ಸಾರಾಂಶ
ನಾಡ ಬಾಂಬ್ ತಯಾರಿ ಮಾಡುವಾಗ ಆಕಸ್ಮಿಕವಾಗಿ ಬಾಂಬ್ ಸಿಡಿದು ಮಗ ಮೃತಪಟ್ಟು ತಂದೆ ಗಾಯಗೊಂಡಿರುವ ಘಟನೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ದೊಡ್ಡನಲ್ಲಾಳ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಹೊಸಕೋಟೆ
ನಾಡ ಬಾಂಬ್ ತಯಾರಿ ಮಾಡುವಾಗ ಆಕಸ್ಮಿಕವಾಗಿ ಬಾಂಬ್ ಸಿಡಿದು ಮಗ ಮೃತಪಟ್ಟು ತಂದೆ ಗಾಯಗೊಂಡಿರುವ ಘಟನೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ದೊಡ್ಡನಲ್ಲಾಳ ಗ್ರಾಮದಲ್ಲಿ ನಡೆದಿದೆ. ದೊಡ್ಡನಲ್ಲಾಳ ಗ್ರಾಮದ ಪವನ್ (20) ಮೃತ ಯುವಕ. ಪವನ್ ತಂದೆ ನಾಗೇಶ್ (45) ಗಾಯಗೊಂಡವರು. ಮೃತ ಪವನ್ ಕಾಡು ಹಂದಿ ಬೇಟೆಯಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದ್ದು ಮನೆಯಲ್ಲೇ ನಾಡ ಬಾಂಬ್ ತಯಾರಿಸುತ್ತಿದ್ದ.ಅದರಂತೆ ಶುಕ್ರವಾರ ಮಧ್ಯಾಹ್ನ ಹಂದಿಗಳ ಬೇಟೆಗೆಂದು ಮನೆಯಲ್ಲಿಯೇ ನಾಡಬಾಂಬ್ ತಯಾರು ಮಾಡುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡು ಸ್ಥಳದಲ್ಲೇ ಪವನ್ ಮೃತಪಟ್ಟಿದ್ದು, ಆತನ ತಂದೆ ನಾಗೇಶ್ ಕಾಲಿಗೆ ತೀವ್ರ ಪೆಟ್ಟಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಮನೆಯಲ್ಲಿ ಮತ್ತಷ್ಟು ನಾಡ ಬಾಂಬ್ ಗಳು ಪತ್ತೆಯಾಗಿವೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ, ವಿಧಿ ವಿಜ್ಞಾನ ತಂಡ ಹಾಗೂ ಬಾಂಬ್ ನಿಷ್ಕ್ರಿಯದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.