ನಗರದ ಆರಾಧ್ಯ ದೈವ ಶ್ರೀ ವೇಣುಗೋಪಾಲಸ್ವಾಮಿ ದೇವರ ಹಾಲೋಕಳಿ ಜಾತ್ರೆ ಶತಮಾನಗಳ ರಾಜಪರಂಪರೆ, ಜನಪದ ಸಂಸ್ಕೃತಿ ಹಾಗೂ ಸರ್ವಧರ್ಮೀಯರ ಭಾವೈಕ್ಯತೆಯ ಪ್ರತೀಕವಾಗಿ ಗಮನ ಸೆಳೆಯುತ್ತಿದ್ದು, ಸೆ.5ರಿಂದ ಮೂರು ದಿನಗಳ ಕಾಲ ಸಡಗರ ಸಂಭ್ರಮದಿಂದ ನಡೆಯಲಿದೆ. ಸರ್ವಧರ್ಮಗಳ ಭಾವೈಕ್ಯತೆಯ ಪ್ರತೀಕವಾಗಿರುವ ಶ್ರೀ ವೇಣುಗೋಪಾಲಸ್ವಾಮಿ ದೇವರ ಹಾಲೋಕಳಿ ಜಾತ್ರೆ ಈ ಭಾಗದ ಮಹತ್ವದ ಪರಂಪರೆಯಲ್ಲೊಂದು.

ಚಂದ್ರಶೇಖರ ನಾಯಕ ಗುಡ್ಡಕಾಯಿ

ಕನ್ನಡಪ್ರಭ ವಾರ್ತೆ ಸುರಪುರ

ನಗರದ ಆರಾಧ್ಯ ದೈವ ಶ್ರೀ ವೇಣುಗೋಪಾಲಸ್ವಾಮಿ ದೇವರ ಹಾಲೋಕಳಿ ಜಾತ್ರೆ ಶತಮಾನಗಳ ರಾಜಪರಂಪರೆ, ಜನಪದ ಸಂಸ್ಕೃತಿ ಹಾಗೂ ಸರ್ವಧರ್ಮೀಯರ ಭಾವೈಕ್ಯತೆಯ ಪ್ರತೀಕವಾಗಿ ಗಮನ ಸೆಳೆಯುತ್ತಿದ್ದು, ಸೆ.5ರಿಂದ ಮೂರು ದಿನಗಳ ಕಾಲ ಸಡಗರ ಸಂಭ್ರಮದಿಂದ ನಡೆಯಲಿದೆ. ಸರ್ವಧರ್ಮಗಳ ಭಾವೈಕ್ಯತೆಯ ಪ್ರತೀಕವಾಗಿರುವ ಶ್ರೀ ವೇಣುಗೋಪಾಲಸ್ವಾಮಿ ದೇವರ ಹಾಲೋಕಳಿ ಜಾತ್ರೆ ಈ ಭಾಗದ ಮಹತ್ವದ ಪರಂಪರೆಯಲ್ಲೊಂದು.

ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಸೆ.5 ರಂದು ಸಂಜೆ 6ಕ್ಕೆ ದೇವರ ಸ್ತಂಭಾರೋಹಣ ಹಾಗೂ ಸಂಜೆ 630ಕ್ಕೆ ಗರುಡ ವಾಹನದ ಮೇಲೆ ಶ್ರೀವೇಣುಗೋಪಾಲಸ್ವಾಮಿ ದೇವರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸೆ.6 ರಂದು ಬೆಳಗ್ಗೆ 11ಕ್ಕೆ ದೇವಸ್ಥಾನದ ಆವರಣದಲ್ಲಿ ಕುಸ್ತಿ ಪಂದ್ಯಗಳು ಹಾಗೂ ಸಂಜೆ 5ಕ್ಕೆ ರಮಣಪ್ಪ ನಾಯಕನ ರಣಗಂಭಾರೋಹಣ ನಡೆಯಲಿದೆ. ತಿರುಪತಿ ಮಾದರಿಯಲ್ಲಿ ವೈಖಾನಸ, ಕಾತ್ಯಾಯನ ಹಾಗೂ ಆರಂಭಿ ಸಂಹಿತೆಗಳ ಪ್ರಕಾರ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಕಳೆದ 300ಕ್ಕೂ ಹೆಚ್ಚು ವರ್ಷಗಳಿಂದ ಧರ್ಮವರಂ ಪರಂಪರೆಯ ಅರ್ಚಕರ ಕುಟುಂಬ ಪೂಜಾ ಸೇವೆ ಮುಂದುವರೆಸಿಕೊಂಡು ಬಂದಿದೆ. ಸುರಪುರದ ಬಲವಂತ ಬಹರಿ ಬಹಾದ್ದೂರ ಸಂಸ್ಥಾನದರಸ ವಂಶಜರ ನೇತೃತ್ವದಲ್ಲಿ ಉತ್ಸವಾಚರಣೆ ನಡೆಯುತ್ತದೆ. ಬಲವಂತ ಬಹರಿ ಬಹಾದ್ದೂರ ಸಂಸ್ಥಾನದ ವಂಶಜ ಡಾ.ರಾಜಾ ಕೃಷ್ಣಪ್ಪ ನಾಯಕ ಹಾಗೂ ಕುಟುಂಬ ಈ ಸಂಪ್ರದಾಯ ಹಾಗೂ ಈ ಪರಂಪರೆ ಉಳಿಸಿ-ಬೆಳೆಸಿಕೊಂಡು ಬರುತ್ತಿದ್ದಾರೆ.

