ನಮ್ಮ ಹೋರಾಟ ಪಕ್ಷಾತೀತವಾಗಿದೆ. ನಮ್ಮ ಮೆದಳನ್ನು ಯಾರಿಗೂ ಮಾರಾಟ ಮಾಡಿಕೊಂಡಿಲ್ಲ. ಯಾರ ಬಳಿಯೂ ಹೋಗಿ ಕೈ ಚಾಚಿ ಚಳವಳಿಗೆ ಒಂದು ರುಪಾಯಿ ಕೇಳಿಲ್ಲ. ಧರಣಿಗೆ ಖರ್ಚು, ಹೋರಾಟಗಾರಿಗೆ ಊಟವನ್ನು ಗ್ರಾಮದ ರೈತರೇ ಕೊಡುತ್ತಿದ್ದಾರೆ. ಯಾರದೋ ಕುಮ್ಮಕ್ಕಿನಿಂದ ನೀವೇ ನಮ್ಮ ಹೋರಾಟಕ್ಕೆ ಅಗೌರವ ತಂದಿದ್ದೀರಿ.
ಕನ್ನಡಪ್ರಭ ವಾರ್ತೆ ಮದ್ದೂರು
ಗೆಜ್ಜಲಗೆರೆ ಗ್ರಾಪಂ ಉಳಿಸಲು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಯಾವುದೋ ಕುಮ್ಮಕ್ಕಿನಿಂದ ನಡೆಯುತ್ತಿಲ್ಲ. ಚಳವಳಿ ಬಗ್ಗೆ ಅಗೌರವವಾಗಿ ಮಾತನಾಡಿರುವ ಬಿಲ್ಡರ್ ಎಚ್.ಎಲ್.ಸತೀಶ್‌ಗೆ ಪಾಠ ಕಲಿಸಬೇಕಾಗುತ್ತದೆ ಎಂದು ರೈತ ನಾಯಕಿ ಸುನಂದಾ ಜಯರಾಂ ಎಚ್ಚರಿಕೆ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಚಳವಳಿಯನ್ನು ಸತೀಶ್ ರಾಜಕೀಯ ಪ್ರೇರಿತ ಎಂದಿದ್ದಾರೆ. ಆದರೆ, ರಾಜಕೀಯ ಪ್ರೇರಿತವಾಗಿ ಯಾರು ಪತ್ರಿಕಾಗೋಷ್ಠಿ ಮಾಡಿದ್ದಾರೆ ಎಂಬುದನ್ನು ತಿಳಿಯಬೇಕು. ಇವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.
ನಮ್ಮ ಹೋರಾಟ ಪಕ್ಷಾತೀತವಾಗಿದೆ. ನಮ್ಮ ಮೆದಳನ್ನು ಯಾರಿಗೂ ಮಾರಾಟ ಮಾಡಿಕೊಂಡಿಲ್ಲ. ಯಾರ ಬಳಿಯೂ ಹೋಗಿ ಕೈ ಚಾಚಿ ಚಳವಳಿಗೆ ಒಂದು ರುಪಾಯಿ ಕೇಳಿಲ್ಲ. ಧರಣಿಗೆ ಖರ್ಚು, ಹೋರಾಟಗಾರಿಗೆ ಊಟವನ್ನು ಗ್ರಾಮದ ರೈತರೇ ಕೊಡುತ್ತಿದ್ದಾರೆ. ಯಾರದೋ ಕುಮ್ಮಕ್ಕಿನಿಂದ ನೀವೇ ನಮ್ಮ ಹೋರಾಟಕ್ಕೆ ಅಗೌರವ ತಂದಿದ್ದೀರಿ ಎಂದು ದೂರಿದರು.ಪತ್ರಿಕಾಗೋಷ್ಠಿ ಮೂಲಕ ನಮ್ಮ ಹೋರಾಟ, ಗೆಜ್ಜಲಗೆರೆ ಗ್ರಾಮದ ಬಗ್ಗೆ ಮಾತನಾಡಲು ಸತೀಶ್ ಯಾರು. ನಮ್ಮ ಊರಿನ ಋಣ ನಿಮ್ಮ ಮೇಲಿದೆ. ನೀವು ಋಣ ತೀರಿಸುವ ಕೆಲಸ ಮಾಡಿ. ಸ್ಥಳಕ್ಕೆ ಬಂದು ಧರಣಿ ನಿರತರೊಂದಿಗೆ ಕುಳಿತು ನಾವು ಕೇಳುವ ಪ್ರಶ್ನೆಗೆ ತಾಕತ್ತಿದ್ದರೆ ಉತ್ತರ ಕೊಡಿ ಎಂದು ಸವಾಲು ಹಾಕಿದರು.
