ಸಾರಾಂಶ
ಬಿ. ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುಸಾಂಸ್ಕೃತಿಕ ನಗರಿ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ದೀಪಾಲಂಕಾರ ನಗರಿಯಾಗಿ ಮಾರ್ಪಟ್ಟಿದೆ. ಅರಮನೆ ನಗರಿಯು ವಿದ್ಯುತ್ ದೀಪಗಳಿಂದ ಪ್ರಜ್ವಲಿಸುತ್ತಿದೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಬೆಳಕಿನ ಸೌಂದರ್ಯದಿಂದ ಜಗಮಗಿಸುತ್ತಿದೆ. ಇದಕ್ಕೆ ಲೈಟಿಂಗ್ಸ್ ನೋಡಲು ಜನ ಮುಗಿಬೀಳುತ್ತಿರುವುದು ಸಾಕ್ಷಿ.
ಒಂದೆಡೆ ವಿಶ್ವವಿಖ್ಯಾತಿ ಹೊಂದಿರುವ ಮೈಸೂರು ಅರಮನೆಯ ದೀಪಾಲಂಕಾರವು ಹೊಂಬೆಳಕಿನಲ್ಲಿ ಪ್ರಜ್ವಲಿಸುತ್ತಾ ಪ್ರವಾಸಿಗರನ್ನು ನಿತ್ಯ ತನ್ನತ್ತ ಆಕರ್ಷಿಸುತ್ತಿದೆ. ಮತ್ತೊಂದೆಡೆ ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ ನಗರದಲ್ಲಿ ಮಾಡಲಾಗಿರುವ ದೀಪಾಲಂಕಾರವು ಪ್ರವಾಸಿಗರು, ಸಾರ್ವಜನಿಕರ ಕಣ್ಣಿಗೆ ಬೆಳಕಿನ ಹಬ್ಬವನ್ನು ಸೃಷ್ಟಿಸಿದೆ.ಸಂಜೆಯಾದರೇ ಮೈಸೂರು ಅರಮನೆಯು ಹೊಂಬೆಳಕಿನ ವೈಯ್ಯಾರ ಹೊದ್ದಿಕೊಂಡರೇ, ಅರಮನೆ ಸುತ್ತಮುತ್ತಲಿರುವ ರಸ್ತೆಗಳು, ವೃತ್ತಗಳಲ್ಲಿ ಸಹ ಬೆಳಕಿನಲೋಕ ಸೃಷ್ಟಿಯಾಗುತ್ತಿದೆ. ಕೆ.ಆರ್. ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ (ಹಾರ್ಡಿಂಜ್) ವೃತ್ತ, ಗನ್ ಹೌಸ್ ವೃತ್ತಗಳಲ್ಲಿ ದೀಪಾಲಂಕಾರವು ಎಲ್ಲರನ್ನು ಆಕರ್ಷಿಸುತ್ತಿವೆ.
ಬೆಳಕಿನ ಮಳೆ:ಡಿ. ದೇವರಾಜ ಅರಸು ರಸ್ತೆಯಲ್ಲಿ ತೋರಣದಿಂದ ಬೆಳಕಿನ ಮಳೆ ಸೃಷ್ಟಿಯಾಗಿದೆ. ಸಯ್ಯಾಜಿರಾವ್ ರಸ್ತೆಯಲ್ಲಿ ಹಾಕಲಾಗಿರುವ ಹಸಿರು ಚಪ್ಪರ, ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಬಿ.ಎನ್. ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್ ಬಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಹಾಕಲಾಗಿರುವ ಬೆಳಕಿನ ತೋರಣವು ದೇಶ- ವಿದೇಶ ಪ್ರವಾಸಿಗರನ್ನು ಸೆಳೆಯುತ್ತಿವೆ.
