‘ರಾಮರಾಜ್ಯ’ ಪರಿಕಲ್ಪನೆಗೆ ವಾಲ್ಮೀಕಿ ರಚಿಸಿರುವ ಮಹಾಕಾವ್ಯ ‘ರಾಮಾಯಣ’ ಕಾರಣ: ಡಾ.ವೈ.ಡಿ.ರಾಜಣ್ಣ

| Published : Oct 18 2024, 12:05 AM IST

‘ರಾಮರಾಜ್ಯ’ ಪರಿಕಲ್ಪನೆಗೆ ವಾಲ್ಮೀಕಿ ರಚಿಸಿರುವ ಮಹಾಕಾವ್ಯ ‘ರಾಮಾಯಣ’ ಕಾರಣ: ಡಾ.ವೈ.ಡಿ.ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಬೇಟೆಗಾರನಾಗಿದ್ದ ವಾಲ್ಮೀಕಿ ನಂತರ ಮನಃಪರಿವರ್ತನೆ ಮಾಡಿಕೊಂಡು ಈ ಮಹಾಕಾವ್ಯ ರಚಿಸುವ ಮೂಲಕ ಭಾರತೀಯ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇವತ್ತಿಗೂ ಕೂಡ ರಾಮರಾಜ್ಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೇ ಇದಕ್ಕೆ ರಾಮಾಯಣ ಕಾರಣ.

ಕನ್ನಡಪ್ರಭ ವಾರ್ತೆ ಮೈಸೂರು

ನಾವು ಈಗಲೂ ಪ್ರಸ್ತಾಪಿಸುವ ರಾಮರಾಜ್ಯ ಪರಿಕಲ್ಪನೆಗೆ ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಮಹಾಕಾವ್ಯ ಕಾರಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಹೇಳಿದರು.

ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ಹಾಗೂ ನವ ವಿಶ್ವಮಾನವ ಟ್ರಸ್ಟ್‌ ವತಿಯಿಂದ ವಿವಿ ಸಂಜೆ ಕಾಲೇಜು ಎದುರು ಗುರುವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಬೇಟೆಗಾರನಾಗಿದ್ದ ವಾಲ್ಮೀಕಿ ನಂತರ ಮನಃಪರಿವರ್ತನೆ ಮಾಡಿಕೊಂಡು ಈ ಮಹಾಕಾವ್ಯ ರಚಿಸುವ ಮೂಲಕ ಭಾರತೀಯ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇವತ್ತಿಗೂ ಕೂಡ ರಾಮರಾಜ್ಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೇ ಇದಕ್ಕೆ ರಾಮಾಯಣ ಕಾರಣ ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್‌ ಮಾತನಾಡಿ, ವಾಲ್ಮೀಕಿಯವರು ಕೇವಲ ರಾಮಾಯಣ ರಚಿಸಲಿಲ್ಲ. ಈ ಮಹಾಗ್ರಂಥದಲ್ಲಿ ಒಂದು ಪಾತ್ರವಾಗಿಯೂ ಇದ್ದಾರೆ. ತಮ್ಮ ಆವಾಸ ಸ್ಥಾನದಲ್ಲಿಯೇ ಸೀತೆಗೆ ಆಶ್ರಯ ನೀಡಿದ್ದಲ್ಲದೇ, ಅವರಿಬ್ಬರ ಮಕ್ಕಳಿಗೆ ಲವ-ಕುಶ ಎಂದು ನಾಮಕರಣ ಮಾಡಿದವರು ಎಂದರು.

ವಾಲ್ಮೀಕಿ ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ಭಾರತೀಯ ಬೇರೆ ಬೇರೆ ಭಾಷೆಗಳಲ್ಲಿ ತಮ್ಮದೇ ಆದ ವ್ಯಾಖ್ಯಾನಗಳ ಮೂಲಕ ಸಾವಿರಾರು ಕೃತಿಗಳು ರಚಿತವಾಗಿವೆ. ಪಿತೃವಾಕ್ಯ ಪರಿಪಾಲನೆ, ಆದರ್ಶಪುರುಷನಿಗೆ ತಕ್ಕ ಸತಿ, ಭಾತೃತ್ವ, ಭಕ್ತಿಯ ಪರಕಾಷ್ಠೆ ಪ್ರದರ್ಶನಕ್ಕೆ ರಾಮಾಯಣ ನಿದರ್ಶನವಾಗಿದೆ ಎಂದರು.

ಮೈಸೂರು ವಿವಿ ಸಿಂಡಿಕೇಟ್‌ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ ಗೌಡ ಮಾತನಾಡಿ, ವಾಲ್ಮೀಕಿ ಅವರ ರಾಮಾಯಮ ಆಧರಿಸಿ ಬರೆದ ಕೃತಿಗಳಿಗೆ ಕನ್ನಡ ಹಾಗೂ ತೆಲುಗಿನಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಅಷ್ಟೊಂದು ಅದ್ಭುತವಾದ ಶಕ್ತಿ ಈ ಮಹಾಕಾವ್ಯಕ್ಕೆ ಇದೆ. ಇವತ್ತು ಕೂಡ ರಾಮಾಯಣ ಹಾಗೂ ಮಹಾಭಾರತ ದೇಶದ ಶ್ರೇಷ್ಠ ಗ್ರಂಥಗಳಾಗಿವೆ ಎಂದರು.

ವಿದೇಶಗಳ ಜನ ಈಗಲೂ ಕೂಡ ಈ ಎರಡು ಮಹಾಗ್ರಂಥಗಳ ಬಗ್ಗೆ ವಿಚಾರಿಸುತ್ತಾರೆ. ಇವ ಅಷ್ಟೊಂದು ಪರಿಣಾಮ ಬೀರಿವೆ ಎಂದರು.

