ತಹಸೀಲ್ದಾರ್ ಕಚೇರಿ ಎದುರುಗಡೆ ಮುಳವಾಡ ಭೂ ಹಿತರಕ್ಷಣಾ ನಿರಾಶ್ರಿತರ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಳೆದ 12 ದಿನಗಳಿಂದ ನಡೆಯುತ್ತಿರುವ ಮುಳವಾಡ ಕೆಐಎಡಿಬಿ ಸಂತ್ರಸ್ತರ ಹೋರಾಟದ ಸ್ಥಳಕ್ಕೆ ಶುಕ್ರವಾರ ಧಾರವಾಡ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಕವಿತಾ ಯೋಗಪ್ಪನವರ ಭೇಟಿ ಸಂಧಾನ ಯತ್ನ ನಡೆಸಿದರು.
ಕನ್ನಡಪ್ರಭ ವಾರ್ತೆ ಕೊಲ್ಹಾರ
ತಹಶೀಲ್ದಾರ ಕಚೇರಿ ಎದುರುಗಡೆ ಮುಳವಾಡ ಭೂ ಹಿತರಕ್ಷಣಾ ನಿರಾಶ್ರಿತರ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಳೆದ 12 ದಿನಗಳಿಂದ ನಡೆಯುತ್ತಿರುವ ಮುಳವಾಡ ಕೆಐಎಡಿಬಿ ಸಂತ್ರಸ್ತರ ಹೋರಾಟದ ಸ್ಥಳಕ್ಕೆ ಶುಕ್ರವಾರ ಧಾರವಾಡ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಕವಿತಾ ಯೋಗಪ್ಪನವರ ಭೇಟಿ ಸಂಧಾನ ಯತ್ನ ನಡೆಸಿದರು.ಈ ವೇಳೆ ಡಾ.ಕವಿತಾ ಯೋಗಪ್ಪನವರ ಅವರು ಭೂ ಸಂತ್ರಸ್ತ ರೈತರೊಂದಿಗೆ ಚರ್ಚಿಸಿ, ಕೆಲವು ಬೇಡಿಕೆಗಳಾದ ಜೆಎಂಸಿ ಅಡಿ ಗಿಡ ಮರಗಳಿಗೆ ಪರಿಹಾರ, ಯೋಜನಾ ನಿರಾಶ್ರಿತರ ಪ್ರಮಾಣಪತ್ರ, ಉದ್ಯೋಗಾವಕಾಶ ನೀಡುವುದು, ಕೆಲವು ಮಾಲ್ಕಿಗಳ ವೇತನ ಪಾವತಿ ಬಾಕಿ ಇರುವುದನ್ನು ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.ಕೆಐಎಡಿಬಿ ವಶಪಡಿಸಿಕೊಂಡ 3230 ಎಕರೆ ಜಮೀನಿನ ಪೈಕಿ 3000 ಎಕರೆ ಭೂಮಿಗೆ ಪರಿಹಾರ ನೀಡಿದೆ. ಬಾಕಿ ಇರುವ 197 ಎಕರೆಯಲ್ಲಿ 91 ಎಕರೆ ಸರ್ಕಾರಿ ಜಮೀನಿದೆ. ಉಳಿದ ಜಮೀನು ನ್ಯಾಯಾಲಯದಲ್ಲಿ ವ್ಯಾಜ್ಯವಿದೆ. ಕೆಲವು ರೈತರು ಮಾಲ್ಕಿ ಜಮೀನಿಗೆ ಹಾಗೂ ಜೆಎಂಸಿ ಅಡಿ ಗಿಡ ಮರಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಈಗಾಗಲೇ ಹಣ ಬಿಡುಗಡೆ ಆಗಿದೆ. ಆದರೆ ಇನ್ನೂ ಯಾರಿಗೆ ಪರಿಹಾರ ಸಿಕ್ಕಿಲ್ಲ. ಅದನ್ನು ಪರಿಶೀಲನೆ ಮಾಡುತ್ತೇನೆ ಎಂದರು. ಆದರೆ, ಇದಕ್ಕೆ ಒಪ್ಪದ ರೈತರು, ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಿಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಎಲ್‌ಒ, ರೈತರ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಇನ್ನುಳಿದ ಬೇಡಿಕೆಗಳು ಸರ್ಕಾರದ ಹಂತದಲ್ಲಿ ಆಗುತ್ತವೆ. ಹೀಗಾಗಿ ಸರ್ಕಾರಕ್ಕೆ ರೈತರ ಬೇಡಿಕೆಯನ್ನು ಸಲ್ಲಿಸುತ್ತೇನೆ. ಕನ್ಸಂಟ್ ಅವಾರ್ಡ್ ಪ್ರಕಾರ ಭೂ ಪರಿಹಾರದ ಹಣಕ್ಕೆ ಬಡ್ಡಿ ಹಣ ಕೊಡಲು ಬರುವುದಿಲ್ಲ. ಅದರೆ ಜನರಲ್ ಅವಾರ್ಡ್ ಪ್ರಕಾರ ಕೋರ್ಟ್‌ಗೆ ಹೋದರೆ ಕೊಡಬಹುದು ಎಂದರು. ರೈತರು, ಹಂತ ಹಂತವಾಗಿ ಕೊಟ್ಟ ಭೂ ಪರಿಹಾರಕ್ಕೆ ಶೇ.18 ಬಡ್ಡಿ ಕೊಡಬೇಕು ಎಂದು ಒತ್ತಾಯಿಸಿದರು. ಜತೆಗೆ ನಮಗೆ ನ್ಯಾಯ ಸಿಗುವವರೆಗೂ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಮಾತನಾಡಿ, ನಾನು ಕೂಡ ಮುಳವಾಡ ಕೆಐಎಡಿಬಿಗೆ 40 ಎಕರೆ ಭೂಮಿ ಕೊಟ್ಟಿದ್ದೇನೆ. ಅದರಲ್ಲಿ 5 ಎಕರೆ ಜೆಎಂಸಿ ಆಗಿದೆ. 35 ಎಕರೆಗೆ ಕೆಐಎಡಿಬಿ ಬೋಜಾ ಇದೆ. ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಅಲ್ಲಿ ಅಭಿವೃದ್ಧಿ ಮಾಡಲಿಕ್ಕೆ ಎಲ್ಲ ರೀತಿ ಸಹಕಾರ ಕೊಟ್ಟಿದ್ದೇವೆ. ಇಲ್ಲಿಯವರೆಗೆ ಯಾವುದೇ ತೊಂದರೆ ಮಾಡಿಲ್ಲ ಎಂದರು. ಈ ವೇಳೆ ಭೂ ಹಿತರಕ್ಷಣಾ ನಿರಾಶ್ರಿತರ ರೈತ ಸಂಘದ ಉಪಾಧ್ಯಕ್ಷ ಬಸವರಾಜ ಬೀಳಗಿ ಮಾತನಾಡಿ, ಕೆಐಡಿಬಿಯವರು 2013ರ ನಿಯಮದ ಪ್ರಕಾರ ಶೇ 18 ನಮಗೆ ಪರಿಹಾರ ಕೊಡಬೇಕು. ಗಿಡ ಮರಗಳಿಗೂ ಪರಿಹಾರ ಕೊಡಬೇಕು. ಭೂ ಸಂತ್ರಸ್ತರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಬೇಡಿಕೆಗೆ ಒತ್ತಾಯಿಸಿದರು.ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ರೈತರ ಪರವಾಗಿ ಇರಬೇಕಾದ ಕೆಐಡಿಬಿ ಅಧಿಕಾರಿಗಳು ರೈತರ ಬೇಡಿಕೆಗಳ ವಿರುದ್ಧ ಕೋರ್ಟ್‌ಗೆ ಹೋದರೆ ಅವರಿಗೆ ಅನ್ಯಾಯವಾಗುತ್ತದೆ. ಕೂಡಲೇ ರೈತರ ವಿರುದ್ಧದ ಕೋರ್ಟ್ ಕೇಸ್‌ಗಳನ್ನು ವಾಪಸ್ ಪಡೆದು ನ್ಯಾಯಯುತ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.ಈ ವೇಳೆ ರೈತರು ಬೇಡಿಕ ಈಡೇರದ ಹಿನ್ನೆಲೆಯಲ್ಲಿ ಕೆಐಡಿಬಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ತಹಸೀಲ್ದಾರ ಎಸ್.ಎಚ್.ಅರಕೇರಿ, ಸಿಪಿಐ ಶರಣಗೌಡ ಗೌಡರ, ಅಪರಾಧ ವಿಭಾಗದ ಪಿಎಸ್‌ಐ ರೇಣುಕಾ ಹಳ್ಳಿ, ಮುಳವಾಡ ಭೂ ಹಿತರಕ್ಷಣಾ ನಿರಾಶ್ರೀತರ ರೈತ ಸಂಘದ ಅಧ್ಯಕ್ಷ ಶಿವಾನಂದ ಕೆಂಗಲಗುತ್ತಿ, ಉಪಾಧ್ಯಕ್ಷ ಬಸವರಾಜ ಬೀಳಗಿ, ಕಾರ್ಯದರ್ಶಿ ಅರ್ಜುನ ಹರಿಜನ, ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ಸೋಮು ಬಿರಾದಾರ, ಅಶೋಕ ಕಳಸಗೊಂಡ, ಶರಣಪ್ಪ ಅಂಗಡಿ, ಸಿದ್ದಪ್ಪ ಬೀಳಗಿ, ರಾಮಚಂದ್ರ ಪತ್ತಾರ, ಶ್ರೀಶೈಲ ಕೆಂಗಲಗುತ್ತಿ, ಕರವೇ ಅಧ್ಯಕ್ಷ ರವಿ ಗೊಳಸಂಗಿ ಸೇರಿದಂತೆ ಮುಳವಾಡ, ಮಲಘಾಣ ಹಾಗೂ ಕಲಗುರ್ಕಿ ಗ್ರಾಮದ ಸಾವಿರಾರು ರೈತರು ಇದ್ದರು.