ಸಾರಾಂಶ
ಬೀದರ್‌ನ ಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ 20 ಲಕ್ಷ ರು. ವೆಚ್ಚದಲ್ಲಿ ಓಪನ್ ಜಿಮ್ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ದೇಶದಲ್ಲಿರುವ ಬಲಿಷ್ಠ ಯುವಶಕ್ತಿಯ ಪಡೆ ಇಂದು ವಿಶ್ವಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.ನಗರದಲ್ಲಿರುವ ಪ್ರತಿಷ್ಠಿತ ಶಾಲೆಯಾದ ಗ್ಲೋಬಲ್ ಸೈನಿಕ ಅಕಾಡೆಮಿ ಹಾಗೂ ಜ್ಞಾನಸುಧಾ ವಿದ್ಯಾಲಯದಲ್ಲಿ ಓಪನ್ ಜಿಮ್ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಪ್ರತಿನಿತ್ಯ ಜಿಮ್ ಮಾಡುವುದು ರೂಢಿಸಿಕೊಳ್ಳಬೇಕು. ಸಮಾಜದಲ್ಲಿಯ ಜನ ನಮ್ಮ ಮಾನಸಿಕ ನೆಮ್ಮದಿ ಹಾಳು ಮಾಡಲು ಪ್ರಯತ್ನಿಸುತ್ತಾರೆ. ಆದರೆ ನಮ್ಮ ಶುದ್ಧ ನಡೆ, ನುಡಿಯಿಂದ ಮಾನಸಿಕವಾಗಿ ಗಟ್ಟಿಯಾಗಿರಬೇಕೆಂದು ಎಲ್ಲಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜ್ಞಾನಸುಧಾ ವಿದ್ಯಾಲದಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಸ್ಥೆ ಪೂರ್ಣಿಮಾ ಜಾರ್ಜ್ ಮಾತನಾಡಿ, 20 ಲಕ್ಷ ವೆಚ್ಚದ ಓಪನ್ ಜಿಮ್ ನೀಡಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಭಗವಂತ ಖೂಬಾ ಅವರು ಮಾಡುತ್ತಿರುವ ಕೆಲಸ ಆದರ್ಶವಾಗಿದೆ ಎಂದರು.ಗ್ಲೋಬಲ್ ಸೈನಿಕ ಅಕಾಡೆಮಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿದೆ. ಶಿಸ್ತು, ಸಂಯಮ, ದೈಹಿಕ ಆರೋಗ್ಯ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಒಳ್ಳೆಯ ಹವ್ಯಾಸಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪೂರೆ ಮಾತನಾಡಿದರು. ಮುಖ್ಯಶಿಕ್ಷಕಿ ಜ್ಯೋತಿ ರಾಗ, ಪಿಆರ್‌ಒ ಕಾರಂಜಿ ಸ್ವಾಮಿ, ಸುಬೇದಾರ್ ಮಡೆಪ್ಪ, ಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.