ಬಡವರು, ನಿರ್ಗತಿಕರ ಸೇವೆಯ ಜತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಈಶ್ವರಿ ಫೌಂಡೇಶನ್ ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ.

ರೆಟ್ರೋ ಮೆಲೋಡಿ ಸಂಗೀತ ಸಂಭ್ರಮದಲ್ಲಿ ಸಂಸದ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಬಡವರು, ನಿರ್ಗತಿಕರ ಸೇವೆಯ ಜತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಈಶ್ವರಿ ಫೌಂಡೇಶನ್ ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಅವರು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಈಶ್ವರಿ ಫೌಂಡೇಶನ್ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ "ರೆಟ್ರೋ ಮೆಲೋಡಿ-ಮರೆಯಲಾಗದ ಸಂಗೀತ ಸಂಭ್ರಮ " ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೆರ್ಣೇಕರ ಅವರು ಶಾಲಾ-ಕಾಲೇಜುಗಳಿಗೆ ಬಣ್ಣದರ್ಪಣ, ಉಚಿತ ಆರೋಗ್ಯ ಕಿಟ್, ಆಹಾರ ಕಿಟ್ ಹಾಗೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ಸಮಾಜಮುಖಿ ಚಟುವಟಿಕೆ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ಸಮಾಜ ಸೇವೆಗೆ ಹಣ ಖರ್ಚು ಮಾಡಲು ಹಲವರು ಹಿಂದೇಟು ಹಾಕುತ್ತಾರೆ. ಆದರೆ, ಸಂತೋಷ ವೆರ್ಣೇಕರ ಅವರು ಫೌಂಡೇಶನ್ ಮೂಲಕ ನಿರಂತರವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿರುವುದು ಮಾದರಿಯಾಗಿದೆ. ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿರುವುದು ವಿಶೇಷ. ಸಂಗೀತ ಮನುಷ್ಯನನ್ನು ಸದಾ ಲವಲವಿಕೆಯಿಂದ ಇರಿಸುತ್ತದೆ ಎಂದರು.

ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೆರ್ಣೇಕರ ಪ್ರಾಸ್ತಾವಿಕವಾಗಿ ಮಾತನಾಡಿ, ಹಣ ಮತ್ತು ಅಂತಸ್ತು ಗಳಿಸುವುದಕ್ಕಿಂತ ಬಡವರು, ನಿರ್ಗತಿಕರ ಸೇವೆ ಮಾಡುವುದೇ ನಿಜವಾದ ಪುಣ್ಯದ ಕೆಲಸ. ಸೇವೆಯ ಮೂಲಕ ದೇವರನ್ನು ಕಾಣಬೇಕು ಎಂಬ ಆಶಯದೊಂದಿಗೆ ಈಶ್ವರಿ ಫೌಂಡೇಶನ್ ಕಾರ್ಯನಿರ್ವಹಿಸುತ್ತಿದೆ. ಸಂಗೀತ ಜನರಿಗೆ ಸಂತೋಷ ಮತ್ತು ನೆಮ್ಮದಿ ನೀಡುತ್ತದೆ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಬಳಿಕ ನಡೆದ ರೆಟ್ರೋ ಮೆಲೋಡಿ ಸಂಗೀತ ಕಾರ್ಯಕ್ರಮ ಸಂಗೀತಾಸಕ್ತರನ್ನು ರಂಜಿಸಿತು. ಜೋಸೆಫ್ ಮತ್ತು ಅವರ ಮಕ್ಕಳು ಸಂಗೀತ ವಾದನದ ಮೂಲಕ ಗಮನ ಸೆಳೆದರು. ಜೋಸೆಫ್ ಪ್ಲೆಚರ್ ಗಿಟಾರ್, ಜ್ಯೂಸ್ ಡ್ರಮ್ಸ್, ಎಲಿಜೆಬೆತ್ ಕೀಬೋರ್ಡ್ ಹಾಗೂ ತ್ರಿನಿಟಿ ಕಾಂಗೋ ವಾದನ ನಡೆಸಿಕೊಟ್ಟರು. ರಾಜೇಶ, ಅಜಿತ ಶಾನಭಾಗ, ರಾಜೇಶ ಜೋಶಿ, ಸಾರಿಕಾ ಈರಪಣ್ಣವರ ಹಾಗೂ ಪ್ರಿಯಾ ಕುಲಕರ್ಣಿ ಅವರ ಗಾಯನಕ್ಕೆ ಪ್ರೇಕ್ಷಕರು ಚಪ್ಪಾಳೆ, ಹರ್ಷೋದ್ಗಾರದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಪ ಸದಸ್ಯರಾದ ಪ್ರದೀಪ್ ಶೆಟ್ಟರ್, ಲಿಂಗರಾಜ ಪಾಟೀಲ, ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಡಾ. ರಮೇಶ ಮಹಾದೇವಪ್ಪನವರ, ರಾಜೇಶ ಪಾವಸ್ಕರ, ಅಜಿತ್ ಹಾಗೂ ಸಂದೀಪ ನಾಯಕ ಇದ್ದರು.