ಫೆ.27ರಿಂದ ಮಾ.1ರವರೆಗೆ ಗಾಫೆಕ್ಸ್‌ 2025 ಸಮ್ಮೇಳನ

| Published : Aug 20 2024, 12:46 AM IST

ಸಾರಾಂಶ

ರಾಜ್ಯ ಸರ್ಕಾರ ಅಸೋಸಿಯೇಷನ್‌ ಆಫ್‌ ಬೆಂಗಳೂರು ಆನಿಮೇಶನ್‌ ಇಂಡಸ್ಟ್ರಿ(ಎಬಿಎಐ) ಸಹಯೋಗದಲ್ಲಿ 2025 ಫೆಬ್ರವರಿ 27ರಿಂದ ಮಾ.1ರವರೆಗೆ ಮೂರು ದಿನ ಬೆಂಗಳೂರಿನಲ್ಲಿ 6ನೇ ಅವೃತ್ತಿಯ ಗಾಫೆಕ್ಸ್‌ 2025 (ಜಿಎಎಫ್‌ಎಕ್ಸ್‌) ಸಮ್ಮೇಳನ ಆಯೋಜಿಸಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರ ಅಸೋಸಿಯೇಷನ್‌ ಆಫ್‌ ಬೆಂಗಳೂರು ಆನಿಮೇಶನ್‌ ಇಂಡಸ್ಟ್ರಿ(ಎಬಿಎಐ) ಸಹಯೋಗದಲ್ಲಿ 2025 ಫೆಬ್ರವರಿ 27ರಿಂದ ಮಾ.1ರವರೆಗೆ ಮೂರು ದಿನ ಬೆಂಗಳೂರಿನಲ್ಲಿ 6ನೇ ಅವೃತ್ತಿಯ ಗಾಫೆಕ್ಸ್‌ 2025 (ಜಿಎಎಫ್‌ಎಕ್ಸ್‌) ಸಮ್ಮೇಳನ ಆಯೋಜಿಸಲಿದೆ.

ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಗ್ರಾಫೆಕ್ಸ್‌ 2025 ಪೂರ್ವ ಸಿದ್ಧತಾ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಗ್ರಾಫೆಕ್ಸ್‌ 2025 ಇಮ್ಯಾಜಿನೇಶನ್‌ ನೆಕ್ಸ್ಟ್‌ ಎಂಬ ಘೋಷವಾಕ್ಯ ಮತ್ತು ಕರಪತ್ರವನ್ನು ಅನಾವರಣಗೊಳಿಸಿದರು.

ನಂತರ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಎವಿಜಿಸಿ-ಎಕ್ಸ್‌ಆರ್‌ (ಆನಿಮೇಶನ್‌ ವಿಶ್ಯುವಲ್‌ ಎಫೆಕ್ಟ್‌ ಗೇಮಿಂಗ್‌, ಕಾಮಿಕ್ಸ್‌ ಆ್ಯಂಡ್‌ ಎಕ್ಸ್‌ಟೆಂಡೆಡ್‌ ರಿಯಾಲಿಟಿ) ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಎವಿಜಿಸಿ-ಎಕ್ಸ್‌ಆರ್‌ ಕ್ಷೇತ್ರದಲ್ಲಿ ನವೋದ್ಯಮಗಳು ಮತ್ತು ಸಣ್ಣ ಮಧ್ಯಮ ಎಂಟರ್‌ಪ್ರೈಸಸ್‌ಗಳಿಗೆ ಪ್ರೋತ್ಸಾಹ ನೀಡಲು ಅನುದಾನ ಮೀಸಲು ಇಡಲಾಗಿದ್ದು, ಈ ಕ್ಷೇತ್ರದಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವಾಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.

ಎವಿಜಿಸಿ-ಎಕ್ಸ್‌ ಆರ್‌ ಕ್ಷೇತ್ರದಲ್ಲಿ ರಾಜ್ಯವು ಶೇ.20 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, 300 ವಿಶೇಷ ಎವಿಜಿಸಿ-ಎಕ್ಸ್‌ಆರ್‌ ಸ್ಟುಡಿಯೋಗಳು ಸುಮಾರು 15000 ವೃತ್ತಿಪರರಿಗೆ ಉದ್ಯೋಗ ನೀಡಿದೆ. ಈ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲು 20 ಕೋಟಿ ರು. ಅನುದಾನವಿದ್ದು ಅದನ್ನು ನವೋದ್ಯಮಗಳು ಹಾಗೂ ಸಣ್ಣ, ಮಧ್ಯಮ ಉದ್ಯಮಗಳಿಗೆ ನೀಡಲಾಗುತ್ತದೆ. ಪ್ರತಿ ಕಂಪನಿಗೆ ಮೊದಲ ಹಂತದಲ್ಲಿ 50 ಲಕ್ಷ ರು.ನಿಂದ 1 ಕೋಟಿ ರು.ಗಳವರೆಗೆ ಹೂಡಿಕೆ ರೂಪದಲ್ಲಿ ಅನುದಾನ ಕೊಡಲಾಗುವುದು. ಆ ನಂತರ 2 ಕೋಟಿ ರು.ವರೆಗೆ ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದರು.

ಫೆ.27ರಿಂದ 3 ದಿನ ನಡೆಯಲಿರುವ ಗ್ರಾಫೆಕ್ಸ್‌ ಸಮ್ಮೇಳನದಲ್ಲಿ ಅನಿಮೇಶನ್‌, ವಿಶುವಲ್‌ ಎಫೆಕ್ಟ್‌, ಗೇಮಿಂಗ್‌ ಮತ್ತು ಕಾಮಿಕ್ಸ್‌ ಕುರಿತು ವಿವಿಧ ವಿಚಾರ ಸಂಕಿರಣ, ಉಪನ್ಯಾಸ, ಸಂವಾದ ಇತ್ಯಾದಿ ಕಾರ್ಯಕ್ರಮ ನಡೆಯಲಿವೆ. ಜಾಗತಿಕ ಮಟ್ಟದ ಉದ್ಯಮಿಗಳು, ನವೋದ್ಯಮಿಗಳು, ವೃತ್ತಿಪರರು ಮತ್ತು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಎಬಿಎಐ ಅಧ್ಯಕ್ಷ, ಎಪಿಎಸಿ ಟೆಕ್ನಿಕಲರ್‌ ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ ಬಿರೇನ್ ಘೋಷ್‌ ಮಾತನಾಡಿ, ಭಾರತದ ಆನಿಮೇಶನ್‌, ಗೇಮಿಂಗ್‌ ಮತ್ತು ವಿಎಫ್‌ಎಕ್ಸ್‌ ಕ್ಷೇತ್ರದ ಜಾಗತಿಕ ಮಟ್ಟದ ಬೆಳವಣಿಗೆಗೆ ಕರ್ನಾಟಕವು ಕೊಡುಗೆ ನೀಡಿದ್ದು, ಈ ನಾಯಕತ್ವವನ್ನು ಮುಂದುವರಿಸಲು ಬೆಂಗಳೂರು ಗ್ರಾಫೆಕ್ಸ್‌ 2025 ಸಹಕಾರಿಯಾಗಲಿದೆ ಎಂದರು. ಈ ವೇಳೆ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಐಟಿಬಿಟಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಏಕರೂಪ್‌ ಕೌರ್ ಮತ್ತಿತರರಿದ್ದರು.