ತಾಲೂಕಿನ ದಿಗ್ಗೇನಹಳ್ಳಿ ಗ್ರಾಮದಲ್ಲಿ ಮನೆ ಮತ್ತು ನಿವೇಶನ ರಹಿತರು ಗ್ರಾಮದ ಮುಂಭಾಗದ ಸರ್ಕಾರಿ ಜಾಗದಲ್ಲಿ ಗೂಟಗಳನ್ನು ನೆಟ್ಟು ಮನೆ ಮತ್ತು ನಿವೇಶನ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಗುರುವಾರ 3ನೇ ದಿನಕ್ಕೆ ಕಾಲಿಟ್ಟಿದೆ.
ಚನ್ನಗಿರಿ: ತಾಲೂಕಿನ ದಿಗ್ಗೇನಹಳ್ಳಿ ಗ್ರಾಮದಲ್ಲಿ ಮನೆ ಮತ್ತು ನಿವೇಶನ ರಹಿತರು ಗ್ರಾಮದ ಮುಂಭಾಗದ ಸರ್ಕಾರಿ ಜಾಗದಲ್ಲಿ ಗೂಟಗಳನ್ನು ನೆಟ್ಟು ಮನೆ ಮತ್ತು ನಿವೇಶನ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಗುರುವಾರ 3ನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನೆಗೆ ಗುರುವಾರ ತಾಲೂಕು ಹಸಿರು ಸೇನೆಯ ಅಧ್ಯಕ್ಷ ಬಸವಾಪುರ ರಂಗನಾಥ್ ಬೆಂಬಲ ಸೂಚಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಗ್ರಾಮದಲ್ಲಿ ಸುಮಾರು 50 ಹರಿಜನ ಮನೆಗಳಿದ್ದು, ಒದೊಂದು ಮನೆಗಳಲ್ಲಿ 3ರಿಂದ 4ಕುಟುಂಬಗಳು ವಾಸವಾಗಿದೆ. ಇವರಿಗೆ ಗ್ರಾಮದ ಸುತ್ತಮುತ್ತಲಿನಲ್ಲಿ ಲಭ್ಯವಿರುವ ಸರ್ಕಾರಿ ಜಾಗವನ್ನು ಗುರುತಿಸಿ ನಿವೇಶನ ಮಂಜೂರು ಮಾಡಬೇಕು ಅಲ್ಲಿಯ ವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.ಈ ಗ್ರಾಮದ ಮುಂಭಾಗದಲ್ಲಿ ಸರ್ಕಾರಿ ಜಮೀನಿದ್ದು, ಈ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಅದನ್ನು ಕೂಡಲೇ ತೆರವು ಗೊಳಿಸಬೇಕು. ಮನೆ ಮತ್ತು ನಿವೇಶನಗಳಿಲ್ಲದ ಬಡವರಿಗೆ ಕೂಡಲೇ ನಿವೇಶನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಈ ಗ್ರಾಮದ ಸಮೀಪದಲ್ಲಿಯೇ ದೇವರ ಜಮೀನು ಇದ್ದು ಅಲ್ಲಿಯಾದರೂ ನಿವೇಶನ ಮಂಜೂರು ಮಾಡಿ ಕೊಡಬೇಕು. ದೀನ ದಲಿತರ ಪರವಾಗಿ ಅಧಿಕಾರಿಗಳು ಕೆಲಸ ಮಾಡಬೇಕಾಗಿದ್ದು, ಉಳ್ಳವರ ಪರವಾಗಿ ಅಧಿಕಾರಿಗಳು-ಜನಪ್ರತಿನಿಧಿಗಳು ಕೆಲಸ ಮಾಡಿದರೆ ಬಡವರು ದಂಗೆ ಹೇಳುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನಾ ಸ್ಥಳಕ್ಕೆ ಪಿಡಿಒ ಆಶಾ, ಅಧ್ಯಕ್ಷೆ ಶೋಭಾ, ಸದಸ್ಯರಾದ ರಾಧಮ್ಮ, ಜಯಮ್ಮ, ನಾಗರಾಜ್, ಮಂಜಪ್ಪ ಭೇಟಿ ನೀಡಿ ಪ್ರತಿಭಟನಾ ನಿರತರಿಂದ ಅಹವಾಲು ಆಲಿಸಿದರು.
ಪ್ರತಿಭಟನೆಯಲ್ಲಿ ಡಿಎಸ್‌ಎಸ್‌ನ ಮುಖಂಡ ಕುಬೇಂದ್ರಸ್ವಾಮಿ, ರೇಖಾ, ಮಂಜುಳಾ, ಸುಶೀಲಮ್ಮ, ಗಂಗಮ್ಮ, ರುದ್ರಮ್ಮ, ಸಾವಿತ್ರಮ್ಮ, ಯಶೋಧಮ್ಮ, ಮಂಜಪ್ಪ ಮತ್ತಿತರರಿದ್ದರು.