ರಾಜ್ಯಪಾಲರ ಭಾಷಣದಲ್ಲಿ ಕಾಂಗ್ರೆಸ್‌ ಸರ್ಕಾರ ಬರೀ ಸುಳ್ಳುಗಳ ಸರಮಾಲೆಯನ್ನೇ ಹೇಳಿದೆ. ಈ ಸರ್ಕಾರದ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಪಾಲರ ಭಾಷಣದಲ್ಲಿ ಕಾಂಗ್ರೆಸ್‌ ಸರ್ಕಾರ ಬರೀ ಸುಳ್ಳುಗಳ ಸರಮಾಲೆಯನ್ನೇ ಹೇಳಿದೆ. ಈ ಸರ್ಕಾರದ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದು ದುಪ್ಪಟ್ಟು ಕಮಿಷನ್‌ ಸರ್ಕಾರ ಎಂದು ಗುತ್ತಿಗೆದಾರರೇ ಆರೋಪಿಸಿದ್ದಾರೆ. ಗ್ಯಾರಂಟಿಗಳಿಗೂ ಹಣವಿಲ್ಲದೆ ಸರ್ಕಾರ ದಿವಾಳಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಲಿಯಾ ಬದಲು ಇಲಿಯಾ ಆಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಟೀಕಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಅವರು, ವಿಬಿ ಜಿ ರಾಮ್‌ ಜಿ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿ ಜಾರಿಯಾಗಿದೆ. ಅಂತಹ ಕಾಯ್ದೆಯನ್ನು ವಿರೋಧಿಸುವ ಅಂಶಗಳನ್ನು ಅಧಿಕಾರಿಗಳು ಬುದ್ಧಿ ಇಲ್ಲದೆ ರಾಜ್ಯಪಾಲರ ಭಾಷಣದಲ್ಲಿ ಸೇರಿಸಿದ್ದಾರೋ, ಇಲ್ಲ ಸರ್ಕಾರವೇ ಬೇಕಂತ ಸೇರಿಸಿದೆಯೋ ಗೊತ್ತಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಇದುವರೆಗೂ 18 ನಿರ್ಣಯ ಮಾಡಿರುವ ಈ ಸರ್ಕಾರ, ಈಗ ಈ ಕಾಯ್ದೆ ವಿರೋಧಿಸಿ 19ನೇ ನಿರ್ಣಯ ಮಾಡಲು ಹೊರಟಿದೆ. ದೇಶದ ಯಾವ ರಾಜ್ಯವೂ ಈ ರೀತಿ ಕೇಂದ್ರದೊಂದಿಗೆ ಕಾಲು ಕೆರೆದು ಜಗಳಕ್ಕೆ ಹೋದದ್ದಿಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರದೊಂದಿಗೆ ರಾಜ್ಯ ಸರ್ಕಾರದ ಸೌಹಾರ್ದತೆ ಇರಬೇಕು, ಎರಡೂ ಸರ್ಕಾರಗಳು ಒಟ್ಟಿಗೆ ಹೋಗಬೇಕು ಎಂದರು.

72 ಬಾರಿ ಸಂವಿಧಾನ ತಿದ್ದುಪಡಿ:

ಬಿಜೆಪಿಯವರು ಸಂವಿಧಾನ ವಿರೋಧಿಗಳು ಎಂದು ಹೇಳುವ ಕಾಂಗ್ರೆಸ್‌ನವರು, ಅವರದ್ದೇ ಸರ್ಕಾರಗಳ ಅವಧಿಯಲ್ಲಿ ಒಟ್ಟು 72 ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದ್ದಾರೆ. ಉಳಿದಂತೆ ಬಿಜೆಪಿ ಅಧಿಕಾರದಲ್ಲಿ ವಾಜಪೇಯಿ ಅವರು 14 ಬಾರಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ 8 ಬಾರಿ ತಿದ್ದುಪಡಿ ಮಾಡಿದ್ದಾರೆ. ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿದ ಕಾಂಗ್ರೆಸ್‌ ಪಕ್ಷ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ಸಂವಿಧಾನವು ನಿರಂತರವಾಗಿರಬೇಕೆಂದರೆ ನಾವು ಅದನ್ನು ಬದಲಾಯಿಸುತ್ತಿರಬೇಕೆಂದು ಜವಾಹರಲಾಲ್‌ ನೆಹರು ಹೇಳಿದ್ದರು. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನದ ಬಗ್ಗೆ ಬೇಜಾರಾಗಿ ಅದನ್ನು ಸುಟ್ಟುಹಾಕುತ್ತೇನೆಂದು ಹೇಳಿದ್ದರು ಎಂದರು.