*1710 ರಲ್ಲಿ ನಿರ್ಮಾಣ: ಗೋಸಲ ವಂಶದ ಅರಸ ರಾಜಾ ಪಿತಾಂಬರ ಬಹರಿ ಪಿಡ್ಡನಾಯಕ 1710 ರಲ್ಲಿ ವೇಣುಗೋಪಾಲ ಸ್ವಾಮಿ ದೇವಸ್ಥಾನ ಸ್ಥಾಪಿಸಿದರು. ದೇವಾಲಯದ ವಾಸ್ತು ಶಿಲ್ಪದಲ್ಲಿ ವಿಜಯನಗರ ಶೈಲಿಯ ಪ್ರಭಾವ ಕಂಡುಬರುತ್ತದೆ. ದೇವಾಸ್ಥಾನದ ಮುಂಭಾಗದಲ್ಲಿರುವ ಪುಷ್ಕರಣಿ ಇದೆ. ಹಾಲೋಕಳಿ ಆಚರಣೆಯ ಮೂಲ ಕೇಂದ್ರ ವಾಗನಗೇರಿ ಎನ್ನಲಾಗುತ್ತದೆ. ವಾಗನಗೇರಿ, ಸುರಪುರ, ಮುಡಬೋಳು, ಕರಡಕಲ್ ಹಾಗೂ ಮುಧೋಳದ ಗೋಪಾಲಸ್ವಾಮಿ ದೇವಾಲಯಗಳ ನಡುವೆ ಪರಂಪರೆಯ ನಂಟಿದೆ ಎಂದು ಸ್ಥಳೀಯ ಹಿರಿಯರು ಹೇಳುತ್ತಾರೆ.

* ಜಾತ್ರೆಯ ಪ್ರಮುಖ ಆಕರ್ಷಣೆ: ಜಾತ್ರೆಯ ವಿಶೇಷ ಆಕರ್ಷಣೆಯಾದ ಹಾಲೋಕಳಿಯಲ್ಲಿ ಚರ್ಮದ ಚೀಲಗಳಲ್ಲಿ ತಂದ ಶುದ್ಧ ಹಾಲನ್ನು ಬಳಸುವ ಸಂಪ್ರದಾಯವಿತ್ತು. ಪ್ರಸುತ್ತ ಹಾಲಿನ ಬದಲಿಗೆ ನೀರನ್ನು ಬಳಸಲಾಗುತ್ತಿದೆ. ಭಕ್ತರು ಉತ್ಸಾಹದಿಂದ ಪಾಲ್ಗೊಂಡು ಸಾಹಸ ಪ್ರದರ್ಶಿಸುತ್ತಾರೆ. ಜಾತ್ರೆಯ ಎಡನೇ ದಿನ ಸಂಜೆ ದೇವಾಲದ ಆವರಣದಲ್ಲಿ ಸುಮಾರು 50 ಅಡಿ ಎತ್ತರದ ಐದು ಕಂಬಗಳನ್ನು ನಿಲ್ಲಿಸಲಾಗುತ್ತದೆ. ಎಣ್ಣೆ ಹಾಗೂ ರಾಳ ಹಚ್ಚಿದ ಕಂಬ ಏರುವ ಸ್ಪರ್ಧೆ ಇಲ್ಲಿ ನಡೆಯುತ್ತದೆ. ಕಂಬ ಏರುವವರಿಗೆ ಕೆಳಗಿನಿಂದ ನೀರು ಎರಚಲಾಗುತ್ತದೆ. ಕಂಬದ ತುದಿಯಲ್ಲಿ ಕುಳಿತಿರುವ ವ್ಯಕ್ತಿ ಆರೋಹಿಗಳ ಮೇಲೆ ಹಣ್ಣಿನ ಮಿಶ್ರಣದ ನೀರು ಸುರಿಯುತ್ತಾನೆ. ಇದರಿಂದ ಕಂಬ ಜಾರುವಂತಾಗಿ ಆರೋಹಿಗಳು ಪದೇ ಪದೇ ಕೆಳಗೆ ಜಾರುತ್ತಾರೆ. ಕೊನೆಗೂ ಒಬ್ಬರ ಸಹಾಯದಿಂದ ಮತ್ತೊಬ್ಬರು ಕಂಬ ಹತ್ತಿ ತುದಿಗೆ ಕಟ್ಟಿರುವ ಹಣ್ಣಿನ ಹೋಳುಗಳನ್ನು ಕೀಳುವ ದೃಶ್ಯ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ.

