ಯಾವುದೇ ಒಬ್ಬ ಕಥೆಗಾರ ಕಲ್ಪನೆಯ ಮೂಲಕವೇ ಸತ್ಯ ಹೇಳುತ್ತಾನೆ. ತಮ್ಮ ಬದುಕಿನಿಂದ ಎತ್ತಿಕೊಂಡ ಸತ್ಯ ಘಟನೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಹೆಣೆದು ಪಾತ್ರ ಸೃಷ್ಟಿಸಿ ಭಾಷೆಯನ್ನು ದುಡಿಸಿಕೊಂಡಾಗ ಕಥೆ ಬೆಳೆಯುತ್ತದೆ.
ಧಾರವಾಡ:
ವಾಸ್ತವಿಕತೆಯ ಮತ್ತು ಕಲ್ಪಕತೆಯ ಹದವಾದ ಮಿಶ್ರಣವೇ ಕಥೆ ಎಂದು ಕಥೆಗಾರರು ಹಾಗೂ ಕಾದಂಬರಿಕಾರ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಹೇಳಿದರು.ಕೇಂದ್ರ ಸಾಹಿತ್ಯ ಅಕಾಡೆಮಿಯು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಥಾಸಂಧಿ ಸಂವಾದದಲ್ಲಿ ಮಾತನಾಡಿದ ಅವರು, ಯಾವುದೇ ಒಬ್ಬ ಕಥೆಗಾರ ಕಲ್ಪನೆಯ ಮೂಲಕವೇ ಸತ್ಯ ಹೇಳುತ್ತಾನೆ. ತಮ್ಮ ಬದುಕಿನಿಂದ ಎತ್ತಿಕೊಂಡ ಸತ್ಯ ಘಟನೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಹೆಣೆದು ಪಾತ್ರ ಸೃಷ್ಟಿಸಿ ಭಾಷೆಯನ್ನು ದುಡಿಸಿಕೊಂಡಾಗ ಕಥೆ ಬೆಳೆಯುತ್ತದೆ ಎಂದರು.
ತಮ್ಮ ಜನ್ಮ ಸ್ಥಳ ಹಾಗೂ ಕಾರ್ಯಕ್ಷೇತ್ರದಲ್ಲಿಯ ಪರಿಸರದ ಸಂಗತಿಗಳು ಕಥೆ, ಕಾದಂಬರಿಗಳಾಗಿ ಹೊರಬಂದಿವೆ. ಹಾಗೆಂದ ಮಾತ್ರಕ್ಕೆ ಅವು ಇತಿಹಾಸದ ದಾಖಲೆಗಳಲ್ಲ. ವರದಿಯ ಭಾಗಗಳೂ ಅಲ್ಲ. ಬಾಹ್ಯ ಅನುಭವದಿಂದ ತಾವು ಪಡೆದ ಜೀವನ ದರ್ಶನವನ್ನು ಬರವಣಿಗೆಯಲ್ಲಿ ಕಾಣಿಸಲು ಪ್ರಯತ್ನಿಸಿರುವುದಾಗಿ ತಿಳಿಸಿದರು. ತಾವು ಕವಿತೆ, ಪ್ರವಾಸ ಕಥನ ,ವ್ಯಕ್ತಿ ಚಿತ್ರ, ಇನ್ನಿತರ ಪ್ರಕಾರಗಳಲ್ಲಿ ಕೆಲಸ ಕಥನ ತಮ್ಮ ಪ್ರಮುಖ ಆಸಕ್ತಿ. ಕಥೆಗಾರನಿಗಿಂತ ಕಥೆ ಮುಖ್ಯವಾಗಿರಬೇಕು. ಸಹೃದಯ ಕಥೆಯನ್ನು ಓದಬೇಕೆ ಹೊರತು ಕಥೆಗಾರನಲ್ಲ. ಕಥಾ ವಸ್ತು ಲೇಖಕನ ತಲೆಯಲ್ಲಿ ಹೊಳೆದು ಕಥಾ ಸಂವಿಧಾನ ಒಂದು ಚೌಕಟ್ಟಿನಲ್ಲಿ ನಿರ್ಮಾಣವಾದರೂ ಅನೇಕ ಸಲ ಕಥೆಗಾರನನ್ನು ಮೀರಿ ಕಥನ ಬೇರೆ ಬೇರೆ ದಿಕ್ಕಿನಲ್ಲಿ ಚಾಚಿಕೊಳ್ಳುತ್ತದೆ. ಇದ್ದುದನ್ನು ಹೇಳುವುದಷ್ಠೆ ಲೇಖಕನ ಕೆಲಸವಲ್ಲ, ಅದು ಹೇಗಿರಬೇಕೆಂದು ದರ್ಶಿಸುವುದು ಕೂಡಾ ಆತನದ್ದೇ ಕರ್ತವ್ಯ ವಾಗಿದೆ ಎಂದರುಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಸಂವಾದದಲ್ಲಿ ಹಿರಿಯ ಸಾಹಿತಿಗಳಾದ ಶ್ರೀನಿವಾಸ ವಾಡಪ್ಪಿ, ಶಶಿಧರ ತೋಡಕರ, ದುಷ್ಯಂತ ನಾಡಗೌಡ, ಸುನಂದಾ ಕಡಮೆ, ಅನಸೂಯಾ ಕಾಂಬಳೆ ಭಾಗವಹಿಸಿದ್ದರು. ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಚನ್ನಪ್ಪ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಸ್. ಕೌಜಲಗಿ ಸ್ವಾಗತಿಸಿದರು. ಎಸ್.ಎಸ್. ದೊಡಮನಿ ಪರಿಚಯ ಮಾಡಿದರು. ಯಾಸ್ಮೀನ ಮೊಕಾಶಿ ನಿರೂಪಿಸಿದರು. ಹರ್ಷ ಡಂಬಳ, ಬಾಳಣ್ಣ ಶೀಗಿಹಳ್ಳಿ, ಬಸಯ್ಯ ಶಿರೋಳ, ಮಹಾಂತೇಶ ನರೇಗಲ್ಲ ಇದ್ದರು.