ವಿಬಿ-ಜಿ ರಾಮ-ಜಿ ಯೋಜನೆಯಲ್ಲಿ ರಾಮನ ಹೆಸರು ಬಂದಿರುವುದಕ್ಕೆ ಕಾಂಗ್ರೆಸಿಗರ ಹೊಟ್ಟೆಯಲ್ಲಿ ಬೆಂಕಿ ಬಿದ್ದಿದೆ.
ವಿಬಿ-ಜಿ ರಾಮ-ಜಿ ಜಾಗೃತಿ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ
ಕನ್ನಡಪ್ರಭ ವಾರ್ತೆ ಯಲ್ಲಾಪುರವಿಬಿ-ಜಿ ರಾಮ-ಜಿ ಯೋಜನೆಯಲ್ಲಿ ರಾಮನ ಹೆಸರು ಬಂದಿರುವುದಕ್ಕೆ ಕಾಂಗ್ರೆಸಿಗರ ಹೊಟ್ಟೆಯಲ್ಲಿ ಬೆಂಕಿ ಬಿದ್ದಿದೆ. ಕಾಂಗ್ರೆಸ್ ಕ್ಷುಲ್ಲಕ ರಾಜಕಾರಣ ಬಿಟ್ಟು, ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.
ಪಟ್ಟಣದ ಅಡಕೆ ಭವನದಲ್ಲಿ ಬಿಜೆಪಿ ಯಲ್ಲಾಪುರ ಮಂಡಲ ಹಮ್ಮಿಕೊಂಡಿದ್ದ ವಿಬಿ-ಜಿ ರಾಮ-ಜಿ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಗಾಂಧಿ ಕುಟುಂಬದ ಓಕೈಕೆಗಾಗಿ ಗಾಂಧಿ ಹೆಸರು ಬಳಸಿಕೊಂಡು ಯೋಜನೆಯನ್ನು ಕಾಂಗ್ರೆಸಿಗರು ಟೀಕೆ ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ಕಾಂಗ್ರೆಸ್‌ನ ಜನಪ್ರತಿನಿಧಿಗಳು ಹುಚ್ಚಾಟ ನಡೆಸುತ್ತಿದ್ದಾರೆ. ಗ್ಯಾರಂಟಿ ಹೆಸರಲ್ಲಿ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಹಾಗಾಗಿ ಸ್ಥಳೀಯ ಸಂಸ್ಥೆಯ ಚುನಾವಣೆ ನಡೆಸಲೂ ಅವರಲ್ಲಿ ಹಣ ಇಲ್ಲ ಎಂದು ವ್ಯಂಗ್ಯವಾಡಿದರು.
ಪ್ರತಿ ಬೂತ್ ಹಂತದಲ್ಲಿ, ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೂ ಯೋಜನೆಯ ಕುರಿತು ಅರಿವು ಮೂಡಿಸಬೇಕು. ಪ್ರಧಾನಿ ಮೋದಿ ಅವರ ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ವಿನಂತಿಸಿದರು.ಪಕ್ಷದ ಕಾರ್ಯಗಳಿಗೆ, ಕಾರ್ಯಕರ್ತರಿಗೆ ಮನ್ನಣೆ ನೀಡುವ ನಾಯಕರನ್ನು ಸದಾ ಸ್ಮರಿಸಬೇಕು. ಪಕ್ಷವನ್ನು, ಕಾರ್ಯಕರ್ತರನ್ನು ಕಡೆಗಣಿಸಿ, ನೋವು ನೀಡಿ ತಮ್ಮ ಲಾಭದ ಉದ್ದೇಶದೊಂದಿಗೆ ಹೋದವರನ್ನು ನಾವು ಮತ್ತೆ ಮತ್ತೆ ನೆನಪಿಸಬಾರದು. ನಾವು ಮಾಡಬೇಕಾದ ಕಾರ್ಯಗಳತ್ತ ಗಮನ ಹರಿಸಿ, ಸಂಘಟನೆ ಬಲಗೊಳಿಸಬೇಕೆಂದು ಶಾಸಕ ಶಿವರಾಮ ಹೆಬ್ಬಾರ್ ಅವರ ಹೆಸರು ಹೇಳದೇ ಟಾಂಗ್ ನೀಡಿದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ, ಜಿಪಂ ಮಾಜಿ ಸದಸ್ಯರಾದ ರಾಘವೇಂದ್ರ ಭಟ್ಟ, ರೂಪಾ ಬೂರ್ಮನೆ, ಜಿಲ್ಲಾ ಪ್ರಮುಖ ಗೋಪಾಲಕೃಷ್ಣ ಗಾಂವ್ಕರ, ರಾಘವೇಂದ್ರ ಭಟ್ಟ ಸುಂಕಸಾಳ, ಉಮೇಶ ಭಾಗ್ವತ ಇತರರಿದ್ದರು.ಸಂತ ಗುರು ರವಿದಾಸರ ಜಯಂತಿ ಕುರಿತು ಮಾವಿನಮನೆ ಗ್ರಾಪಂ ಸದಸ್ಯ ದೀಪಕ ಭಟ್ಟ, ವಿಬಿ-ಜಿ ರಾಮ-ಜಿ ಯೋಜನೆಯ ಸಂಚಾಲಕ ಗಣೇಶ ಹೆಗಡೆ ಮಾತನಾಡಿದರು.
ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ್ ನಿರ್ವಹಿಸಿದರು.