ಸಾಗರ : ನಾವೆಲ್ಲರೂ ಭಾರತೀಯರು ಎಂಬ ಮನೋಭಾವ ಗಟ್ಟಿಯಾಗಬೇಕು - ಶಾಸಕ ಗೋಪಾಲಕೃಷ್ಣ ಬೇಳೂರು

| Published : Jan 21 2025, 12:34 AM IST / Updated: Jan 21 2025, 12:59 PM IST

ಸಾಗರ : ನಾವೆಲ್ಲರೂ ಭಾರತೀಯರು ಎಂಬ ಮನೋಭಾವ ಗಟ್ಟಿಯಾಗಬೇಕು - ಶಾಸಕ ಗೋಪಾಲಕೃಷ್ಣ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಕುರಾನ್ನಲ್ಲಿರುವ ತತ್ವಾದರ್ಶಗಳನ್ನು ಪರಿಪಾಲನೆ ಮಾಡುವ ಮೂಲಕ ಪರಸ್ಪರ ಸಹೋದರತ್ವದಿಂದ ಬದುಕಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

 ಸಾಗರ : ಕುರಾನ್ನಲ್ಲಿರುವ ತತ್ವಾದರ್ಶಗಳನ್ನು ಪರಿಪಾಲನೆ ಮಾಡುವ ಮೂಲಕ ಪರಸ್ಪರ ಸಹೋದರತ್ವದಿಂದ ಬದುಕಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ ಆಯೋಜಿಸಿದ್ದ ಆರನೇ ವರ್ಷದ ಕನ್ನಡದಲ್ಲಿ ಸಾರ್ವಜನಿಕ ಕುರಾನ್ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಂದೊಂದು ಧರ್ಮದವರು ಒಂದೊಂದು ಧರ್ಮಗ್ರಂಥವನ್ನು ಪಾಲನೆ ಮಾಡಿದರೂ ನಾವೆಲ್ಲರೂ ಭಾರತೀಯರು ಎನ್ನುವ ಮನೋಭಾವ ಗಟ್ಟಿಯಾಗಿರಬೇಕು ಎಂದರು.

ಯಾರೋ ಮಾಡಿದ ತಪ್ಪಿಗೆ ಸಮಾಜವೊಂದನ್ನು ದೂರುವುದು ಸರಿಯಲ್ಲ. ಎಲ್ಲ ಸಮಾಜದಲ್ಲೂ ದುಷ್ಟರು ಇರುತ್ತಾರೆ. ಸಮಾಜ ಒಡೆಯುವವರ ಬಗ್ಗೆ ತಲೆಕೆಡಿಸಿ ಕೊಳ್ಳಬೇಡಿ. ಸಮಾಜ ಒಡೆಯುವವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಭಾರತೀಯರಾಗಿ ಬದುಕಲು ನಮಗೆ ಸಂವಿಧಾನ ಹಕ್ಕು ನೀಡಿದೆ ಎಂದರು.

ಮುಸ್ಲಿಂ ಬಾಂಧವರು ಹಿಂದೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿರುವುದು ಆಶಾದಾಯಕ ಸಂಗತಿಯಾಗಿದೆ. ಮಕ್ಕಳು ಉನ್ನತ ಸ್ಥಾನಮಾನಕ್ಕೆ ಹೋಗಬೇಕು. ಕುರಾನ್ ನೀಡಿರುವ ಸಂದೇಶವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕೊಡೇಕಲ್ಲ ದುರುದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ನಮ್ಮ ವೇದ ಉಪನಿಷತ್ತು, ಪುರಾಣಗಳು ಹೇಳಿರುವ ಆದರ್ಶವನ್ನು ನಾವು ಪಾಲನೆ ಮಾಡಬೇಕು. ಬುದ್ದ, ಬಸವ, ಪ್ರವಾದಿಗಳು ಮನುಷ್ಯನಿಗೆ ಸನ್ಮಾರ್ಗದಲ್ಲಿ ಬದುಕುವ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ನಾವು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಹೆಣ್ಣನ್ನು ಕೊಲ್ಲಬಾರದು, ಬದಲಾಗಿ ಗೌರವಿಸಬೇಕು ಎಂಬ ಸಂದೇಶ ಜಗತ್ತಿಗೆ ನೀಡಿದವರೆ ಪ್ರವಾದಿಗಳಾಗಿದ್ದಾರೆ. ಧರ್ಮಧರ್ಮಗಳ ನಡುವೆ ವಿಷಬೀಜ ಬಿತ್ತುವ ಬಿತ್ತಿ ಪರಸ್ಪರ ದ್ವೇಷಾಸೂಯೆಗಳನ್ನು ಹರಡುವುದರ ಬಗ್ಗೆ ಸಮುದಾಯ ಬಾಂಧವರು ಜಾಗೃತರಾಗಿ ಇರಬೇಕು ಎಂದು ಸಲಹೆ ನೀಡಿದರು.

ಧರ್ಮಗುರು ವಿನುತ್ ಬಾಲು ಕುಮಾರ್, ಬಸವರಾಜ ಗುಂಡಾಲಿ, ಯು.ಜೆ.ಮಲ್ಲಿಕಾರ್ಜುನ, ಸೈಯದ್ ಇಕ್ಬಾಲ್, ರಂಜಿತ್ ಕುಮಾರ್ ಭಂಡಾರಿ, ಎಲ್.ಟಿ.ತಿಮ್ಮಪ್ಪ, ಮಕ್ಬೂಲ್ ಅಹ್ಮದ್, ಸಂತೋಷ ಕುಮಾರ್, ಗಿರೀಶ್ ಕೋವಿ, ಮಹ್ಮದ್ ಶರೀಫ್. ರಿಯಾಜುದ್ದೀನ್ ಇದ್ದರು. ಮನ್ಸೂರ್ ಶರೀಫ್ ವಂದಿಸಿದರು.೨೦ಕೆ.ಎಸ್.ಎ.ಜಿ.೨

ಸಾಗರದಲ್ಲಿ ಆರನೇ ವರ್ಷದ ಕನ್ನಡದಲ್ಲಿ ಸಾರ್ವಜನಿಕ ಕುರಾನ್ ಪ್ರವಚನ ಕಾರ್ಯಕ್ರಮವನ್ನು ಶಾಸಕ ಬೇಳೂರು ಉದ್ಘಾಟಿಸಿದರು