ಮೂರನೇ ದಿನ ಇದೇ ರೀತಿಯ ಸ್ತಂಭಾರೋಹಣ ರಮಣಪ್ಪನಾಯಕನ ಕಟ್ಟೆಯ ಹತ್ತಿರ ನಡೆಯುತ್ತದೆ. ಈ ಸಾಹಸಮಯ ಆಚರಣೆ ವೀಕ್ಷಿಸಲು ಸಾವಿರಾರು ಜನ ಸೇರುತ್ತಾರೆ. ಜತೆಗೆ ಬೆಳಗ್ಗೆ ದೇವಾಲಯದ ಆವರಣದಲ್ಲಿ ನಡೆಯುವ ಕುಸ್ತಿ ಪಂದ್ಯಗಳು ಜಾತ್ರೆಯ ಕ್ರೀಡಾ ವೈಭವ ಮತ್ತಷ್ಟು ಮೆರುಗು ನೀಡುತ್ತವೆ. ಪೂಜೆ ಸಲ್ಲಿಸಿದ ನಂತರ ನಾಣ್ಯಗಳನ್ನು ಚಿಮ್ಮಿದ ಮೇಲೆ ಜನರು ಕಂಬ ಹತ್ತಲು ಮುಂದಾಗುತ್ತಾರೆ. ನಾಣ್ಯ ಚಿಮ್ಮುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ವತನ್ದಾರರು ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಮೇಲಿನಿಂದ ನಾಣ್ಯಗಳನ್ನು ಚಿಮ್ಮುತ್ತಾರೆ. ಇದರಿಂದ ಊರಿಗೆ ಧನ-ಧಾನ್ಯ ಸಮೃದ್ಧಿಯಾಗಲಿ, ಜನರ ಬದುಕು ಹಸನಾಗಲಿ ಎಂಬ ನಂಬಿಕೆ ಇದೆ.

ನಮ್ಮ ಸಂಸ್ಥಾನದ ಆರಾಧ್ಯ ದೈವ ವೇಣುಗೋಪಾಲಸ್ವಾಮಿಯ ಕೃಪೆಯಿಂದ ನಾಡು ಸುಭಿಕ್ಷವಾಗಲಿ, ಪ್ರಜೆಗಳ ಮನೆ-ಮನಗಳಲ್ಲಿ ಸಂತೋಷ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ನಮ್ಮ ಜಾತ್ರಾ ಪರಂಪರೆಯನ್ನು ಮೂರು ಶತಮಾನಗಳಿಂದ ಶ್ರದ್ಧೆಯಿಂದ ಆಚರಿಸಿಕೊಂಡು ಬರುತ್ತಿದ್ದೇವ ಎಂದು ಸುರಪುರ ಬಲವಂತ ಬಹರಿ ಬಹಾದ್ದೂರ ಸಂಸ್ಥಾನದ ಡಾ.ರಾಜಾ ಕೃಷ್ಣಪ್ಪ ನಾಯಕ ಹೇಳಿದರು.

ಗೋಪಾಲಸ್ವಾಮಿಯ ಹಾಲೋಕಳಿ ಜಾತ್ರೆ ಕೇವಲ ಉತ್ಸವವಲ್ಲ, ಅದು ಸುರಪುರದ ರಾಜವೈಭವದ ಜೀವಂತ ನೆನಪು, ಶತಮಾನಗಳ ಭಕ್ತಿಗಳ ಪ್ರತೀಕ ಹಾಗೂ ಸರ್ವಧರ್ಮ ಸೌಹರ್ದದ ಅಪೂರ್ವ ಪರಂಪರೆ. ಈ ಅಮೂಲ್ಯ ಪರಂಪರೆ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಹೊಣೆ ಎಂದು ಸುರಪುರ ನಿವಾಸಿ ಶ್ರೀಹರಿರಾವ್ ಆದಾವಾನಿ ಹೇಳಿದರು.