80% ಕಮಿಷನ್‌ ಸರ್ಕಾರ: ಹಿಂದಿನ ನಮ್ಮ ಬಿಜೆಪಿ ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘದವರು ಒಂದು ಬಾರಿ 40% ಕಮಿಷನ್‌ ಆರೋಪ ಮಾಡಿದರು. ಅದೂ ಕೂಡ ಅಂದು ಪ್ರತಿಪಕ್ಷದಲ್ಲಿದ್ದ ನೀವೇ(ಕಾಂಗ್ರೆಸ್‌) ಹೇಳಿಸಿ ಮಾಡಿಸಿದ್ದು. ಆದರೆ, ಈಗ ಅದೇ ಗುತ್ತಿಗೆದಾರರು ಮೂರು ಬಾರಿ ಸುದ್ದಿಗೋಷ್ಠಿ ನಡೆಸಿ ನಿಮ್ಮ ಸರ್ಕಾರದ ಎಲ್ಲ ಇಲಾಖೆಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ, ಇದು ಹಿಂದಿನ ಸರ್ಕಾರಕ್ಕಿಂತ ದುಪ್ಪಟ್ಟು ಕಮಿಷನ್‌(ಶೇ.80) ಸರ್ಕಾರ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ರಾಹುಲ್‌ ಗಾಂಧಿಯ ತನಕ ದೂರು ಹೋಗಿದೆ. ಈ ಆರೋಪಗಳಿಗೆ ಕಾಂಗ್ರೆಸ್ಸಿಗರು ಆಧಾರ ಕೇಳುತ್ತಾರೆ. ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವಾಗ ಇವರ ಬಳಿ ಯಾವ ಆಧಾರಗಳಿದ್ದವು? ಎಂದು ಅಶೋಕ್‌ ಪ್ರಶ್ನಿಸಿದರು. ಬಾಕ್ಸ್‌

‘ಕಾಣದಂತೆ ಮಾಯವಾದನು ನಮ್ಮ ಶಿವ’

ಇನ್ನು ಬೆಂಗಳೂರಿನ ಸ್ಥಿತಿ ಹೇಳತೀರದಾಗಿದೆ. ಗುತ್ತಿಗೆದಾರರಿಗೆ ಕಸ ಸಾಗಣೆ ಬಿಲ್‌ ಪಾವತಿಸಲು ಆಗುತ್ತಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚದೆ ಹಾಗೇ ಬಿಡಲಾಗಿದೆ. 15 ದಿನಗಳಲ್ಲಿ ಗುಂಡಿ ಮುಚ್ಚುತ್ತೇವೆ, ಬ್ರ್ಯಾಂಡ್‌ ಬೆಂಗಳೂರು ಮಾಡುತ್ತೇವೆ ಎಂದು ಹೇಳಿ ಡಿಸಿಎಂ ಡಿ.ಕೆ.ಶಿವಕುಮಾರ್‌ ನಾಪತ್ತೆಯಾಗಿದ್ದಾರೆ ಎಂದು ‘ಕಾಣದಂತೆ ಮಾಯವಾದನೋ ನಮ್ಮ ಶಿವ’ ಎಂಬ ಹಾಡು ಹೇಳಿ ಕಿಚಾಯಿಸಿದರು. ನಾನು, ಡಿ.ಕೆ.ಶಿವಕುಮಾರ್‌ ಹಾಲು ಸಕ್ಕರೆಯಂತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಇದು ಹಾಲಾಹಲವಾಗಿದೆ. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಲು ಪದೇ ಪದೇ ದೆಹಲಿಗೆ ಹೋಗುತ್ತಿದ್ದಾರೆ. ಪವರ್‌ ಪಾಲಿಟಿಕ್ಸ್‌ನಿಂದಾಗಿ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ಎಂದು ಅಶೋಕ್‌ ವಾಗ್ದಾಳಿ ನಡೆಸಿದರು.