ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿಲಿವಿಲಿ ಒದ್ದಾಡಿಕೊಂಡೇ ಆಡಳಿತ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾವ ಸರ್ಕಾರ ಇರುತ್ತದೋ ತಿಳಿಯದು. ಅಧಿಕಾರಿಗಳು ಅದರಲ್ಲೂ ಸಹಕಾರಿ ಕ್ಷೇತ್ರದ ಅಧಿಕಾರಿಗಳು ಒತ್ತಡಕ್ಕೆ ಮಣಿಯದೇ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಎಚ್ಚರಿಸಿದರು.ಪಟ್ಟಣದ ಕನಕಭವನದಲ್ಲಿ ಮಂಗಳವಾರ ಆಯೋಜಿಸಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಸಂಘದ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಹಲವು ಕಾನೂನು ಉಲ್ಲಂಘಿಸಿ ಕೆಲಸ ನಡೆದಿದ್ದು, ಈ ಬಗ್ಗೆ ಕ್ಷೇತ್ರದಲ್ಲಿ ಉಗ್ರ ಪ್ರತಿಭಟನೆ ನಡೆಯಲಿದೆ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರಸದೆ ಆಡಳಿತ ನಡೆಸಿ ಪ್ರತಿಯೊಬ್ಬರಿಗೂ ಸಹಾಯವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ಆದರೆ ಇತ್ತೀಚಿನ ದಿನದಲ್ಲಿ ಕ್ಷೇತ್ರದಲ್ಲಿ ಸಹಕಾರಿ ಸಂಘ ನೊಂದಣಿ ಮಾಡಿಸುವುದೇ ಕಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸಹಕಾರ ಸಂಘ ನಿಯಮಾನುಸಾರ ಎಲ್ಲ ದಾಖಲೆ ಇದ್ದರೂ ಸ್ಥಳಿಯ ಸಹಕಾರಿ ಸಂಘಗಳ ನೊಂದಣಿ ಅಧಿಕಾರಿ ನೊಂದಾವಣೆ ಪ್ರಕ್ರಿಯೆಗೆ ಕೊಕ್ಕೆ ಹಾಕಿ ಪೆಂಡಿಂಗ್ ಇಡುವ ವಾತಾವರಣ ಸೃಷ್ಟಿಸಿದ್ದಾರೆ. ಈ ಎಲ್ಲವೂ ರಾಜಕಾರಣಿಯ ಒತ್ತಡದಿಂದ ನಡೆದಿದೆ ಎನ್ನುವ ಮಾಹಿತಿ ಇದ್ದು, ರಾಜಕೀಯ ಪಕ್ಷ 5 ವರ್ಷ ಅಧಿಕಾರದಲ್ಲಿದ್ದು ಹೋಗುತ್ತವೆ. ಆದರೆ ಸಹಕಾರಿ ಸಂಘ ಶಾಶ್ವತ, ಭವಿಷ್ಯದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿ ಇರುತ್ತದೋ ತಿಳಿಯದು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ಎಂದು ಎಚ್ಚರಿಸಿದರು.
ಡಿಸಿಸಿಗೆ ಮರುಜೀವ ನೀಡಿದೆ:ಡಿಸಿಸಿ ಬ್ಯಾಂಕ್ ಬಾಗಿಲು ಮುಚ್ಚುವ ಹಂತದಲ್ಲಿ ಅದರ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿ ದಾಖಲೆ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಿದ್ದೇನೆ. ರು. 370 ಕೋಟಿ ಠೇವಣಿಯಿಂದ ಒಂದು ಸಾವಿರ ಕೋಟಿ ಠೇವಣಿ ಹಾಗೂ ರು. 600 ಕೋಟಿಯಿಂದ ರು. 1, 600 ಕೋಟಿ ಸಾಲ ನೀಡಿ ರೈತರಿಗೆ ಅನುಕೂಲ ಕಲ್ಪಿಸಿದ್ದೇನೆ. ಈಗ ಪರಿಸ್ಥಿತಿ ಮತ್ತೊಮ್ಮೆ ಅಧಃಪತನದತ್ತ ಸಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಹಗರಣ ಎಲ್ಲರಿಗೂ ತಿಳಿದ ವಿಷಯ, ಈ ಪ್ರಕರಣದಲ್ಲಿ ಹಣ ಲೂಟಿ ಮಾಡಿದವರನ್ನು ಮತ್ತೆ ಅದೇ ಸ್ಥಳಕ್ಕೆ ನಿಯೋಜಿಸಿದ್ದು, ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಹಗರಣದಲ್ಲಿ ಕೊಳ್ಳೆ ಹೊಡೆದವರನ್ನು ತನಿಖೆಯಿಂದ ಬಿಟ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರಿಗೆ ನೋಟೀಸ್ ಜಾರಿಗೊಳಿಸಿ ತನಿಖೆ ನಡೆಸುತ್ತಿರುವುದು ದುರಂತದ ಪರಮಾವಧಿ. ಇಂತಹವರಿಂದ ಸಹಕಾರ ಕ್ಷೇತ್ರ ಉಳಿಯಲು ಸಾಧ್ಯವೇ ಎಂದು ರಾಜ್ಯಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು.ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಿ ದಾಖಲೆ ಪ್ರಮಾಣದ ಹಾಲು ಉತ್ಪತ್ತಿ ಮತ್ತು ಸಾಲ ವಸೂಲಾತಿ ಮಾಡಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗೌರವಿಸಲಾಯಿತು.
ಕೆ.ಎಂ.ಎಫ್ ನಿರ್ದೇಶಕ ಕೆ.ಎಸ್. ಕುಮಾರ್, ತೆಂಗು ನಾರಿನ ಸಹಕಾರಿ ಸಂಘದ ನಿರ್ದೇಶಕ ಮಹದೇವಸ್ವಾಮಿ ಮಾತನಾಡಿದರು.ನಗರಸಭೆ ಅಧ್ಯಕ್ಷ ಶರವಣ, ಹಾಪ್ ಕಾಮ್ಸ್ ನಿರ್ದೇಶಕ ಸೂರ್ಯಕುಮಾರ್, ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಹೇಮಂತ್ ಕುಮಾರ್, ಉಪಾಧ್ಯಕ್ಷ ರೇವಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬು ಇದ್ದರು.