ಸಾರಾಂಶ
ದೇಶಿ ಕಲೆ ಪ್ರದರ್ಶಿಸಿ ಸೈ ಎನಿಸಿಕೊಂಡ ಕಲಾವಿದರು । ವಿವಿಧ ವೇಷ, ಸ್ಥಬ್ಧಚಿತ್ರ ಸಿದ್ಧತೆಗಾಗಿ ಬಹು ಬೇಡಿಕೆಮಾರುತಿ ಶಿಡ್ಲಾಪೂರ
ಕನ್ನಡಪ್ರಭ ವಾರ್ತೆ ಹಾನಗಲ್ಲಮನುಷ್ಯನಿಗೆ ಮಹಾಪುರುಷರ ವೇಷಭೂಷಣ ತೊಡಿಸುವ, ಸ್ತಬ್ಧ ಚಿತ್ರಗಳನ್ನು ಅಂದಗೊಳಿಸುವ, ಯೋಧರಿಗೆ ಡೊಳ್ಳು ಕುಣಿತ ಕಲಿಸಿ ಮನ್ನಣೆ ಪಡೆದ ಹಾನಗಲ್ಲಿನ ಕಲಾವಿದ ರಾಮಕೃಷ್ಣ ಸುಗಂಧಿ ಕುಟುಂಬ ಸಾಂಪ್ರದಾಯಿಕ ಅಲಂಕಾರ ಕಲೆಯಲ್ಲಿ ತಲ್ಲೀನವಾಗಿದೆ.
ನಾಲ್ಕು ದಶಕಗಳಾಚೆ ಅಲಂಕಾರ ಸಾಮಗ್ರಿಗಳೇ ಸಿಗದ ಕಾಲದಲ್ಲಿ ಅಂಟು ಮೈದಾಗಳಿಂದ ವಿವಿಧ ಸಾಮಗ್ರಿಗಳನ್ನು ರಚಿಸಿ ವೇಷಭೂಷಣ ಅಲಂಕಾರಗಳಿಗೆ ಮೆರುಗು ನೀಡುತ್ತಿದ್ದ ರಾಮಕೃಷ್ಣ ಸುಗಂಧಿ ಅವರ ಕುಟುಂಬ ಈ ಕಲೆಯನ್ನು ಒಂದು ಸವಾಲಾಗಿ ಸ್ವೀಕರಿಸಿದೆ.ಮೊದಮೊದಲು ಮಕ್ಕಳಿಗೆ ವೇಷ ಭೂಷಣಗಳನ್ನು ಹಾಕಿ ಅಲಂಕರಿಸಿ ಹೆಸರು ಮಾಡಿದ ಇವರಿಗೆ ಈಗ ಜಾತ್ರೆ ಮದುವೆ ಜಾಗೃತಿ ಕಾರ್ಯಕ್ರಮಗಳಲ್ಲಿ ವಿವಿಧ ವೇಷ, ಸ್ತಬ್ಧಚಿತ್ರ ಸಿದ್ಧತೆಗಾಗಿ ಬಹು ಬೇಡಿಕೆ ಬಂದಿದೆ. ಈ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದು ನೂರಾರು ಜನರಿಗೆ ಏಕಕಾಲಕ್ಕೆ ವೇಷ ತೊಡಿಸುವಷ್ಟು ಸಾಮಗ್ರಿಗಳನ್ನು ಕಲೆ ಹಾಕಿದ್ದಾರೆ. ಶಿವಾಜಿ, ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣ, ಝಾನ್ಸಿಬಾಯಿ, ಬಸವಣ್ಣ, ವಿವೇಕಾನಂದ, ಅಕ್ಕಮಹಾದೇವಿ ಸೇರಿದಂತೆ ಅನೇಕ ರಾಜಮಹಾರಾಜರ ವೇಷಭೂಷಣ ಸೇರಿದಂತೆ ಯಾವುದೇ ಮಹಾಪುರುಷರ ವೇಷವನ್ನು ಅಚ್ಚುಕಟ್ಟಾಗಿ ತೊಡಿಸಿ, ಬಣ್ಣ ಬರೆದು ಬೆರಗಾಗುವಂತಹ ಮೆಚ್ಚುಗೆ ಪಡೆದಿದ್ದಾರೆ. ನೃತ್ಯಗಳಿಗೆ ಬೇಕಾಗುವ ಉಡುಗೆ ತೊಡುಗೆಗಳನ್ನು ತೊಡಿಸಿ ಅಂದಗೊಳಿಸುತ್ತಾರೆ.
