ರೈತರಿಂದಲೇ ಬೆಳೆ ಸಮೀಕ್ಷೆಗೆ ಅ‍ಕಾಶ

| Published : Jul 21 2024, 01:19 AM IST

ಸಾರಾಂಶ

ಕಳೆದ ಬಾರಿ ಬೆಳೆ ವಿಮೆ ಮಾಡಿಸಿದ ಕೆಲವು ರೈತರಿಗೆ ಬೆಳೆ ವಿಮೆ ಈ ವರೆಗೆ ಸಂದಾಯ ಆಗಿಲ್ಲ. ಸಂದಾಯವಾಗದಿರಲು ಕಾರಣಗಳೇನು ಎನ್ನುವ ಕುರಿತು ತ್ವರಿತವಾಗಿ ಪರಿಶೀಲಿಸಿ ಜು. 22ರ ಒಳಗೆ ವರದಿ ನೀಡಬೇಕು ಜೊತೆಗೆ ಈ ಬಾರಿಯೂ ಬೆಳೆ ವಿಮೆ ಮಾಡಿಸಲು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬೆಳೆ ವಿಮೆ ಪಡೆಯಲು ರೈತರು ನೇರವಾಗಿ ಪಾರ್ಮರ್ಸ್ ಆ್ಯಪ್ ಮೂಲಕ ತಮ್ಮ ಬೆಳೆಗಳ ಸ್ಥಿತಿಗತಿ ವಿವರವನ್ನು ನಮೂದಿಸಲು ಅವಕಾಶವಿದ್ದು, ಈ ಸುವರ್ಣವಕಾಶವನ್ನು ಜಿಲ್ಲೆಯ ರೈತರು ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳ ಸಮ್ಮುಖದಲ್ಲಿ ಬೆಳೆ ಸಮೀಕ್ಷೆ ಮಾಡಲು ಆಗಸ್ಟ್ 15 ರ ನಂತರ ಅವಕಾಶವಿದೆ. ಅದಕ್ಕೂ ಮುನ್ನವೇ ರೈತರು ತಮ್ಮ ಬೆಳೆಯ ಬಗ್ಗೆ ವಿವರ ನಮೂದಿಸಬಹುದು ಎಂದರು.

ರಾಗಿ ಬಿತ್ತನೆ ಬೀಜ ಪೂರೈಸಿ

ಈ ಬಾರಿ ಮಳೆಯ ಪ್ರಮಾಣ ಚೆನ್ನಾಗಿರುವುದರಿಂದ ಬಿತ್ತನೆ ಕಾರ್ಯಗಳು ಜಿಲ್ಲೆಯಲ್ಲಿ ಚುರುಕಾಗಿವೆ. ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ದಾಸ್ತಾನು ಸಾಕಷ್ಟು ಲಭ್ಯವಿದ್ದು, 17,097 ಮೆಟ್ರಿಕ್ ಟನ್ ರಸ ಗೊಬ್ಬರ ಪ್ರಸ್ತುತ ಲಭ್ಯವಿದೆ ಜೊತೆಗೆ 1041 ಮೆಟ್ರಿಕ್ ಟನ್ ಬಪರ್ ಸ್ಟಾಕ್ ಇಡಲಾಗಿದೆ. ರೈತರು ಈ ಬಾರಿ ನೆಲಗಡಲೆ ಬೆಳೆ ಬದಲು ರಾಗಿ ಬೆಳೆಯಲು ಒಲವು ತೋರಿಸುತ್ತಿದ್ದಾರೆ. ಅದರಂತೆ ಬಿತ್ತನೆ ಬೀಜಗಳನ್ನು ಪೂರೈಸುವಂತೆ ಸೂಚಿಸಿದರು.

ಬೆಳೆ ವಿಮೆ ಸಂದಾಯವಾಗಿಲ್ಲ

ಕಳೆದ ಬಾರಿ ಬೆಳೆ ವಿಮೆ ಮಾಡಿಸಿದ ಕೆಲವು ರೈತರಿಗೆ ಬೆಳೆ ವಿಮೆ ಈ ವರೆಗೆ ಸಂದಾಯ ಆಗಿಲ್ಲ. ಸಂದಾಯವಾಗದಿರಲು ಕಾರಣಗಳೇನು ಎನ್ನುವ ಕುರಿತು ತ್ವರಿತವಾಗಿ ಪರಿಶೀಲಿಸಿ ಜುಲೈ 22ರ ಒಳಗೆ ವರದಿ ನೀಡಬೇಕು ಜೊತೆಗೆ ಈ ಬಾರಿಯೂ ಬೆಳೆ ವಿಮೆ ಮಾಡಿಸಲು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.