ಸಾರಾಂಶ
ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ ಪೊಲೀಸರು ದಬ್ಬಾಳಿಕೆಯಿಂದ ಶಾಂತಿ ಕದಡುವಂತೆ ಮಾಡಿದ್ದಕ್ಕೆ ಸರ್ಕಾರವೇ ಪೂರ್ಣ ಹೊಣೆಯಾಗಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಪಂಚಮಸಾಲಿಗಳ ಹೋರಾಟ ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ದುರದೃಷ್ಟಕರ. ಸ್ವಾಮೀಜಿಗಳನ್ನು ಹೇಯವಾಗಿ ನಡೆಸಿಕೊಳ್ಳುವಲ್ಲಿ ಸರ್ಕಾರ ಕಾರಣವಾಗಿದೆ ಎಂದು ಸರ್ಕಾರದ ವಿರುದ್ಧ ಸಮಾಜದ ತಾಲೂಕಾಧ್ಯಕ್ಷ ಶ್ರೀಶೈಲ ದಲಾಲ ವಾಗ್ದಾಳಿ ನಡೆಸಿದರು.ಪ್ರತಿಭಟನಾನಿರತ ಪಂಚಮಸಾಲಿ ಸಮುದಾಯದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಖಂಡರ ಮೇಲೆ ಲಾಠಿ ಪ್ರಹಾರ ನಡೆಸಿರುವ ಪೊಲೀಸರ ಕ್ರಮ ವಿರೋಧಿಸಿ ರಬಕವಿ ಶಂಕರಲಿಂಗ ದೇವಸ್ಥಾನ ಮುಂಭಾಗದಲ್ಲಿ ತಾಲೂಕಿನ ನೂರಾರು ಮುಖಂಡರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ೨ಎ ಮೀಸಲಾತಿ ಬೇಡಿಕೆ ಈಡೇರಿಸುವಂತೆ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದವರು ನಿರಂತರ ಮನವಿ ಮಾಡುತ್ತಲೇ ಇದ್ದೇವೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ ಪೊಲೀಸರು ದಬ್ಬಾಳಿಕೆಯಿಂದ ಶಾಂತಿ ಕದಡುವಂತೆ ಮಾಡಿದ್ದಕ್ಕೆ ಸರ್ಕಾರವೇ ಪೂರ್ಣ ಹೊಣೆಯಾಗಿದೆ. ಸ್ವಾಮೀಜಿ ಹಾಗೂ ಸಮುದಾಯದವರ ಕ್ಷಮೆ ಕೇಳುವದರೊಂದಿಗೆ ಬೇಡಿಕೆ ಈಡೇರಿಸಬೇಕೆಂದು ದಲಾಲ ಆಗ್ರಹಿಸಿದರು.
ತಕ್ಕ ಬೆಲೆ ತರಬೇಕಿದೆ:ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿ ಕ್ಷಮಿಸಲಾರದಂತ ತಪ್ಪು ಮಾಡಿದೆ. ಇದಕ್ಕೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ದಲಾಲ ತಿಳಿಸಿದರು.
ಸುರೇಶ ಪಟ್ಟಣಶೆಟ್ಟಿ ಮಾತನಾಡಿ, ಸರ್ಕಾರದ ದ್ವೇಷ ಮನೋಭಾವದಿಂದ ಹೋರಾಟಗಾರರ, ವಕೀಲರ, ಮುಖಂಡರ ಮೇಲೆ ಲಾಠಿ ಚಾರ್ಜ್ ಮಾಡಿರುವದು ಖಂಡನೀಯ. ಸ್ವಾಮೀಜಿಗಳನ್ನು ಬಂಧಿಸುವ ಹೇಯ ಕೃತ್ಯ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಮುದಾಯದವರಿಂದ ತಕ್ಕ ಪಾಠ ಕಲಿಸಲಿದ್ದೇವೆಂದರು. ನ್ಯಾಯಸಮ್ಮತ ಹೋರಾಟಕ್ಕೆ ಸರ್ಕಾರ ಮಾನ್ಯತೆ ನೀಡಿ ೨ಎ ಮೀಸಲಾತಿ ಒದಗಿಸದಿದ್ದರೆ ರಾಜ್ಯಾದ್ಯಂತ ಹೋರಾಟದ ಸ್ವರೂಪ ಬದಲಿಸುವ ಮೂಲಕ ಸರ್ಕಾರವು ಭಾರಿ ತಲೆದಂಡ ಅನುಭವಿಸುವುದು ನಿಶ್ಚಿತವೆಂದರು. ಇದೇ ಸಂದರ್ಭ ತಹಸೀಲ್ದಾರ್ ಗಿರೀಶ ಸ್ವಾದಿಯವರಿಗೆ ಮನವಿ ಅರ್ಪಿಸಲಾಯಿತು.ಬೆಂಬಲ:
ಲಾಠಿಚಾರ್ಜ್ ಘಟನೆಗೆ ರಬಕವಿಯಲ್ಲಿ ಪ್ರತಿಭಟನೆಯೊಂದಿಗೆ ಖಂಡನೆಗೆ ಪಂಚಮಸಾಲಿ ಸಮಾಜಕ್ಕೆ ಬಣಜಿಗ, ಶಿವಶಿಂಪಿ ಸೇರಿದಂತೆ ಇತರೆ ಸಮಾಜವು ಬೆಂಬಲ ಸೂಚಿಸುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮಹಾದೇವ ಧೂಪದಾಳ, ಬಾಬಾಗೌಡ ಪಾಟೀಲ, ಲಕ್ಕಪ್ಪ ಪಾಟೀಲ, ಸಿದ್ಧನಗೌಡ ಪಾಟೀಲ, ಮಲ್ಲಪ್ಪ ಜನವಾಡ, ಸಂಗಮೇಶ ಪಾಟೀಲ, ಮಹಾದೇವ ಕೋಟ್ಯಾಳ, ರವಿ ದೇಸಾಯಿ, ಸಂಜಯ ಸಿದ್ದಾಪೂರ, ರವಿ ಸಂಪಗಾಂವಿ, ಸಂಜು ತೆಗ್ಗಿ ಸೇರಿದಂತೆ ಅನೇಕರಿದ್ದರು.