ಮಾತಿಗೆ ತಪ್ಪಿದ ರಾಜ್ಯ ಕಾಂಗ್ರೆಸ್‌ ಸರ್ಕಾರ: ಅರುಣ್ ಶಹಪುರ

| Published : May 30 2024, 12:47 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರ ನಂಬಿಸಿ ಮೋಸ ಮಾಡಿದೆ. ಕಾಂಗ್ರೆಸ್ ಪಕ್ಷದ ಮೋಸಕ್ಕೆ ತಕ್ಕ ಉತ್ತರ ನೀಡಲು ಇದು ಸಕಾಲ.

ಸಂಡೂರು: ಕಾಂಗ್ರೆಸ್ ಸರ್ಕಾರ ಮಾತಿಗೆ ತಪ್ಪಿರುವ ಸರ್ಕಾರ. ಚುನಾವಣೆಗೂ ಮುಂಚೆ ಯುವನಿಧಿ ಯೋಜನೆಯನ್ವಯ ಎಲ್ಲ ನಿರುದ್ಯೋಗಿ ಪದವೀಧರರಿಗೆ ಮಾಸಿಕ ₹೩೦೦೦ ನೀಡುತ್ತೇವೆಂದು ಹೇಳಿ ಮತ ಹಾಕಿಸಿಕೊಂಡು, ಗೆದ್ದಮೇಲೆ ೨೦೨೨-೨೩ನೇ ಸಾಲಿನಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಎಂದು ಮಾತು ಬದಲಿಸಿದ್ದಾರೆ ಎಂದು ವಿಪ ಮಾಜಿ ಸದಸ್ಯ ಅರುಣ್ ಶಹಪುರ ಆರೋಪಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರವಾಗಿ ಪ್ರಚಾರ ಹಾಗೂ ಮತಯಾಚನೆ ಮಾಡಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ನಂಬಿಸಿ ಮೋಸ ಮಾಡಿದೆ. ಕಾಂಗ್ರೆಸ್ ಪಕ್ಷದ ಮೋಸಕ್ಕೆ ತಕ್ಕ ಉತ್ತರ ನೀಡಲು ಇದು ಸಕಾಲ. ಪದವೀಧರರು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ೬೦ ವರ್ಷದ ಆಡಳಿತಾವಧಿಯಲ್ಲಿ ಪ್ರೌಢ ಶಾಲಾ ಶಿಕ್ಷಕರ ಮೂಲವೇತನ ಕೇವಲ ₹೪೫೭೫ ಇತ್ತು. ಬಿಜೆಪಿಯ ಆಡಳಿತಾವಧಿಯಲ್ಲಿ ಕೇವಲ ೬ ವರ್ಷದಲ್ಲಿ ಪ್ರೌಢ ಶಾಲಾ ಶಿಕ್ಷಕರ ಮೂಲ ವೇತನ ₹೧೭೬೫೦ಕ್ಕೆ ಹೆಚ್ಚಳವಾಯಿತು ಎಂದರು.

ಬಸವರಾಜ ಬೊಮ್ಮಾಯಿ ೭ನೇ ವೇತನ ಆಯೋಗ ಜಾರಿಗೊಳಿಸಲು ಉತ್ಸುಕರಾಗಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಶೇ.೧೭ ಇಂಟಿರಿಮ್ ರಿಲೀಫ್ ನೀಡಿದರು. ಪದವಿ ಕಾಲೇಜುಗಳಲ್ಲಿನ ಉಪನ್ಯಾಸಕರ ಸಂಬಳ ಹೆಚ್ಚಿಸಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ೭ನೇ ವೇತನ ಆಯೋಗ ಜಾರಿಗೆ ಬದ್ಧತೆ ತೋರುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಯಾವತ್ತಿಗೂ ನೌಕರರ ಪರವಾಗಿಲ್ಲ ಎಂದು ಟೀಕಿಸಿದರು. ಮತದಾರರು ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಾಧ್ಯಮಿಕ ಶಿಕ್ಷಕರ ಸಂಘದ ಸಹ ಸಂಘಟನಾ ಕಾರ್ಯದರ್ಶಿ ಕೊಟ್ರಪ್ಪ, ಪಕ್ಷದ ಮುಖಂಡರಾದ ಆರ್.ಟಿ. ರಘುನಾಥ್, ದರೋಜಿ ರಮೇಶ್, ಕೆ. ಯರಿಸ್ವಾಮಿ, ರಮೇಶ್, ಪ್ರವೀಣ್, ಪುರುಷೋತ್ತಮ್ ಉಪಸ್ಥಿತರಿದ್ದರು.