ಮಂಗಳೂರು ವಿವಿ ಸಿಂಡಿಕೇಟ್‌ ಸದಸ್ಯ ಡಾ.ಕೆ.ಸಿ.ಮಹದೇಶ್‌ ಮಾತನಾಡಿ, ವಾಲ್ಮೀಕಿ ಜಯಂತಿ ಆಚರಣೆಯನ್ನು ಶಾಲಾ- ಕಾಲೇಜುಗಳಲ್ಲಿ ಕಡ್ಡಾಯ ಮಾಡಬೇಕು. ಆ ಮೂಲಕ ಬೇಟೆಗಾರನೊಬ್ಬ ಬದಲಾಗಿ ಎಂತಹ ಮಹಾಕಾವ್ಯವನ್ನು ರಚಿಸಿದ್ದಾರೆ ಎಂಬುದು ಇಂದಿನ ಯುವಪೀಳಿಗೆಗೆ ಗೊತ್ತಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ವಾಲ್ಮೀಕಿ ಜಯಂತಿಗೆ ರಜೆ ನೀಡಿದರೆ ಶಾಲಾ- ಕಾಲೇಜುಗಳಲ್ಲಿ ಆಚರಿಸುವುದಿಲ್ಲ. ಹೀಗಾದರೆ ಇಂತಹ ಮಹಾಪುರುಷರ ಸಂದೇಶಗಳು ವಿದ್ಯಾರ್ಥಿಗಳಿಗೆ ಗೊತ್ತಾಗುವುದು ಹೇಗೆ ಎಂದು ಪ್ರಶ್ನಿಸಿದರು.

ಇನ್ನು ಮುಂದಾದರೂ ಕಡ್ಡಾಯವಾಗಿ ಜಯಂತಿ ಆಚರಿಸಿದ ನಂತರ ಶಾಲಾ- ಕಾಲೇಜುಗಳಿಗೆ ಬಿಡುವು ನೀಡುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಸರ್ವಮಹನೀಯರ ಸಂದೇಶಗಳು ಶಾಂತಿ,

ಸಾಮರಸ್ಯ, ಸೌಹಾರ್ದ, ಸಹಬಾಳ್ವೆಯನ್ನು ಸಾರುತ್ತವೆ. ಇದನ್ನು ಪಾಲಿಸಿದರೆ ಸಮಾಜಕ್ಕೆ ಒಳ್ಳೆಯದು ಎಂದರು.

ಮೈವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್‌. ಮಹದೇವಮೂರ್ತಿ, ಯುವರಾಜ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಎಂ.ಕೆ. ಮಹೇಶ್‌, ಮಾನಸ ಗಂಗೋತ್ರಿ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಎಚ್‌.ಪಿ. ಜ್ಯೋತಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್‌. ಸಪ್ನಾ ಮುಖ್ಯ ಅತಿಥಿಗಳಾಗಿದ್ದರು.

ವೇದಿಕೆಯ ಅಧ್ಯಕ್ಷ ಆರ್. ವಾಸುದೇವ, ಉಪಾಧ್ಯಕ್ಷ ಭಾಸ್ಕರ್, ಸಹ ಕಾರ್ಯದರ್ಶಿ ಯೋಗೇಶ್‌, ಸಂಚಾಲಕ ವಿವೇಕ್‌, ಖಜಾಂಚಿ ಗಣೇಶ್‌, ನಿರ್ದೇಶಕರಾದ ಡಾ.ನವೀನ್‌ ಕುಮಾರ್‌, ಚಿದಾನಂದ, ಲೋಕೇಶ್‌, ಅಭಿಷೇಕ್‌, ರಿಷಿರಾಜ್‌, ಮಂಜುನಾಥ್‌, ಯೋಗೇಶ್‌, ಪ್ರಸಾದ್‌ ಮೊದಲಾದವರು ಇದ್ದರು. ವೇದಿಕೆಯ ಕಾರ್ಯದರ್ಶಿ ವಿನೋದ್‌ ವಂದಿಸಿದರು. ಸಂಶೋಧಕ ಕುಶಾಲ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಸಾಧಕರಿಗೆ ಸನ್ಮಾನ

ವಾಲ್ಮೀಕಿ ಜಯಂತಿ ಅಂಗವಾಗಿ ಪ್ರಾಧ್ಯಾಪಕರಾದ ರಾಮು, ವೈ.ಬಿ. ಬಸವರಾಜು, ಬಿ.ಕೆ. ರವೀಂದ್ರನಾಥ್‌, ಪ್ರಭು, ಡಿ.ಕೆ. ಶಂಕರಲಿಂಗೇಗೌಡ, ಶ್ರೀಕಂಠ, ಟಿ. ದೇಮಪ್ಪ, ಕೃಷ್ಣರಾಜ ಉಪ ವಿಭಾಗದ ಎಸಿಪಿ ಎಚ್‌.ಬಿ. ರಮೇಶ್‌ ಕುಮಾರ್‌, ತೋಟಗಾರಿಕೆ ವಿಭಾಗದ ಮಂಚಯ್ಯ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಮಾತನಾಡಿದ ಡಾ.ರಾಮು, ಶಾಲಾ- ಕಾಲೇಜುಗಳ ಪಠ್ಯದಲ್ಲಿ ರಾಮಾಯಣ ಇರಬೇಕು. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವಾಗುತ್ತದೆ. ಮಕ್ಕಳು ಕೂಡ ಸಕಾರಾತ್ಮಕ ಆಲೋಚನೆಗಳ ಕಡೆ ಸಾಗುತ್ತಾರೆ ಎಂದರು.