ಎರಡು ದಶಕಗಳ ಹಿಂದೆ ರಾಜಕಾರಣಿಗಳು ಕಾನೂನು ಪದವೀಧರರಾಗಿದ್ದರು. ಇಂದಿನ ರಾಜಕಾರಣ ಶ್ರೀಮಂತರ ಕೈಗೆ ಹೋಗಿದೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಕಳಂಕ

ಯಲಬುರ್ಗಾ: ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲವೆಂದು ಪ್ರತಿಪಕ್ಷದವರು ಅಪಪ್ರಚಾರ ಮಾಡುತ್ತಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಚುನಾವಣೆಗೂ ಮುಂಚೆ ಜನತೆಗೆ ಕೊಟ್ಟ ಐದು ಗ್ಯಾರಂಟಿ ಯೋಜನೆಗಳ ಭರವಸೆ ಈಡೇರಿಸಿದೆ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಸರ್ಕಾರದ ಖಜಾನೆ ತುಂಬಿದೆ. ಜನರು ಕಟ್ಟುವ ತೆರಿಗೆ ಹಣ ಅಂಬಾನಿ, ಅದಾನಿ ಜೇಬಿಗೆ ಹೋಗಬಾರದು. ಜನರ ಅಭಿವೃದ್ಧಿಗೆ ಹೋಗಬೇಕು. ಬಡವರಿಗೆ ಗ್ಯಾರಂಟಿ ಯೋಜನೆ ಕೊಟ್ಟರೆ ಬಿಜೆಪಿಯವರು ಸಹಿಸುವುದಿಲ್ಲ. ಬಿಜೆಪಿಗರು ಶ್ರೀಮಂತರ ಪರವಾಗಿದ್ದರೆ, ಕಾಂಗ್ರೆಸ್ ಬಡವರ ಪರವಾಗಿದೆ. ಜನಪರವಾಗಿರುವ ಕಾಂಗ್ರೆಸ್ ಜನರಿಗೆ ಯಾವತ್ತೂ ಮೋಸ ಮಾಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಿದ್ಧಾಂತ ಎರಡೂ ಒಂದೇ ಆಗಿವೆ ಎಂದರು.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಎರಡು ದಶಕಗಳ ಹಿಂದೆ ರಾಜಕಾರಣಿಗಳು ಕಾನೂನು ಪದವೀಧರರಾಗಿದ್ದರು. ಇಂದಿನ ರಾಜಕಾರಣ ಶ್ರೀಮಂತರ ಕೈಗೆ ಹೋಗಿದೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಕಳಂಕ. ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ರಾಯರಡ್ಡಿ ಸಚಿವರಾಗಿ ರಾಜ್ಯದಲ್ಲಿ ಬದಲಾವಣೆ ತರುತ್ತಾರೆ ಎಂದರು.

ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಪ್ರಾಸ್ತಾವಿಕ ಮಾತನಾಡಿದರು.

ಇದೇ ವೇಳೆ ₹೩೧ ಕೋಟಿ ವೆಚ್ಚದ ಕಾಮಗಾರಿಗಳಾದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣ, ಪ್ರಜಾಸೌಧ, ಬೀರಲಿಂಗೇಶ್ವರ ದೇವಸ್ಥಾನದ ಸಮಾಜ ಮಂದಿರ ಹಾಗೂ ಜಗಜ್ಯೋತಿ ಬಸವೇಶ್ವರರ ಮೂರ್ತಿ ನಿರ್ಮಾಣಕ್ಕೆ ಅಡಿಗಲ್ಲು ಹಾಗೂ ಶಾಲೆ, ಕಾಲೇಜುಗಳ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲಾಯಿತು.

ಸಂಸದ ರಾಜಶೇಖರ ಹಿಟ್ನಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಸಾಹಿಲ್ ಬಾಗ್ಲಾ, ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒಗಳಾದ ನೀಲಗಂಗಾ ಬಬಲಾದ, ಬೆಟದಪ್ಪ ಮಾಳೆಕೊಪ್ಪ, ಪಪಂ ಮುಖ್ಯಾಧಿಕಾರಿ ನಾಗೇಶ, ಪಿಡಬ್ಲುಡಿ ಎಇಇ ಬಿ. ಮಲ್ಲಿಕಾರ್ಜುನ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಹನುಮಂತಗೌಡ ಪಾಟೀಲ್, ಶ್ರೀನಿವಾಸ ರೆಡ್ಡಿ, ಶರಣಪ್ಪ ಗಾಂಜಿ, ಸುಧೀರ ಕೊರ್ಲಹಳ್ಳಿ, ಡಾ. ಶಿವನಗೌಡ ದಾನರಡ್ಡಿ ಇದ್ದರು.