ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಹಿಂದಿನ ರಾಜ್ಯ ಸರ್ಕಾರದ ಸಮವಸ್ತ್ರ ಪಾಲಿಸಿಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದರ ಮೇಲೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದಲ್ಲಿ ಭಿನ್ನ ಅಭಿಪ್ರಾಯ ಬಂದ ಕಾರಣ ವಿಚಾರಣೆ ವಿಸ್ತೃತ ಪೀಠಕ್ಕೆ ಹೋಗಿದೆ. ಇಂತಹ ಸಂದರ್ಭದಲ್ಲಿ ಹಿಜಾಬ್ ನಿಷೇಧವನ್ನು ವಾಪಾಸ್ ತೆಗೆಯುವ ಪ್ರಸ್ತಾಪದ ಅವಶ್ಯಕತೆ ಇರಲಿಲ್ಲ ಎಂದು ಬಿಜೆಪಿ ಸರ್ಕಾರದಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿದ್ದ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಮಂಗಳೂರಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮವಸ್ತ್ರ ಸಮಾನತೆಯ ಸಂಕೇತ, ಮತ್ತೊಂದು ಗುರುತಿನ ಸಂಕೇತ. ಸಂವಿಧಾನವೇ ಶೈಕ್ಷಣಿಕ ವಿಚಾರದಲ್ಲಿ ಜಾತಿ, ಧರ್ಮ, ಅಂತಸ್ತಿನ ತಡೆ ಇರಬಾರದು ಎಂದು ಹೇಳಿದೆ. ಬಣ್ಣಗಳ ಆಧಾರದಲ್ಲಿ ಬಟ್ಟೆಯಲ್ಲೂ ಬದಲಾವಣೆ ಇರಬಾರದು. ಇದಕ್ಕೆ ಧಾರ್ಮಿಕ ಮತ್ತು ರಾಜಕೀಯ ಲೇಪನ ಕೊಡುವುದು ತಪ್ಪು. ಶಿಕ್ಷಣ ಮತ್ತು ಸಮವಸ್ತ್ರ ಸರ್ಕಾರದ ನೀತಿಗಳಾಗಿದ್ದು, ಇದರ ಬಗ್ಗೆ ಈಗಾಗಲೇ ವಾದ-ಪ್ರತಿವಾದ ನಡೆದು ಹೈಕೋರ್ಟ್ ತೀರ್ಪು ನೀಡಿದೆ. ಧಾರ್ಮಿಕ ಸಂಕೇತ ಬೇಡ, ಯೂನಿಫಾರಂ ಹಾಕಬೇಕು ಎಂದು ಕೋರ್ಟ್ ಹೇಳಿದೆ. ಸರ್ಕಾರದ ನಿಯಮಗಳು ಬದಲಾಗುತ್ತಾ ಇರುತ್ತವೆ ನಿಜ, ಆದರೆ ಇದು ಕೇವಲ ನಿಯಮ ಅಲ್ಲ, ಇದು ಮೂಲಭೂತ ಹಕ್ಕಿನ ಒಂದು ಭಾಗ, ಸಮಾನತೆ ಒಂದು ಮೂಲಭೂತ ಹಕ್ಕು ಎನ್ನುವುದು ಗಮನಾರ್ಹ ಅಂಶ ಎಂದರು.
ನ್ಯಾಯಾಂಗ ನಿಂದನೆ ಆಗಲ್ಲ:ಈಗಾಗಲೇ ಜಾರಿಗೆ ಬಂದಿರುವುದನ್ನು ಸರ್ಕಾರ ಬದಲಾಗಿದೆ ಎನ್ನುವ ಕಾರಣಕ್ಕೆ ಬದಲಿಸೋದು ತಪ್ಪು. ಹಾಗೆಂದು ಇದು ನ್ಯಾಯಾಂಗ ನಿಂದನೆ ಆಗುವುದಿಲ್ಲ. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದೆ. ಹಾಗಾಗಿ ಇದರ ಅವಶ್ಯಕತೆ ಸದ್ಯಕ್ಕೆ ಇರಲಿಕ್ಕಿಲ್ಲ. ಈ ಬಗ್ಗೆ ಕಾನೂನು ಹೋರಾಟ ಮುಂದುವರಿಯಲಿ. ಸರ್ಕಾರ ಹೊಸ ನಿಯಮ ಮಾಡುವುದಾದರೆ ಅರ್ಜಿದಾರರಿಗೆ ಅರ್ಜಿ ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶ ಇದೆ. ಹಾಗಾಗಿ ಅರ್ಜಿದಾರರು ಹೇಳುವುದು ಸಹಜ ಎಂದರು.