ಇತ್ತೀಚೆಗೆ ಮದುವೆ ಮಂಟಪಗಳಲ್ಲಿ ವಧು-ವರರನ್ನು ಡೋಲಿಯಲ್ಲಿ ಕರೆ ತರುವ ಅಲಂಕಾರ ದೃಶ್ಯಕ್ಕೆ ಭಾರೀ ಬೇಡಿಕೆ ಬಂದಿದೆ. ದೇಶಿ ಕಲೆ ಮತ್ತು ಭಾರತೀಯ ಸಾಂಪ್ರದಾಯಿಕ ಕಲೆಗೆ ಮಾತ್ರ ಇವರ ಅಲಂಕಾರ. ವಿದೇಶ ಕಲೆ ಅಥವಾ ಅಂತಹ ವೇಷಕ್ಕೆ ನಮ್ಮ ಶ್ರಮ ಹಾಕುವುದಿಲ್ಲ ಎನ್ನುತ್ತಾರೆ ಸುಗಂಧಿ ಕುಟುಂಬ.ಇವರು ಅಲಂಕರಿಸಿ ಪ್ರದರ್ಶಿಸಿದ ಬೇಡರ ವೇಷ ಭಾರೀ ಪ್ರಸಿದ್ಧಿ ಪಡೆದಿದ್ದು ಮೈಸೂರು ದಸರಾದಲ್ಲಿ ಬಹುಮಾನ ಪಡೆದಿದೆ. ಆಳ್ವಾಸ್ ನುಡಿಸಿರಿ, ಅಂತಾರಾಷ್ಟ್ರೀಯ ಕರಕುಶಲ ಮೇಳ (ಹರಿಯಾಣ), ಮಹಾರಾಷ್ಟ್ರ, ಕೇರಳ, ಪಂಜಾಬ್, ಆಂಧ್ರ ಹಾಗೂ ರಾಜ್ಯದ ಸಾಹಿತ್ಯ ಸಮ್ಮೇಳನ ಸೇರಿದಂತೆ ಹೊರ ರಾಜ್ಯಗಳಲ್ಲಿ ದೇಶಿ ಕಲೆಯನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಒಬ್ಬ ವಿದ್ಯಾರ್ಥಿಗೆ ಶಿಲಾಬಾಲಿಕೆಯರ ವೇಷಭೂಷಣ ತೊಡಿಸಿ ನೋಡುಗರಿಗೆ ಸೋಜಿಗವನ್ನೇ ಉಂಟು ಮಾಡಿರುವ ಈ ಕಲಾವಿದರಿಗೆ ಹೊಸ ಪ್ರಯೋಗ ಮಾಡಿದ ತೃಪ್ತಿ ಇದೆ. ಹೋಳಿ ಹುಣ್ಣಿಮೆಯಲ್ಲಿ ಸೋಗು ಹಾಕುವವರಿಗೆ, ಹುಲಿವೇಷದವರನ್ನು ಅಲಂಕರಿಸುವುದರಲ್ಲಿ ಸಿದ್ಧ ಹಸ್ತರು. ಆದರೆ ಸಾಮಗ್ರಿ ಸಿದ್ಧಪಡಿಸುವುದು ತೀರ ಕಷ್ಟ. ವಿವಿಧ ಅಳತೆ ಆಕಾರದ ವಸ್ತುಗಳು ಬೇಕು. ಕೆಲವೊಮ್ಮೆ ಆಗಿಂದಾಗಲೇ ಸಿದ್ಧ ಮಾಡಿ ಕೊಡಬೇಕು. ಬಂದವರಿಗೆ ಅಸಮಾಧಾನವಾಗದಂತೆ ನಡೆದುಕೊಳ್ಳಬೇಕು. ಇದೆಲ್ಲವನ್ನೂ ನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಅಲಂಕಾರ ಮಂದಿರದಲ್ಲಿ ಗಡ್ಡ, ಮೀಸೆ, ಕಿರೀಟ, ಸೊಂಟ ಪಟ್ಟಿ, ಬೀಸುಕಲ್ಲು, ಕೊಡ್ಲಿ, ರುದ್ರಾಕ್ಷಿ, ದಶಾವತಾರ ವಸ್ತು, ಯಕ್ಷಗಾನ ವೇಷ, ದಸರಾ ಗೊಂಬೆ, ಲಂಬಾಣಿ ವೇಷಗಳು, ತಲೆಗೆ ಕಟ್ಟುವ ಪಟಗಾ ಹೀಗೆ ಎಲ್ಲ ವೇಷಭೂಷಣ ಸಾಮಗ್ರಿಗಳ ದೊಡ್ಡ ಸಂಗ್ರಹವೇ ಇದೆ. ಅಲಂಕಾರದ ವಸ್ತುಗಳನ್ನು ಪಡೆದವರಲ್ಲಿ ಕೆಲವರು ಅತ್ಯಂತ ಪ್ರೀತಿಯಿಂದ ಚೌಕಾಸಿ ಇಲ್ಲದೆ ಕೇಳಿದಷ್ಟು ಹಣ ಕೊಡುತ್ತಾರೆ. ಕೆಲವರು ಭಾರೀ ಚೌಕಾಸಿ ಮಾಡುತ್ತಾರೆ. ಆದರೂ ನಮ್ಮ ಕಲೆ, ಅವರ ಆಸಕ್ತಿ ಸೇರಿದರೆ ಮಾತ್ರ ಇಬ್ಬರಿಗೂ ಗೌರವ. ಹೀಗಾಗಿ ಹಣ ಮುಖ್ಯವಲ್ಲ, ಕಲೆ ಮುಖ್ಯ ಎನ್ನುತ್ತಾರೆ ರಾಮಕೃಷ್ಣ ಸುಗಂಧಿ.