ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಸದನದಿಂದ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಬಗ್ಗೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.ಶನಿವಾರ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಖಂಡಿಸಿದ್ದಕ್ಕೆ ೧೮ ಜನ ಬಿಜೆಪಿ ಶಾಸಕರನ್ನು ಅಮಾನತುಗೊಳಿಸುವ ಮೂಲಕ ಸಭಾಪತಿ ಯು.ಟಿ. ಖಾದರ್ ಒಂದು ಪಕ್ಷದ ಮುಖವಾಣಿಯಂತೆ ನಡೆದುಕೊಂಡಿದ್ದಾರೆ. ಸರ್ಕಾರವೇ ಹನಿಟ್ರ್ಯಾಪ್ ಸಿಡಿಗಳನ್ನು ಇಟ್ಟುಕೊಂಡಿದೆ ಎಂದು ವಿ.ಪಕ್ಷ ಶಾಸಕರು ಸದನದಲ್ಲಿ ಗಂಭೀರ ಆರೋಪ ಮಾಡಿದ ಒಂದೇ ವಿಷಯಕ್ಕೆ ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ವಿ.ಪಕ್ಷದ ೧೮ ಶಾಸಕರನ್ನು ಅಮಾನತುಗೊಳಿಸಿದ ಪ್ರಕ್ರಿಯೆ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಎಂದು ಕಿಡಿಕಾರಿದರು.ಕಂದಾಯ ಇಲಾಖೆಯ ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರದ ದರ ಏರಿಕೆ:
ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರದ ದರವನ್ನು ಶೇಕಡಾ ೧೦೦ರಷ್ಟು ಹೆಚ್ಚಿಸಿದ್ದಾರೆ. ಈಗ ಮನೆಯಲ್ಲಿ ಸಂಗ್ರಹವಾಗುವ ಕಸದ ಮೇಲೂ ನೂರಾರು ರುಪಾಯಿ ಸೆಸ್ ವಿಧಿಸಲಾಗಿದೆ. ಕಸದಲ್ಲೂ ಆದಾಯ ಗಳಿಸಲು ಮುಂದಾಗಿರುವ ಬರೆಗೆಟ್ಟ ಸರ್ಕಾರವಿದು. ದೌರ್ಭಾಗ್ಯವೆಂದರೆ ತಮ್ಮ ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳಲು ರೈತ ಸಮುದಾಯವನ್ನು ಗುರಾಣಿಯ ಹಾಗೆ ಬಳಸಿಕೊಳ್ಳುತ್ತಿರುವುದು ಶೋಚನೀಯ. ಸರ್ಕಾರ ಹೆಚ್ಚಳ ಮಾಡಿರುವ ದರವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂಬ ದಾರಿ ತಪ್ಪಿಸುವ ಮಾತನ್ನು ಆಡುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡಿದಾಗಲೂ ಹಣವನ್ನು ರೈತರಿಗೆ ನೀಡುತ್ತೇವೆ ಎಂದು ಹೇಳಿದ್ದರೇ ವಿನಃ ಹಣ ವರ್ಗ ಮಾಡಲೇ ಇಲ್ಲ. ಸ್ಟ್ಯಾಂಪ್ ಡ್ಯೂಟಿ ದರವನ್ನು ೪ ಪಟ್ಟು ಹೆಚ್ಚಳ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.ಇಂಧನ ಇಲಾಖೆಯಿಂದ ವಿದ್ಯುತ್ ದರ ಹೆಚ್ಚಳ ಮಾಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮಾರಣಾಂತಿಕ ಪೆಟ್ಟನ್ನು ನೀಡಿದ್ದಾರೆ. ವಿದ್ಯುತ್ ಇಲಾಖೆಯ ನೌಕರರಿಗೆ ಪಿಂಚಣಿ ಕೊಡಲು ಹಣವಿಲ್ಲದೆ ದಿವಾಳಿಯಾಗಿರುವ ಸರ್ಕಾರ ವಿದ್ಯುತ್ ಗ್ರಾಹಕರಿಂದ ಯೂನಿಟ್ ಗೆ ೦.೩೫ ಪೈಸೆ ಹೆಚ್ಚಳ ಮಾಡಿ ಜನರ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಕೊಡಗಿನ ಇಬ್ಬರ ಶಾಸಕರಿಂದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಮುಖ ಕಾರಣವಾಗಿದೆ. ಈ ರೀತಿಯ ದ್ವೇಷ ರಾಜಕಾರಣ ಸರಿಯಲ್ಲ, ಜನರೇ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸುತ್ತಾರೆ ಎಂದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ:ರಾಜ್ಯ ಕಾಂಗ್ರೆಸ್ ಸರ್ಕಾರ ನಿರಂತರ ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರದ ನಿರ್ಧಾರಗಳಿಂದ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವ ನೆಪದಲ್ಲಿ ಅವರ ಜೀವನಕ್ಕೆ ಬರೆ ಹಾಕುತ್ತಿದೆ ಎಂದು ಸೀಮೆಂಟ್ ಮಂಜು ಆರೋಪಿಸಿದರು.ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ಈ ಸರ್ಕಾರದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ ಬೆಲೆ ಏರಿಕೆ ಮಾಡಿ ರಾಜ್ಯದ ಜನರ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಧರ್ಮದ ಆಧಾರದ ಮೇಲೆ ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಶೇ.೪ರಷ್ಟು ಅವಕಾಶ ನೀಡಿರುವುದು ಸಂವಿಧಾನ ಬಾಹಿರವಾದುದ್ದು ಎಂದರು.ನಗರದ ಹಳೆ ಬಸ್ ನಿಲ್ದಾಣದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದ ಕಾರ್ಯಕರ್ತರು ನಂತರ ರಾಜ್ಯಪಾಲರಿಗೆ ಉಪವಿಭಾಗಾಧಿಕಾರಿ ಶೃತಿ ಅವರ ಮೂಲಕ ಮನವಿ ಪತ್ರ ಸಲ್ಲಿಸಿದರು.ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವತ್ಥ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಮಧು ಬೊಮ್ಮನಕೆರೆ, ಅಗ್ನಿ ಸೋಮಶೇಖರ್, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಬಬಿತಾ ವಿಶ್ವನಾಥ್, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಕೌಡಳ್ಳಿ ಲೋಹಿತ್, ಪುರಸಭಾ ಸದಸ್ಯರಾದ ಪ್ರದೀಪ್, ವನಜಾಕ್ಷಿ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ನಿಖಿಲ್ ಹಲಸುಲಿಗೆ ಸೇರಿ ಪಕ್ಷದ ಇತರೆ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.