ಸುಪ್ರೀಂ ಕೈಬಿಡುವ ಸಾಧ್ಯತೆ ಇಲ್ಲ:ಇದು ಸರ್ಕಾರ ಹೊಡೆದ ಹಾಗೆ ಮಾಡಿದರೆ ನೀವು ಅತ್ತಂಗೆ ಮಾಡಿ ಎನ್ನುವ ಹಾಗಿದೆ. ಅವರು ಅರ್ಜಿ ಹಿಂಪಡೆದ ತಕ್ಷಣ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈ ಬಿಡುವ ಸಾಧ್ಯತೆ ಇಲ್ಲ. ಯಾಕೆಂದರೆ ಹಿಜಾಬ್ ಕುರಿತ ನೋಟಿಫಿಕೇಶನ್ ಹಿಂದೆ ಶುರುವಾದ ಪ್ರಕ್ರಿಯೆ. ಉಡುಪಿ ಕಾಲೇಜು ಆಡಳಿತ ಮಂಡಳಿ ಸಮವಸ್ತ್ರ ನಿಯಮ ಜಾರಿಗೆ ತಂದಿತ್ತು. ಪ್ರಕರಣ ಶುರುವಾಗಿದ್ದು ಉಡುಪಿಯ ಕಾಲೇಜಿನ ತೀರ್ಮಾನದ ವಿರುದ್ಧ. ಅವರು ಕೋರ್ಟ್‌ಗೆ ಹೋಗಿದ್ದು ಆ ತೀರ್ಮಾನ ಇನ್ನೂ ಹಾಗೇ ಇದೆ, ಅದು ಬದಲಾಗಿಲ್ಲ. ಆದರೆ ಸರ್ಕಾರ ಆ ಬಳಿಕ ಪಾಲಿಸಿ ಮಾಡಿ ನೋಟಿಫಿಕೇಶನ್ ಹೊರಡಿಸಿದೆ. ಹಾಗಾಗಿ ಉಡುಪಿಯ ತೀರ್ಮಾನ ಬದಲಾಗದೇ ಇರುವುದರಿಂದ ಅಲ್ಲಿಯವರೆಗೆ ಹಿಜಾಬ್ ಬಗ್ಗೆ ಅನುಕೂಲ ಆಗಲು ಸಾಧ್ಯವಿಲ್ಲ.
ಅರ್ಜಿ ವಾಪಾಸ್ ಪಡೆದರೆ ಮತ್ತೊಂದು ಸಮುದಾಯ ಕೋರ್ಟ್‌ನಲ್ಲಿ ಚಾಲೆಂಜ್ ಮಾಡಬಹುದು. ಸರ್ಕಾರದ ತೀರ್ಮಾನ ಹಿಜಾಬ್ ಪರ ಇದೆ. ಹೀಗಿರುವಾಗ ಚಾಲೆಂಜ್ ಮಾಡಿದರೆ ಸುಪ್ರೀಂ ಕೋರ್ಟ್ ಕೇಸ್ ಜೊತೆ ಅದು ಸೇರಬಹುದು ಎಂದರು.ಕೇಸರಿ ಶಾಲಿಗೂ ಅವಕಾಶ ಕೇಳಬಹುದು:
ಯಾವುದೇ ಹೊಸ ಆದೇಶ ಸರ್ಕಾರ ತಂದರೂ ಅದನ್ನು ಚಾಲೆಂಜ್ ಮಾಡುವ ಅವಕಾಶ ಇದೆ. ಕಾನೂನು ಸುವ್ಯವಸ್ಥೆ ಒಂದು ರಾಜ್ಯದ ಕೆಲಸ, ಅದಕ್ಕೆ ಪೊಲೀಸ್ ಇಲಾಖೆ ಇದೆ. ಆದರೆ ಅದೇ ಕಾರಣಕ್ಕೆ ಸರ್ಕಾರದ ಪಾಲಿಸಿ ಬದಲಿಸಲು ಬರುವುದಿಲ್ಲ. ಕಾನೂನು ವ್ಯಾಪ್ತಿ ಕೂಡ ನೋಡಬೇಕು, ಸಮಾನತೆ ಇರಬೇಕು. ಹಿಜಾಬ್‌ಗೆ ಅವಕಾಶ ಕೊಟ್ಟರೆ ಕೇಸರಿ ಶಾಲು ಮುಂದುವರೆಯಬಹುದು. ಅವರ ಇಚ್ಛೆಗೆ ಬೇಕಾದ ವಸ್ತ್ರ ಹಾಕಬಹುದು ಎಂದು ಸಿಎಂ ಹೇಳಿದ ಮೇಲೆ ಅದೆಲ್ಲಾ ಸಹಜ. ಆಗ ಸರ್ಕಾರಿ ಶಾಲೆಗಳಲ್ಲಿ ಸಮಾನತೆಗೆ ಸರ್ಕಾರ ಅವಕಾಶ ನೀಡಬೇಕು. ಹಿಜಾಬ್ ಜೊತೆಗೆ ಕೇಸರಿ ಶಾಲಿಗೂ ಸರ್ಕಾರ ಅವಕಾಶ ಕೊಡಲೇ ಬೇಕಾಗುತ್ತದೆ. ಅವರು ಅದನ್ನು ನಮ್ಮ ಹಕ್ಕು ಮತ್ತು ಸಂಪ್ರದಾಯ ಎಂದರೆ, ಸರ್ಕಾರ ವಿವಾದವನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ ಎಂದರು.