ಕನ್ನಡಪ್ರಭ ವಾರ್ತೆ ಮೈಸೂರು
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಪಮಾನ ಮಾಡಿರುವುದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯರರ್ತರು ನಗರದ ರಾಮಸ್ವಾಮಿ ವೃತ್ತದಲ್ಲಿ ಭಾನುವಾರ ಸಂಜೆ ಮೇಣದ ಬತ್ತಿಯೊಂದಿಗೆ ಪ್ರತಿಭಟಿಸಿದರು.ರಾಷ್ಟ್ರದ ಸ್ವಾಭಿಮಾನ ಹಾಗೂ ದೇಶಭಕ್ತಿಯ ಸಂಕೇತವಾಗಿರುವ ವಂದೇ ಮಾತರಂ ಗೀತೆಗೆ ಸಾರ್ವಜನಿಕವಾಗಿ ಅಪಮಾನ ಎಸಗಿರುವುದು ಅಕ್ಷಮ್ಯ ಅಪರಾಧ. ವಂದೇ ಮಾತರಂ ಎಂಬುದು ಕೇವಲ ಒಂದು ಗೀತೆಯಲ್ಲ, ಅದು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜೀವ ತುಂಬಿದ ಶಕ್ತಿ ಮತ್ತು ಪ್ರತಿಯೊಬ್ಬ ಭಾರತೀಯನ ದೇಶಭಕ್ತಿಯ ಸಂಕೇತ. ಅಂತಹ ರಾಷ್ಟ್ರಗೀತೆಗೆ ಸಾರ್ವಜನಿಕವಾಗಿ ಮತ್ತು ಸ್ವಾತಂತ್ರ್ಯ ದಿನಾಚರಣೆಯಂತಹ ಪವಿತ್ರ ವೇದಿಕೆಯಲ್ಲಿ ಅಪಮಾನ ಎಸಗಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.
ದೇಶದ ಗೌರವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ದೇಶದ ಜನತೆಯಲ್ಲಿ ತಕ್ಷಣವೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, ಯುವ ಮೋರ್ಚಾ ಅಧ್ಯಕ್ಷ ಕಿರಣ್ ಗೌಡ, ಮುಖಂಡರಾದ ದಿನೇಶ್ ಗೌಡ, ನಿಶಾಂತ್, ಜೋಗಿ ಮಂಜು, ಮಹದೇವಪ್ರಸಾದ್, ರಾಕೇಶ್ ಗೌಡ ಮೊದಲಾದವರು ಇದ್ದರು.