ಗನ್ ಹೌಸ್ ವೃತ್ತದಲ್ಲಿ ಚಾಮುಂಡೇಶ್ವರಿ, ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪ್ರತಿಕೃತಿ, ಕರ್ನಾಟಕ ನಕ್ಷೆಯಲ್ಲಿ ಭುವನೇಶ್ವರಿ, ರಾಮಸ್ವಾಮಿ ವೃತ್ತದಲ್ಲಿ ಅರಮನೆ ಪ್ರತಿಕೃತಿ, ಎಲ್ಐಸಿ ವೃತ್ತದಲ್ಲಿ ರೆಕ್ಕೆ ಬಿಚ್ಚಿ ನರ್ತಿಸುವಂತಹ ನವಿಲಿನ ಚಿತ್ರಣವು ನೋಡುಗರ ಕೇಂದ್ರ ಬಿಂದುವಾಗಿದೆ.ಎಚ್ಚರಿಕೆ ಇರಲಿ:
ದೀಪಾಲಂಕಾರ ವೀಕ್ಷಿಸುವ ಸಂದರ್ಭದಲ್ಲಿ ಸಾರ್ವಜನಿಕರು ದೀಪಾಂಲಕಾರದ ಕಂಬಗಳನ್ನು ಮುಟ್ಟದೇ ಅಂತರ ಕಾಯ್ದುಕೊಳ್ಳುವುದು. ದೀಪಾಲಂಕಾರದ ಕಂಬಗಳ ಹತ್ತಿರ ನಿಂತು ಸೆಲ್ಫಿ, ಫೋಟೋ, ವೀಡಿಯೋ ಶೂಟ್ ಮಾಡುವುದನ್ನು ತಪ್ಪಿಸುವುದು. ಮಳೆ ಸಂದರ್ಭದಲ್ಲಿ ವಿದ್ಯುತ್ ದೀಪಾಲಂಕಾರದ ಕಂಬಗಳ ಹತ್ತಿರ ಹೋಗದೇ ಎಚ್ಚರ ವಹಿಸುವುದು. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರಕ್ಕಾಗಿ ಕಂಬಗಳನ್ನು ಹಾಗೂ ಪ್ರತಿಕೃತಿಗಳನ್ನು ಅಳವಡಿಸಿದ್ದು, ವಾಹನ ಸವಾರರು ಈ ಬಗ್ಗೆ ಎಚ್ಚರವಹಿಸಿ ಸುರಕ್ಷಿತವಾಗಿ ಸಂಚರಿಸುವುದು. ವಿದ್ಯುತ್/ ದೀಪಾಲಂಕಾರ ಸಂಬಂಧಿತ ದೂರುಗಳಿಗೆ 24x7 ಸಹಾಯವಾಣಿ 1912 ಸಂಪರ್ಕಿಸಬಹುದು ಎಂದು ಸೆಸ್ಕ್ ಕೋರಿದೆ.--
‘ಸೆಸ್ಕ್ ವತಿಯಿಂದ ನಗರದ ಒಟ್ಟು 118 ವೃತ್ತಗಳು, 136 ಕಿ.ಮೀ ರಸ್ತೆಗಳಿಗೆ ದೀಪಾಲಂಕಾರವನ್ನು ಮಾಡಲಾಗಿದೆ. ಅಲ್ಲದೆ, ನಗರದ ಪ್ರಮುಖ ಕಡೆಗಳಲ್ಲಿ ಎಲ್‌ಇಡಿ ಬಲ್ಬ್ ಗಳಿಂದ ಮಾಡಲಾಗಿರುವ 80 ಪ್ರತಿಕೃತಿಗಳನ್ನು ಇರಿಸುವ ಮೂಲಕ ದಸರಾ ದೀಪಾಲಂಕಾರದ ಅಂದವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಈಗಾಗಲೇ ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯ ಜನರು ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸುತ್ತಿದ್ದಾರೆ. ದೀಪಾಲಂಕಾರಕ್ಕಾಗಿ 300 ಕಿಲೋ ವ್ಯಾಟ್ ಗಳ 257520 ಯೂನಿಟ್ ಗಳ ವಿದ್ಯುತ್ ಬಳಸಲಾಗುತ್ತಿದೆ.’- ಕೆ.ಎಂ. ಮುನಿಗೋಪಾಲರಾಜು, ಸೆಸ್ಕ್ ಎಂಡಿ