ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಉದ್ಯೋಗ ಸೇರಿದಂತೆ ಎಲ್ಲ ವಲಯದಲ್ಲಿ ಒಳ ಮೀಸಲು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲವೆಂದು ಆದಿ ಜಾಂಬವ ಗುರುಪೀಠದ ಷಡಕ್ಷರ ಮುನಿ ಸ್ವಾಮೀಜಿ ಹೇಳಿದರು.ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿ ಮೈತ್ರಿವನದಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ಭಾನುವಾರ ಚಿತ್ರದುರ್ಗಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ಸಮುದಾಯ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಕೊಟ್ಟ ಆಶ್ವಾಸನೆಯನ್ನು ಉಳಿಸಿಕೊಳ್ಳುವಲ್ಲಿ ತನ್ನ ಬದ್ಧತೆ ಪ್ರದರ್ಶಿಸಿಲ್ಲ. ಮೂರು ದಶಕಗಳ ಹೋರಾಟವನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ವಿಷಾದನೀಯ ಎಂದರು.
ಸರ್ಕಾರ ಮಾದಿಗ ಸಮುದಾಯದ ನೋವನ್ನು ಕೇಳಿಯೂ ಬುಗುರಿ ರೀತಿ ಆಟ ಆಡಿಸುತ್ತಿದೆ. ಇದಕ್ಕಾಗಿ ತಾವು ಪಾದಯಾತ್ರೆ ಕೈಗೊಂಡಿರುವೆ. ಬೆಂಗಳೂರು ತಲುಪಿ ಫ್ರೀಡಂ ಪಾರ್ಕಿನಲ್ಲಿ ಒಳಮೀಸಲಾತಿ ಜಾರಿ ಆಗುವವರೆಗೂ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ತಿಳಿಸಿದರು.ರಾಜ್ಯ ಸರ್ಕಾರ ಚುನಾವಣೆ ಸಮಯದಲ್ಲಿ ಭರವಸೆ ನೀಡಿ ಇದೀಗ ಮೂರು ವರ್ಷಗಳೇ ಉರುಳುತ್ತಾ ಬಂದರೂ ಕೊಟ್ಟ ಮಾತು ಉಳಿಸಿಕೊಳ್ಳದೇ ಬರೀ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಆಳುವ ಸರ್ಕಾರಗಳು ನೊಂದ ಸಮುದಾಯಗಳ ಹಿತ ಕಾಯಬೇಕೇ ಹೊರತು ಯಾವುದೋ ಒಂದು ಸಮುದಾಯದ ಗೊಡ್ಡು ಬೆದರಿಕೆಗಳಿಗೆ ಬಲಿಯಾಗಿ ಬೇಕಾಬಿಟ್ಟಿಯಾಗಿ ನಡೆಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಚ್. ಮೋಹನ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡದೇ ಇದ್ದರೆ ರಾಜ್ಯದ ಮಾದಿಗ ಸಮುದಾಯ ಇದೇ ಷಡಕ್ಷರಮುನಿ ಸ್ವಾಮೀಜಿ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಘೋಷಿಸಿದರು.
ಮಾದಿಗರ ಒಳಿತಿಗಾಗಿ ಪಾದಯಾತ್ರೆ ಮಾಡುತ್ತಿರುವ ಷಡಕ್ಷರಮುನಿ ಸ್ವಾಮೀಜಿಯವರಿಗೆ ಸಮುದಾಯದ ಜನತೆ ಅಭೂತಪೂರ್ವ ಬೆಂಬಲ ನೀಡಬೇಕು. ಎಲ್ಲ ಪಕ್ಷಗಳಲ್ಲಿ ಇರುವ ಮಾದಿಗ ಸಮುದಾಯದ ಮುಖಂಡರು ಒಂದಾಗಿ ನಿಲ್ಲಬೇಕು. ಸಮುದಾಯದ ಹಿತ ಕಾಯಲು ಸಾಧ್ಯವಾಗದಿದ್ದರೆ ಅವರೇಕೆ ರಾಜಯೀಯ ಮಾಡಬೇಕು ಎಂದು ಪ್ರಶ್ನಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಪಿ ಪ್ರಕಾಶಮೂರ್ತಿ, ಎನ್.ನರಸಿಂಹರಾಜು, ನಗರಸಭೆ ಮಾಜಿ ಸದಸ್ಯೆ ತಾರಾದೇವಿ, ಕೆ.ಪಿ ಶ್ರೀನಿವಾಸ್, ಓಂಕಾರ್, ನಿವೃತ್ತ ನೌಕರ ಸಂಘದ ವೀರಣ್ಣ, ರೇವಣಸಿದ್ದಪ್ಪ, ನಿವೃತ್ತ ಮುಖ್ಯ ಇಂಜಿನಿಯರ್ ಕೆ.ಜೆ ಜಗದೀಶ್, ನಿವೃತ್ತ ಎಂಜಿನಿಯರ್ ಪಾತಣ್ಣ, ಡಿ.ಟಿ ಜಗನ್ನಾಥ್, ಬಾಬುರಾಜ್ , ಶ್ರೀನಿವಾಸ ಮೂರ್ತಿ, ಜಾಲಿಕಟ್ಟೆ ಗೌತಮ್, ಲಕ್ಷ್ಮೀಸಾಗರ ದೇವರಾಜ್ , ನವನೀತ ಸೇರಿದಂತೆ ಸಂಘದ ಪದಾಧಿಕಾರಿಗಳು ಸೇರಿದಂತೆ ಸಮುದಾಯದ ಹೋರಾಟಗಾರರು ಹಾಜರಿದ್ದರು.