ ಅದ್ಧೂರಿ ಮೆರವಣಿಗೆ ಮೂಲಕ ದೇವಸ್ಥಾನದ ಕಟ್ಟೆಗೆ ಮರಳಿತು. ಮಂಗಳವಾರ ನಸುಕಿನ ಜಾವ ಬಸವಣ್ಣನ ಕುದರಿ ಶಿವಾನಂದ ಈರಕಾರಮುತ್ಯಾ ಅವರು ಆಗಮಿಸಿದ ನಂತರ ಪಲ್ಲಕ್ಕಿ ಉತ್ಸವ ದೇವಸ್ಥಾನದ ಪ್ರಾಂಗಣದಲ್ಲಿ ಮೂರು ಪ್ರದಕ್ಷಿಣೆ ಹಾಕಿದ ನಂತರ ಶಿವಾನಂದ ಈರಕಾರಮುತ್ಯಾ ಅವರು ಈ ವರ್ಷದ ಮಳೆ-ಬೆಳೆ ಹೇಳಿಕೆ ನುಡಿದರು. ಈರಕಾರಮುತ್ಯಾ ನುಡಿದ ಹೇಳಿಕೆಯನ್ನು ಹಿರಿಯರಾದ ಬಸವರಾಜ ಹಾರಿವಾಳ ಅವರು ಕೇಳಿ ನೆರೆದ ಭಕ್ತಗಣಕ್ಕೆ ಧ್ವನಿವರ್ಧಕದ ಮೂಲಕ ಹೇಳಿದರು. ಹೇಳಿಕೆ ನುಡಿಯಾಗುತ್ತಿದ್ದಂತೆ ಪಲ್ಲಕ್ಕಿ ಇನ್ನೊಂದು ಪ್ರದಕ್ಷಿಣೆ ಹಾಕಿ ಸ್ವಸ್ಥಾನಕ್ಕೆ ಆಗಮಿಸುವ ಮೂಲಕ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿತ್ತು.

ಪಲ್ಲಕ್ಕಿ ಉತ್ಸವದಲ್ಲಿ ಬಸವರಾಜ ಹಾರಿವಾಳ, ಸಂಗಪ್ಪ ಡಂಬಳ, ಬಸಯ್ಯ ಮಠಪತಿ, ಪಾವಡೆಪ್ಪ ಕರಮಳಕರ, ಶರಣಪ್ಪ ಕೂಡಗಿ, ನಾಗಪ್ಪ ಬಾಡಗಿ, ಸಿದ್ದಲಿಂಗ ಪೂಜಾರಿ, ಗಿರೀಶ ಬಿರಾದಾರ, ಪುಟ್ಟು ಪಟ್ಟಣಶೆಟ್ಟಿ, ಅಶೋಕ ಗೌರನ್ನವರ, ಶಿವು ಸಿಂದಗಿ, ಕುಮಾರ ಒಣರೊಟ್ಟಿ, ಪರಶುರಾಮ ದೇವಕರ, ಸಿದ್ದು ಚವ್ಹಾಣ, ಪ್ರಭು ಮಾಲಗಾರ, ಮಂಜು ಹಾರಿವಾಳ, ಭೀಮು ನಿಕ್ಕಂ, ಮಲ್ಲು ಡೋಣೂರ, ಸಂತೋಷ ಕೂಡಗಿ, ಉಮಾ ರೇಶ್ಮಿ, ಸಂಗೀತಾ ತೆಲಗಿ, ಶಂಕ್ರೆಮ್ಮ ಹಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಬಾಕ್ಸ್: ಹೋರಿಮಟ್ಟಿ ಗುಡ್ಡಕ್ಕಿದೆ ಬಸವೇಶ್ವರರ ನಂಟು

ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರನ ವರಪ್ರಸಾದದಿಂದ ಮಾದಲಾಂಬಿಕೆ ಬಸವೇಶ್ವರರಿಗೆ ಜನ್ಮ ನೀಡಿದಳು ಎಂಬ ಪ್ರತೀತಿಯಿದೆ. ಬಸವೇಶ್ವರರು ಬಾಲ್ಯದಲ್ಲಿ ಜನ್ಮಸ್ಥಳ ಬಸವನಬಾಗೇವಾಡಿಯ ಮೂಲನಂದೀಶ್ವರ ದೇವಸ್ಥಾನ ಪ್ರಾಂಗಣ, ಬಾವಿಯ ಸುತ್ತಮುತ್ತ ತನ್ನ ಗೆಳೆಯರೊಂದಿಗೆ ಆಟ ಆಡುವ ಜತೆಗೆ ಸಮೀಪದ ಹೋರಿಮಟ್ಟಿ ಗುಡ್ಡದಲ್ಲಿಯೂ ಬಾಲ್ಯದಲ್ಲಿ ಆಟ, ಪೂಜೆ ಪುನಸ್ಕಾರ ಮಾಡಿದ್ದರು. ಇದರ ಸವಿನೆನಪಿಗಾಗಿ ಪಲ್ಲಕ್ಕಿ ಉತ್ಸವ ಹೋರಿಮಟ್ಟಿ ಗುಡ್ಡಕ್ಕೆ ತೆರಳಿ ಮರಳಿ ದೇವಸ್ಥಾನಕ್ಕೆ ಬರುತ್ತದೆ ಎಂಬ ಪ್ರತೀತಿ ಇದೆ.