ಶಾಸಕ ಕೆ.ಎಂ.ಉದಯ್ ಅವರು ಗ್ರಾಮದ ಜನರು, ಜನಪ್ರತಿನಿಧಿಗಳ ಅಭಿಪ್ರಾಯ ಕೇಳದೆ ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ಸೇರಿಸಲು ಹೊರಟಿದ್ದಾರೆ. ಶಾಸಕರ ನಡೆ ಬಗ್ಗೆ ನಾವು ಪ್ರಶ್ನೆ ಮಾಡಿದ್ದೇವೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ವಿಪಕ್ಷದ ಶಾಸಕರು, ಮಾಜಿ ಶಾಸಕರ ಗಮನಕ್ಕೂ ತಂದಿದ್ದೇವಿ. ಅಲ್ಲದೇ, ಕಾನೂನು ಹಾಗೂ ಜನಪರ ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯಲು ಮುಂದಾಗಿದ್ದೇವೆ. ಯಾರ ಹಂಗಿನಲ್ಲೂ ಪ್ರತಿಭಟನೆ ನಡೆಸುತ್ತಿಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.ಗೆಜ್ಜಲಗೆರೆ ಗ್ರಾಮ ಇತಿಹಾಸ ಹೊಂದಿರುವ ರೈತರ ಮೇಲೆ ಗೋಲಿಬಾರ್ ಘಟನೆ ನಡೆದ ಸ್ಥಳವಿದು. ಗ್ರಾಮಕ್ಕೆ ಸಮಸ್ಯೆ ಎದುರಾದರೆ ಒಗಟ್ಟು ಇರುತ್ತದೆ. ನಾವು ಯಾರು ರಾಜಕೀಯ ಪ್ರೇರಿತವಾಗಿ ಧರಣಿ ನಡೆಸುತ್ತಿಲ್ಲ. ನಗರಸಭೆಗೆ ಸೇರಿದರೆ ಭೂಮಿ ಬೆಲೆ ಜಾಸ್ತಿ ಆಗುತ್ತದೆ ಎಂದು ಹೇಳಿದವರು ಯಾರು. ಅದರ ಅರ್ಥ ಏನು ಎಂದು ಉತ್ತರಿಸಿ ಎಂದು ಒತ್ತಾಯಿಸಿದರು.
ಇಂದು ಎಷ್ಟು ಹಳ್ಳಿಗಳಲ್ಲಿ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಿರುವ ಎಷ್ಟೋ ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ ಮಹಿಳೆಯರು, ಮಕ್ಕಳು ಕಷ್ಟದಲ್ಲಿದ್ದಾರೆ. ಭೂಮಿ ಪಡೆದ ಬಿಲ್ಡರ್ ಗಳು ನೂರಾರು ಕೋಟಿ ಒಡೆಯರ್ ಆಗಿದ್ದಾರೆ. ಭೂಮಿ ಮಾರಿಕೊಂಡವರು ಬಾಯಿ ಬಾಯಿ ಬಿಡುತ್ತಿದ್ದಾರೆ. ಶಾಸಕರು ಭೂಮಿ ಬೆಲೆ ಹೆಚ್ಚಳದ ವಿಷಯವನ್ನು ಏಕೆ ತೆಗೆಯುತ್ತಾರೆ ಎಂದು ಪ್ರಶ್ನಿಸಿದರು.ನಗರಸಭೆಗೆ ಸೇರಿದರೆ ಮೂರು ಸಲ ಕಂದಾಯ ಕಟ್ಟಬಹುದು ಎನ್ನುವವರಿಗೆ ಗ್ರಾಪಂ ನಗರಸಭೆಗೆ ಸೇರಿಸಲು ಒಪ್ಪಿಕೊಳ್ಳಬೇಕು ಅಂತ ಅಲ್ಲವೇ. ಶಾಸಕ ಕಣ್ಣಾ ಮುಂಚಾಲೆ ಮಾತು ಬೇಡ. ಕಣ್ಣಿಗೆ ಬಟ್ಟೆ, ಕಿವಿಗೆ ಹತ್ತಿ ಇಟ್ಟುಕೊಂಡಿಲ್ಲ. ಪಂಚಾಯ್ತಿಗೆ ನಾವು ತೆರಿಗೆ ಕಟ್ಟೊದು ಗೊತ್ತು. ನಮ್ಮ ಜ್ಞಾನ ನಮ್ಮ ಕೈಯಲ್ಲಿದೆ ಎಂದು ತಿರುಗೇಟು ನೀಡಿದರು.
