ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದ್ದು, ರಾಜ್ಯದಲ್ಲಿ ನಾಲಾಯಕ್ ಸರಕಾರವಿದೆ. ಡಿ.ಕೆ. ಶಿವಕುಮಾರ ಅಧಿಕಾರ ವಹಿಸಿಕೊಂಡು ಮೂರು ತಿಂಗಳು ಗತಿಸಿದರೂ ಇನ್ನೂ ಟೇಕಾಫ್ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರಕಾರದ ವಿರುದ್ಧ ಗುಡುಗಿದರು.
ಕಾರಟಗಿ (ಕೊಪ್ಪಳ): ರಾಜ್ಯದಲ್ಲಿ ರೈತರು ಬರದಿಂದ ತತ್ತರಿಸುತ್ತಿದ್ದಾರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಾಹಾಕಾರವೆದ್ದಿದೆ. ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದ್ದು, ರಾಜ್ಯದಲ್ಲಿ ನಾಲಾಯಕ್ ಸರಕಾರವಿದೆ. ಡಿ.ಕೆ. ಶಿವಕುಮಾರ ಅಧಿಕಾರ ವಹಿಸಿಕೊಂಡು ಮೂರು ತಿಂಗಳು ಗತಿಸಿದರೂ ಇನ್ನೂ ಟೇಕಾಫ್ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರಕಾರದ ವಿರುದ್ಧ ಗುಡುಗಿದರು.
ಕಾಂಗ್ರೆಸ್ ಸರಕಾರ ವಿರುದ್ಧ ನಡೆಸುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯ ನಾಲ್ಕನೇ ದಿನ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣಕ್ಕೆ ಶುಕ್ರವಾರ ಪ್ರವೇಶ ಮಾಡಿದ್ದು, ಅದ್ದೂರಿ ಸ್ವಾಗತದೊಂದಿಗೆ ಕಾರ್ಯಕರ್ತರ ಸಂಭ್ರಮದಲ್ಲಿ ಇಲ್ಲಿನ ಕನಕದಾಸ ವೃತ್ತದಲ್ಲಿ ರಸ್ತೆಯ ತೆರದ ವಾಹನದಲ್ಲಿಯೇ ನಿಂತು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರುಸಿಎಂ ಅಧಿಕಾರ ವಹಿಸಿಕೊಂಡು ಮೂರು ತಿಂಗಳಾಗಿದೆ. ಆದರೂ ನಮ್ಮ ಸರ್ಕಾರ ಟೇಕಾಪ್ ಆಗಿಲ್ಲವೆಂದು ಸ್ವತಃ ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ಅಂಗವಿಕಲರಿಗೆ ಮಾಶಾಸನ ಬಂದಿಲ್ಲ. ಬಡವರಿಗೆ ಮನೆ ನೀಡಿಲ್ಲ. ಗಂಗಾಕಲ್ಯಾಣವಿಲ್ಲ. ಇಂಥ ನಾಲಾಯಕ್ ಸರ್ಕಾರವನ್ಮು ಈ ರಾಜ್ಯದ ಜನ ಕಂಡಿಲ್ಲ. ಟೌನ್‌ಶಿಪ್, ಏರ್ಪೋರ್ಟ್ ಮಾಡ್ತಾರೆ. ಕ-ಕ ಭಾಗದಲ್ಲಿ ವೈದ್ಯರಿಲ್ಲ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಲ್ಲ. ನಿಮ್ಮ ಪಾಪದ ಕೊಡ ತುಂಬಿದೆ. ಸೂರ್ಯ, ಚಂದ್ರ ಇರುವಷ್ಟೇ ಸತ್ಯವಾಗಿ೨೦೨೮ರಲ್ಲಿ ನಮ್ಮ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟ, ಜನ, ರೈತ ವಿರೋಧಿ ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ. ಭೀಕರ ಬರದಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ೩೬೦೦ ಜನ ರೈತರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ೯೦೦ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡೊತ್ತಿನ ಅನ್ನ ನೀಡುವ ರೈತರು ಹತಾಶರಾಗಿದ್ದಾರೆ. ನಾಡಿನ ದೊರೆ ಜನರ ಕಷ್ಟಕ್ಕೆ ಸ್ಪಂದಿಸುವ ಬದಲು ಹೆಲಿಕಾಪ್ಟರ್ ನಲ್ಲಿ ಬರ ವೀಕ್ಷಣೆ ಮಾಡ್ತಿದ್ದಾರೆ.ನೆರೆ ಆದಾಗ ವೈಮಾನಿಕ ವೀಕ್ಷಣೆ ಕೇಳಿದ್ದೇವೆ. ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ಬರ ವೈಮಾನಿಕ ಅಧ್ಯಯನ ನಡೆಸಿದ್ದು ಇದೇ ಮೊದಲು. ಈ ಪುಣ್ಯಾತ್ಮ ಡಿಕೆಶಿಗೆ ಮೇಲಿನಿಂದ ರಾಗಿ, ಜೋಳ, ಭತ್ತ ಯಾವುದು ಎಂದು ಹೇಗೆ ಗೊತ್ತಾಗುತ್ತೆ? ಕಾರಿನಲ್ಲಿ ಹೋದರೆ ಜನ ನಮ್ಮನ್ನು ಉಳಿಸುತ್ತಾರೊ ಇಲ್ಲವೋ ಎಂಬ ಭಯ ಕಾಡುತ್ತಿದೆ ಎಂದರು.
