ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಕಲಬುರಗಿಯಿಂದ ಬೆಂಗಳೂರುವರೆಗೆ ಮಾ.12, ಮಂಗಳವಾರದಿಂದ ಆರಂಭಗೊಳ್ಳುವ ಬಹು ನಿರೀಕ್ಷಿತ, ಮಹತ್ವಾಕಾಂಕ್ಷಿ ವಂದೇ ಭಾರತ್ ರೈಲು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲದಿರುವುದು ಹೋರಾಟದ ಕಿಚ್ಚಿಗೆ ಕಾರಣವಾಗಿದೆ.ಯಾದಗಿರಿಯಲ್ಲಿ ವಂದೇ ಭಾರತ್ ರೈಲು ನಿಲ್ಲದಿರುವುದನ್ನು ಖಂಡಿಸಿ, ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆಯ ಹಾದಿ ತುಳಿದಿವೆ. ಮಂಗಳವಾರ ಬೆಳಗ್ಗೆ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ರೈಲು ರೋಕೋ ಚಳವಳಿಗೆ ಸಂಘಟನೆಗಳು ನಿರ್ಧರಿಸಿದ್ದು, ಈ ಕುರಿತ ಹೋರಾಟದ ರೂಪುರೇಷೆಗಳು ನಡೆದಿವೆ.
ವಂದೇ ಭಾರತ್ ರೈಲು ಸೇರಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಮುಖ ರೈಲುಗಳನ್ನು ನಿಲ್ಲಿಸಬೇಕು, "ಸಿ " ಗ್ರೇಡ್‌ನಿಂದ "ಬಿ " ಗ್ರೇಡ್‌ಗೆ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಬೆಳಗ್ಗೆ ವಂದೇ ಭಾರತ್ ರೈಲು ತಡೆಗೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭೀಮುನಾಯಕ್ ತಿಳಿಸಿದ್ದಾರೆ. ಪ್ರತಿಭಟನೆ ಭಾಗವಾಗಿ ಕರವೇ ಕಾರ್ಯಕರ್ತರು ಈಗಾಗಲೇ ಇದಕ್ಕೆ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆಂದು ಭೀಮುನಾಯಕ್ "ಕನ್ನಡಪ್ರಭ "ಕ್ಕೆ ತಿಳಿಸಿದರು.ಇನ್ನು, ವಂದೇ ಭಾರತ್ ರೈಲು ನಿಲುಗಡೆ ಸೇರಿದಂತೆ ಇನ್ನಿತರ ರೈಲ್ವೆ ವಿಚಾರಗಳಲ್ಲಿ ಯಾದಗಿರಿಗೆ ಆಗುತ್ತಿರುವ ಅನ್ಯಾಯಗಳನ್ನು ಖಂಡಿಸಿ ರೈಲ್ವೆ ನಿಲ್ದಾಣದ ಬಳಿ ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣಶೆಟ್ಟಿ ಬಣ) ಉತ್ತರ ಕರ್ನಾಟಕ ವಲಯದ ಅಧ್ಯಕ್ಷ ಡಾ. ಶರಣು ಗದ್ದುಗೆ ತಿಳಿಸಿದ್ದಾರೆ.
ಇತ್ತ, ಕನ್ನಡಪರ ಸಂಘಟನೆಗಳ ರೈಲು ತಡೆ ಪ್ರತಿಭಟನೆಗಳ ಹೇಳಿಕೆಗಳಿಂದ ಯಾದಗಿರಿ ರೈಲು ನಿಲ್ದಾಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಸೋಮವಾರ ರಾತ್ರಿಯಿಂದಲೇ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಈ ಕ್ರಮವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಈ ಮಧ್ಯೆ, ಯಾದಗಿರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆ ಹಾಗೂ ಇನ್ನಿತರ ಮೂಲಸೌಕರ್ಯಗಳ ನೀಡುವಂತೆ ಆಗ್ರಹಿಸಿ ಯಾದಗಿರಿ ಸಮಾನಮನಸ್ಸುಗಳ ನಾಗರಿಕರ ತಂಡ ಒಂದಾಗಿವೆ. ರೈಲ್ವೆ ಸಚಿವರಿಗೆ ಕೂಗು ತಲುಪಿಸಲು ಸಂಘ ಸಂಸ್ಥೆಗಳು ಮುಂದಾಗಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಮೌನ ಚಳವಳಿ ಶುರುವಾಗಿದೆ.
ಯಾದಗಿರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ರೈಲ್ವೆ ಸಚಿವರಿಗೆ ಮನವಿ ಪತ್ರ ನೀಡಲಾಗಿದೆ ಎಂದು ಅಧ್ಯಕ್ಷ ದಿನೇಶ ಕುಮಾರ್ ಹೇಳಿದ್ದಾರೆ. ಅದರಂತೆ, ಭಾರತೀಯ ವೈದ್ಯಕೀಯ ಸಂಘ, ವಕೀಲರ ಸಂಘ, ಎಂಜಿನೀಯರ್ಸ್ ಅಸೋಶಿಯೇಷನ್, ಕಿರಾಣಾ ಮರ್ಚ್ಂಟ್ಸ್ ಅಸೋಶಿಯೇಷನ್, ಮೆಡಿಕಲ್ ಫಾರ್ಮಾ ಅಸೋಶಿಯೇಷನ್, ಲಯನ್ಸ್ ಕ್ಲಬ್, ಆಟೋ ಚಾಲಕರ ಸಂಘ ಮುಂತಾದವರು ರೈಲ್ವೆ ವ್ಯವಸ್ಥಾಪಕರ ಮೂಲಕ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಹಾಗೂ ಈ ಭಾಗದ ಸಂಸದರುಗಳಿಗೆ ಮನವಿ ಸಲ್ಲಿಸಿದೆ.ಚಿಂತಕರ ಚಾವಡಿಯಲ್ಲಿ ರೈಲ್ವೆ ಸೌಲಭ್ಯಗಳ ಚರ್ಚೆ..!
ಸೋಮವಾರ, ಕನ್ನಡಪ್ರಭ ಹಮ್ಮಿಕೊಂಡಿದ್ದ "ರೀಲು ಬೇಡ, ರೈಲು ಬಿಡಿ " ಚಿಂತಕರ ಚಾವಡಿ- ಫೋನ್ ಇನ್ ನೇರ ಕಾರ್ಯಕ್ರಮದಲ್ಲಿ ರೈಲ್ವೆ ಸೌಲಭ್ಯಗಳ ಚರ್ಚೆಗಳು ಗಮನ ಸೆಳೆದವು.ಹಿರಿಯ ಪತ್ರಕರ್ತ ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಪ್ರಸನ್ನ ದೇಶಮುಖ, ಬಿಜೆಪಿ ಹಿರಿಯ ನಾಯಕಿ ನಾಗರತ್ನಾ ಕುಪ್ಪಿ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ದಿನೇಶಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಭೀಮುನಾಯಕ್ ಹಾಗೂ ಡಾ. ಶರಣು ಗದ್ದುಗೆ ಮತ್ತು ಸಲೀಂ ಹುಂಡೇಕಾರ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ರೈಲ್ವೆ ಇಲಾಖೆಯಿಂದ ಯಾದಗಿರಿಗಾಗುತ್ತಿರುವ ಅನ್ಯಾಯದ ಬಗ್ಗೆ ಬೇಸರ ಹಾಗೂ ಆಕ್ರೋಶ ವ್ಯಕ್ತವಾದವು. ಜಿಲ್ಲೆಯ ವಿವಿಧೆಡೆಯಿಂದ ಅನೇಕರು ಫೋನಾಯಿಸಿ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.