ನಗರಸಭೆಗೆ ಸೇರಿದರೆ ಅಭಿವೃದ್ಧಿ ಬಗ್ಗೆ ಶಾಸಕರು ಮಾತನಾಡಿದ್ದಾರೆ. ಗ್ರಾಮಕ್ಕೆ ಮೂಲ ಸೌಕರ್ಯಗಳು ಹೆಚ್ಚಾಗುತ್ತವೆ ಎಂದಿದ್ದಾರೆ. ಈಗ ನಮ್ಮ ಗೆಜ್ಜಲಗೆರೆ ಗ್ರಾಮ ಬಹುತೇಕ ಚೆನ್ನಾಗಿದೆ. ನಿಮ್ಮ ಶಾಸಕರ ಅನುದಾನ, ಪಂಚಾಯ್ತಿ ಅನುದಾನವೇ ನಮಗೆ ಸಾಕು ಎಂದರು.ನಗರಸಭೆಯಾದರೆ ಗ್ರಾಮದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಹಕ್ಕು ಕಿತ್ತುಕೊಳ್ಳುವ ಹುನ್ನಾರವಿದೆ. ಮುಂದೆ ಗ್ರಾಮದ ನಮ್ಮ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಗಲ್ಲ.ಅನ್ಯರ ಪ್ರವೇಶವಾಗುತ್ತದೆ. ಶಾಸಕರ ಹೇಳಿಕೆ ಸಮರ್ಥಿಸಿಕೊಳ್ಳುವ ಬಿಲ್ಡರ್ ಸತೀಶ್ ತಾಕತ್ತಿದ್ದರೆ ಸ್ಥಳಕ್ಕೆ ಬಂದು ಪ್ರಶ್ನೆ ಮಾಡಲಿ ಎಂದು ಆಗ್ರಹಿಸಿದರು.
ಗೆಜ್ಜಲಗೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಪಂಚಾಯ್ತಿ ಉಳಿಸಲು, ಭೂಮಿ ಜೊತೆ ಬದುಕುತ್ತಿರುವ ನಾವು ಸ್ವಾವಲಂಬನೆಗಾಗಿ ಹೋರಾಟ ಮಾಡುತ್ತಿದ್ದೇವೆ. ಬಿಲ್ಡರ್ ಸತೀಶ್ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದು, ಆ ವ್ಯಕ್ತಿ ವ್ಯವಹಾರದ ಬಗ್ಗೆ, ಲಾಭದ ದೃಷ್ಟಿಯಲ್ಲಿ ಯಾರನ್ನು ಓಲೈಕೆ ಮಾಡಲು ಹೋರಾಟದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದಾನೆ ಎಂದು ಕಿಡಿಕಾರಿದರು.ಗ್ರಾಪಂ ಅಧ್ಯಕ್ಷ ರಾಧಾ ಮಾತನಾಡಿ, ಗೆಜ್ಜಲಗೆರೆ ಗ್ರಾಮಸ್ಥರ ಹೋರಾಟವನ್ನು ಲಘುವಾಗಿ ಪರಿಗಣಿಸಿರುವ ಬಿಲ್ಡರ್ ಸತೀಶ ನಿಗೆ ಬೀದಿಯಲ್ಲಿ ನಿಲ್ಲಿಸಿ ಪ್ರಶ್ನಿಸಬೇಕಾಗುತ್ತದೆ. ಶಾಸಕರ ಚೇಲ ಆಗುವುದನ್ನು ಬಿಟ್ಟು ಧರಣಿ ಸ್ಥಳಕ್ಕೆ ಬಂದು ಉತ್ತರ ನೀಡಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಜಿ.ಎ.ಶಂಕರ್, ತಾಪಂ ಮಾಜಿ ಅಧ್ಯಕ್ಷ ಜಿ.ಬಿ.ಯೋಗೇಶ್, ಗ್ರಾಮ ಘಟಕದ ಅಧ್ಯಕ್ಷ ವೀರಪ್ಪ, ಸದಸ್ಯರಾದ ಭಾಗ್ಯ, ಜಯಮ್ಮ, ಲಕ್ಷ್ಮಮ್ಮ, ಗ್ರಾಮಸ್ಥರು ಇದ್ದರು.