ರೈತರು ಎರಡು ಬೆಳೆಗೆ ನೀರಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಅಧಿಕಾರ ಶಾಶ್ವತವಲ್ಲ. ಬರ ಇದ್ದಾಗ ಪಾದಯಾತ್ರೆ ಮಾಡುತ್ತಾರೆ ಎಂದು ಹೇಳುತ್ತಾರೆ. ಭೀಕರ ಬರ ಇದ್ದಾಗ ಎಸಿ ರೂಂನಲ್ಲಿ ಕುಳಿತು ಬರ ಬಗ್ಗೆ ಸಭೆ ಮಾಡುತ್ತಿದ್ದೀರಿ. ನಾವು ಪಾದಯಾತ್ರೆ ಮಾಡಿದ್ದಕ್ಕೆ ಹೆಚ್ಚುವರಿ ೨೪ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದೀರಿ. ೨೦೨೮ರಲ್ಲಿ ನಾನೇ ಸಿಎಂ ಆಗಬೇಕು ಎಂದು ಹೇಳುತ್ತಾರೆ. ಅಧಿಕಾರ ಇದ್ದಾಗ ರೈತರ ಕಣ್ಣೀರು ಒರೆಸುವ ಕೆಲಸ ಮೊದಲು ಮಾಡಿ ಎಂದು ಒತ್ತಾಯಿಸಿದರು.ತುಂಗಭದ್ರಾ ಆಣೆಕಟ್ಟೆಯಲ್ಲಿ ೮೦ ಟಿಎಂಸಿ ನೀರಿದೆ. ಆದರೆ, ಇಲ್ಲೊಬ್ಬ ಸಚಿವ ದುರಹಂಕಾರದಿಂದ ಮಾತಾಡುತ್ತಾನೆ. ಇವರಪ್ಪನ ಮನೆಯಿಂದ ನೀರು ಕೊಡುತ್ತಾನಾ? ಅಧಿಕಾರದ ಮದದಿಂದ ಮಾತಾಡುತ್ತಾನೆ. ಜನ ಮತ್ತು ಬಿಜೆಪಿ ಕಾರ್ಯಕರ್ತರು ನಿನ್ನ ಮದ ಇಳಿಸುತ್ತಾರೆ ಎಂದು ಸಚಿವ ಶಿವರಾಜ್ ತಂಗಡಗಿ ಮತ್ತು ಸಿಎಂ ಅವರನ್ನು ವಿಜಯೇಂದ್ರ ಎಚ್ಚರಿಸಿದರು.
ತುಂಗಭದ್ರ ಅಣೆಕಟ್ಟೆಗೆ ಪರ್ಯಾಯವಾಗಿ ನವಲಿ ಡ್ಯಾಂ ಮಾಡುತ್ತಿಲ್ಲ. ಟಿಬಿ ಡ್ಯಾಂನಲ್ಲಿ ೩೦ ಟಿಎಂಸಿ ಹೂಳು ತುಂಬಿದೆ. ಸಮಾನಾಂತರ ಜಲಾಶಯ ಮಾಡಿ ನೀರು ಉಳಿಸುವ ಕೆಲಸ ಮಾಡಬೇಕು. ಅದನ್ನು ಮಾಡುತ್ತಿಲ್ಲ. ಕುಂಭಕರ್ಣ ನಿದ್ದೆಯಲ್ಲಿರುವ ನಿಮ್ಮನ್ನು ಬಡಿದೆಬ್ಬಿಸುವೆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅಧಿಕಾರದಲ್ಲಿ ಇರುವಷ್ಟು ದಿನ ಪ್ರಾಮಾಣಿಕವಾಗಿ ಜನಪರ ಆಡಳಿತ ಮಾಡಿ. ಜನ ಬರುವ ದಿನದಲ್ಲಿ ತಕ್ಕ ಪಾಠ ಕಲಿಸುವರು. ತಾಯಂದಿರು ಐದಾರು ಕಿಮೀ ನನ್ನೊಡನೆ ಪಾದಯಾತ್ರೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಕಿತ್ತೆಸೆಯಲು ನಮ್ಮ ಹೋರಾಟ. ಬಿಜೆಪಿ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಮನವಿ ಮಾಡಿದರು.