ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನೂ ಸೇರಿದಂತೆ ಕಾಯ್ದೆಯಲ್ಲಿನ ಹಲವು ಪ್ರಮುಖ ಅಂಶಗಳಿಗೆ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಹೆಸರು ಬದಲಿಸುವುದು ಮಾತ್ರವಲ್ಲ, ಗ್ರಾಪಂಗಳ ಶಕ್ತಿ ಕುಗ್ಗಿಸಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರದ ಈ ನೀತಿ ವಿರುದ್ಧ ಹೋರಾಟ ಮಾಡುವ ಸ್ಥಿತಿ ಬಂದಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.

ಶಿಗ್ಗಾಂವಿ: ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನೂ ಸೇರಿದಂತೆ ಕಾಯ್ದೆಯಲ್ಲಿನ ಹಲವು ಪ್ರಮುಖ ಅಂಶಗಳಿಗೆ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಹೆಸರು ಬದಲಿಸುವುದು ಮಾತ್ರವಲ್ಲ, ಗ್ರಾಪಂಗಳ ಶಕ್ತಿ ಕುಗ್ಗಿಸಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರದ ಈ ನೀತಿ ವಿರುದ್ಧ ಹೋರಾಟ ಮಾಡುವ ಸ್ಥಿತಿ ಬಂದಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.ತಾಲೂಕಿನ ದುಂಡಸಿ, ಶೀಲವಂತಸೋಮಾಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನರೇಗಾ ಯೋಜನೆ ಮೂಲಕ ಗ್ರಾಪಂಗಳು ತಮ್ಮ ವ್ಯಾಪ್ತಿಯಲ್ಲಿ ಕೆರೆ, ಕಾಲುವೆ, ನಮ್ಮ ಹೊಲ ನಮ್ಮ ದಾರಿ, ಗ್ರಾಮಗಳ ಸ್ವಚ್ಛತೆ, ಗಟಾರ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದವು. ಈ ಯೋಜನೆಯನ್ನು ಕೇಂದ್ರ ಸರ್ಕಾರ ನಿಲ್ಲಿಸಿದರೆ ಗ್ರಾಪಂಗಳು ಹೇಗೆ ಕೆಲಸ ಮಾಡಬೇಕು. ಕೇಂದ್ರ ಸರ್ಕಾರ ಮೆಕ್ಕೆಜೋಳ, ಕಬ್ಬಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ವರದಾ-ಬೇಡ್ತಿ ನದಿ ಜೋಡಣೆಗೆ ಸಹಕರಿಸುತ್ತಿಲ್ಲ.೧೫ನೇ ಹಣಕಾಸಿನ ಯೋಜನೆಯ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಯಿಂದ ಗ್ರಾಮೀಣಾಭಿವೃದ್ಧಿ ಕುಂಠಿತವಾಗುತ್ತದೆ ಎಂದರು.ಜನರ ಬೇಡಿಕೆಗೆ ಅನುಗುಣವಾಗಿ ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಯೋಜನೆಗಳನ್ನು ರೂಪಿಸುವುದರ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಪಂ ಇ.ಓ. ಮಂಜುನಾಥ ಸಾಳುಂಕೆ, ಗ್ರಾಪಂ ಅಧ್ಯಕ್ಷೆ ಹಸೀನಬೇಗ ಹೊಸೂರ, ರೇಣುಕಾ ಮುಲಗುಂದ, ಕೃಷಿಕ ಸಮಾಜದ ತಾಲೂಕಿನ ಅಧ್ಯಕ್ಷ ಹನುಮರೆಡ್ಡಿ ನಡುವಿನಮನಿ, ಈರಣ್ಣ ಮಾಲಿಂಗಶೆಟ್ಟರ, ಬಸವಣ್ಣಪ್ಪ ಹಿರೇಮಠ, ದಾವಲಸಬಾ ರಾಠೋಡ, ಮಹ್ಮದರಫೀಕ ಶಿರಗೋಡ, ರಾಮಪ್ಪ ಹರಕೂಣಿ, ಸವಿತಾ ತಳವಾರ, ಶಂಕರಗೌಡ ಪಾಟೀಲ, ವಿದ್ಯಾಶ್ರೀ ಅಕ್ಕಿ, ನೀಲಪ್ಪ ಹರಿಜನ ಇತರರಿದ್ದರು.