ಚನ್ನಪಟ್ಟಣ: ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಮನೋಭಾವನೆಯೇ ಸಮಾಜದ ನಿಜವಾದ ಶಕ್ತಿ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು

ಚನ್ನಪಟ್ಟಣ: ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಮನೋಭಾವನೆಯೇ ಸಮಾಜದ ನಿಜವಾದ ಶಕ್ತಿ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ತಾಲೂಕಿನ ಹೊಂಗನೂರು ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ವಿಜಯನಗರದ ಅರಸು ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೈಸೂರು ರಾಜವಂಶವು ಶಿಕ್ಷಣ, ಆರೋಗ್ಯ, ಸಂಸ್ಕೃತಿ ಹಾಗೂ ಸಾರ್ವಜನಿಕ ಕಲ್ಯಾಣ ಕ್ಷೇತ್ರಗಳಲ್ಲಿ ದೇಶಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಳನ್ನು ನೀಡಿದೆ. ಆ ಮಹಾನ್ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ದೇವರಾಜ ಅರಸು ಹಿಂದುಳಿದ ವರ್ಗಗಳ ಮಹಾನಾಯಕರಾಗಿ ಸಮಾಜದ ಪ್ರಗತಿಗಾಗಿ ಸೇವೆ ಸಲ್ಲಿಸಿದರು. ಅರಸು ಸಮುದಾಯ ಸೇರಿದಂತೆ ಇತರೆ ಎಲ್ಲಾ ಸಮುದಾಯಗಳು ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ, ಸಂಘಟನೆ ಮತ್ತು ಸೇವಾಭಾವದ ಮೂಲಕ ಮುನ್ನಡೆಯುತ್ತಿವೆ. ಸಮಾಜದ ಸಮಗ್ರ ಅಭಿವೃದ್ಧಿಗೆ ಪರಸ್ಪರ ಸಹಕಾರ ಮತ್ತು ಏಕತೆ ಅಗತ್ಯ ಎಂದು ತಿಳಿಸಿದರು.

ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸಮುದಾಯ ಭವನ ನಿರ್ಮಾಣ ಕುಂಟುತ್ತಲೇ ಸಾಗಿತ್ತು. ಸದ್ಯ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ. ಯಾವುದೇ ಸಮುದಾಯವಾಗಲಿ ಸಂಘಟಿತರಾಗಿ, ಸುಶಿಕ್ಷಿತರಾದಾಗ ಸಮಾಜದಲ್ಲಿ ತಮ್ಮ ಹಕ್ಕನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಮುದಾಯದ ಮಂದಿಯ ಶ್ರಮದಿಂದ ಈ ಬೃಹತ್ ಭವನ ತಲೆಎತ್ತಿದ್ದು, ಇದರ ಸದ್ಬಳಕೆಗೆ ಮುಂದಾಗಬೇಕು ಎಂದು ಕರೆನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ್, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ವಿಜಯನಗರ ಅರಸು ಅಭಿವೃದ್ಧಿ ಸಂಘದ ಅಧ್ಯಕ್ಷ ಸುಗಂಧರಾಜೇ ಅರಸು, ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಬಾಕ್ಸ್‌.............

ಸರ್ಕಾರಿ ಹುದ್ದೆ ಭರ್ತಿ ಮಾಡಬೇಕು

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ: ಸರ್ಕಾರಿ ಹುದ್ದೆಯ ವಿಚಾರವಾಗಿ ಯುವಕರ ಹೋರಾಟ ಬಹಳ ಗಂಭೀರವಾದ ಸಮಸ್ಯೆ, ಎಲ್ಲ ಇಲಾಖೆಗಳಲ್ಲೂ ಸೇರಿ ೨.೮೪ ಲಕ್ಷ ಹುದ್ದೆ ಖಾಲಿ ಇದೇ, ಅವುಗಳನ್ನ ಭರ್ತಿ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಕಟ್ಟಡಗಳಿಂದ ಕೆಲಸ ಆಗಲ್ಲ. ರಾಜ್ಯ ಸರ್ಕಾರ ಆದಷ್ಟು ಬೇಗ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಆರೋಗ್ಯ ಇಲಾಖೆ, ಕೃಷಿ ಇಲಾಖೆ ಸೇರಿ ಹಲವಾರು ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಆಡಳಿತ ಯಂತ್ರ ಕುಸಿದು ಹೋಗುತ್ತೆ. ಕೆಲಸಗಳು ಆಗಲ್ಲ, ಈಗಲೇ ಕೆಲಸಗಳು ವಿಳಂಬ ಆಗುತ್ತಿದೆ. ಖಾಲಿ ಹುದ್ದೆಗಳನ್ನ ಭರ್ತಿ ಮಾಡಿದರೆ ಆಡಳಿತ ಯಂತ್ರ ಚುರುಕಾಗಲಿದೆ. ಶಾಶ್ವತ ಯೋಜನೆಗಳಿಗೆ ಹೆಚ್ಚು ಹಣ ಕೊಡಬೇಕು. ಬರುವ ಬಜೆಟ್‌ನಲ್ಲಿ ಹುದ್ದೆಗಳಿಗೆ ಪ್ರತ್ಯೇಕ ಹಣ ಮೀಸಲಿಡಬೇಕು ಎಂದರು.

ಮಾರ್ಚ್ ೬ಕ್ಕೆ ರಾಜ್ಯ ಬಜೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ನಿರೀಕ್ಷೆ ಶಾಶ್ವತ ಯೋಜನೆಗಳಿಗೆ ಹಣ ಕೊಡಬೇಕು ಎಂಬುದಾಗಿದೆ. ನೀರಾವರಿ, ಕೆರೆ ತುಂಬಿಸುವ ಯೋಜನೆಗಳಿಗೆ ಹಣ ಕೊಡಬೇಕು. ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳ ಭೂಸ್ವಾಧೀನಕ್ಕೆ ಹೆಚ್ಚಿನ ಹಣ ಕೊಡಬೇಕು ಎಂದರು.

ಪೊಟೋ೨ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ವಿಜಯನಗರದ ಅರಸು ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿದರು.