ವೀರಪ್ಪಜ್ಜನವರ ಹಠಯೋಗದ ವಿಶೇಷ ಗುಣ ನಮ್ಮೆಲ್ಲರ ಬಾಳಿಗೆ ಬೆಳಕು

| Published : Feb 09 2025, 01:32 AM IST

ಸಾರಾಂಶ

ಸಾಧು ಸಂತರನ್ನು ಎಂದಿಗೂ ಪ್ರಾಪಂಚಿಕ ದೃಷ್ಟಿಯಿಂದ ನೋಡಬಾರದು. ಹಠಯೋಗಿಗಳು, ಸಾಧುಗಳು ನಿರಂತರವಾದ ಆತ್ಮಾನುಸಂಧಾನದಲ್ಲಿದ್ದು, ದೇಹ ಭಾವದಿಂದ ಸಂಪೂರ್ಣ ದೂರವಾಗಿರುತ್ತಾರೆ

ನರೇಗಲ್ಲ: ಸಮೀಪದ ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆ ಶತಮಾನೋತ್ಸವದ ನಿಮಿತ್ತ ನಡೆದಿರುವ ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಶುಕ್ರವಾರ 5 ಜೊತೆ ಸಂಪೂರ್ಣ ಉಚಿತ ಸಾಮೂಹಿಕ ವಿವಾಹಗಳು ಸಂಭ್ರಮದಿಂದ ಜರುಗಿದವು.

ವಿವಾಹ ಮಹೋತ್ಸವದ ದಿವ್ಯ ಸಾನ್ನಿಧ್ಯವನ್ನು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ವಹಿಸಿಕೊಂಡಿದ್ದರು. ಈ ವೇಳೆ ಹೆಬ್ಬಳ್ಳಿ ಚೈತನ್ಯಾಶ್ರಮದ ಶ್ರೀ ದತ್ತಾವಧೂತ ಮಹಾರಾಜರು ಆಶೀರ್ವಚನ ನೀಡಿ, ಸಾಧು ಸಂತರನ್ನು ಎಂದಿಗೂ ಪ್ರಾಪಂಚಿಕ ದೃಷ್ಟಿಯಿಂದ ನೋಡಬಾರದು. ಹಠಯೋಗಿಗಳು, ಸಾಧುಗಳು ನಿರಂತರವಾದ ಆತ್ಮಾನುಸಂಧಾನದಲ್ಲಿದ್ದು, ದೇಹ ಭಾವದಿಂದ ಸಂಪೂರ್ಣ ದೂರವಾಗಿರುತ್ತಾರೆ. ಅವರು ತಮ್ಮ ಅಂತರಂಗದಲ್ಲಿ ಯಾವಾಗಲೂ ಭಗವಂತನ ಅನುಸಂಧಾನದಲ್ಲಿರುತ್ತಾರೆ. ಇಂತಹ ವಿಶೇಷ ಗುಣವನ್ನು ಹೊಂದಿದ್ದವರು ಶ್ರೀ ವೀರಪ್ಪಜ್ಜನವರು. ಅವರಲ್ಲಿನ ಹಠಯೋಗದ ವಿಶೇಷ ಗುಣ ನಮ್ಮೆಲ್ಲರ ಬಾಳಿಗೆ ಬೆಳಕಾಗಿದೆ ಎಂದು ತಿಳಿಸಿದರು.

ಯಾವುದೇ ಸತ್ಪುರುಷರು ಇದ್ದಾಗ ಏನು ಸಮಾಜದ ಕಾರ್ಯ ಮಾಡುತ್ತಾರೋ, ಅವರು ದೇಹ ಬಿಟ್ಟ ನಂತರ ಅದಕ್ಕಿಂತಲೂ ಹೆಚ್ಚಿನ ಕಾರ್ಯವನ್ನು ಮಾಡುತ್ತಾರೆ. ಅದಕ್ಕೆ ಈಗ ಗದ್ದುಗೆ ರೂಪದಲ್ಲಿರುವ ಶ್ರೀ ವೀರಪ್ಪಜ್ಜನವರೇ ಸಾಕ್ಷಿ. ಸತ್ಪುರುಷರಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ ಹೊರತು, ಅಧಿಕಾರಿಗಳಿಂದಾಗಲಿ, ರಾಜಕಾರಣಿಗಳಿಂದಾಗಲಿ ಸಮಾಜ ಸುಧಾರಣೆ ಸಾಧ್ಯವಿಲ್ಲ. ಇಂದು ಮದುವೆಯಾದ ನವ ದಂಪತಿಗಳು ಎಂತಹುದೇ ಕಷ್ಟ ಬಂದರೂ ಹೊಂದಾಣಿಕೆಯಿಂದ ಬದುಕನ್ನು ಸಾಗಿಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಹಂಪಸಾಗರದ ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ದುಂದು ವೆಚ್ಚಗಳನ್ನು ಕಡಿತಗೊಳಿಸುವಲ್ಲಿ ಸಾಮೂಹಿಕ ವಿವಾಹಗಳು ನೆರವಾಗಿವೆ. ಇಂದು ದಾಂಪತ್ಯದ ಜೀವನಕ್ಕೆ ಕಾಲಿಟ್ಟ ನೀವು ಸಂಪೂರ್ಣ ಹೊಂದಾಣಿಕೆಯಿಂದ ಜೀವನ ನಡೆಸಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕನ್ನು ಸಾಗಿಸಬೇಕು ಎಂದರು.

ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಪ್ರವಚನಕಾರ ಡಾ. ವಿಶ್ವನಾಥ ಸ್ವಾಮೀಜಿ, ಮೈನಳ್ಳಿ-ಬಿಸರಳ್ಳಿಯ ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಎಂ.ಸಿ. ಚಪ್ಪನ್ನಮಠ, ಬಸವರಾಜ ದಿಂಡೂರ ಮುಂತಾದವರು ಉಪಸ್ಥಿತರಿದ್ದರು. ಆಕಾಶವಾಣಿ ಕಲಾವಿದ ವೆಂಕಟೇಶ ಕುಲಕರ್ಣಿ ಸಂಗೀತ ಸೇವೆ ನೀಡಿದರು. ಶಿಕ್ಷಕ ಸುರೇಶ ಹಳ್ಳಿಕೇರಿ ನಿರೂಪಿಸಿದರು.