ಸಮೀಕ್ಷೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ: ಸಹಾಯಕ ಆಯುಕ್ತೆ ಕಾವ್ಯಾರಾಣಿ

| Published : Sep 26 2025, 01:01 AM IST

ಸಮೀಕ್ಷೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ: ಸಹಾಯಕ ಆಯುಕ್ತೆ ಕಾವ್ಯಾರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಹಿಂದುಳಿದ ವರ್ಗದ ಆಯೋಗದಿಂದ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ತಂತ್ರಾಂಶದಲ್ಲಿರುವ ಕೆಲ ತಾಂತ್ರಿಕ ಸಮಸ್ಯೆಗಳೂ ಬಗೆಹರಿದಿವೆ.

ಕನ್ನಡಪ್ರಭ ವಾರ್ತೆ ಶಿರಸಿ

ರಾಜ್ಯ ಹಿಂದುಳಿದ ವರ್ಗದ ಆಯೋಗದಿಂದ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ತಂತ್ರಾಂಶದಲ್ಲಿರುವ ಕೆಲ ತಾಂತ್ರಿಕ ಸಮಸ್ಯೆಗಳೂ ಬಗೆಹರಿದಿವೆ. ಸಮೀಕ್ಷಾದಾರರು ಮನೆಗಳಿಗೆ ಬಂದ ವೇಳೆ ದಾಖಲೆ ನೀಡಿ ಅವರು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ಒದಗಿಸಿ ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ವಿನಂತಿಸಿದರು.

ಗುರುವಾರ ಮಾಧ್ಯಮದವರಿಗೆ ಮಾಹಿತಿ ನೀಡಿ, ಶಿರಸಿ ಉಪವಿಭಾಗ ವ್ಯಾಪ್ತಿಯ ಶಿರಸಿ ತಾಲೂಕಿನಲ್ಲಿ 350 ಬ್ಲಾಕ್‌ನಲ್ಲಿ ಒಟ್ಟೂ 46590 ಕುಟುಂಬಗಳಿದ್ದು, ಸೆ.24ರವರೆಗೆ 569 ಮುಕ್ತಾಯಗೊಂಡಿದ್ದು, ಸಿದ್ದಾಪುರ ತಾಲೂಕಿನಲ್ಲಿ 140 ಬ್ಲಾಕ್‌ಗಳಲ್ಲಿ 24810 ಕುಟುಂಬಗಳಿದ್ದು, 134 ಮುಕ್ತಾಯಗೊಂಡಿದೆ. ಯಲ್ಲಾಪುರ ತಾಲೂಕಿನಲ್ಲಿ 119 ಬ್ಲಾಕ್‌ಗಳಲ್ಲಿ 18869 ಕುಟುಂಬಗಳಿದ್ದು, 373 ಮುಕ್ತಾಯವಾಗಿದೆ. ಮುಂಡಗೋಡ ತಾಲೂಕಿನಲ್ಲಿ 215 ಬ್ಲಾಕ್‌ಗಳಲ್ಲಿ 27411 ಕುಟುಂಬಗಳಿದ್ದು, 800 ಮುಕ್ತಾಯವಾಗಿದೆ. ಒಟ್ಟೂ 824 ಬ್ಲಾಕ್‌ಗಳಲ್ಲಿ 177680 ಕುಟುಂಬಗಳಲ್ಲಿ 1876 ಕುಟುಂಬಗಳ ಸಮೀಕ್ಷೆ ನಡೆದಿದೆ ಎಂದರು.

ಭಟ್ಕಳ ಉಪ ವಿಭಾಗ ವ್ಯಾಪ್ತಿಯ ಭಟ್ಕಳ ತಾಲೂಕಿನಲ್ಲಿ 335 ಬ್ಲಾಕ್‌ಗಳಲ್ಲಿ 45564 ಕುಟುಂಬಗಳಿದ್ದು, 187 ಮುಕ್ತಾಯವಾಗಿದೆ. ಹೊನ್ನಾವರ ತಾಲೂಕಿನಲ್ಲಿ 250 ಬ್ಲಾಕ್‌ಗಳಲ್ಲಿ 34127 ಕುಟುಂಬಗಳಿದ್ದು, 349 ಮುಕ್ತಾಯವಾಗಿದೆ. ಒಟ್ಟೂ 585 ಬ್ಲಾಕ್‌ಗಳಲ್ಲಿ 79691 ಕುಟುಂಬಗಳಲ್ಲಿ 536 ಕುಟುಂಬದ ಸಮೀಕ್ಷೆ ನಡೆದಿದೆ ಎಂದರು.

ಸಮೀಕ್ಷೆದಾರರು ಮನೆಯ ಮುಖ್ಯಸ್ಥರ ಮೊಬೈಲ್‌ ಸಂಖ್ಯೆ, ರೇಷನ್‌ ಕಾರ್ಡ್‌, ಕುಟುಂಬ ಸದಸ್ಯರ ಆಧಾರ, ಜಾತಿ ಪ್ರಮಾಣಪತ್ರ ಪಡೆದಿದ್ದಲ್ಲಿ ಅದರ ಪ್ರತಿ, ಮತದಾರರ ಗುರುತಿನ ಚೀಟಿ, ವಿದ್ಯಾಭ್ಯಾಸದ ಮಟ್ಟ, ಉದ್ಯೋಗದ ವಿವರ, ಕೃಷಿ ಜಮೀನಿನ ವಿವರ, ಮನೆ ವಿವರ, ವಾಹನದ ವಿವರನ್ನು ಪಡೆಯುತ್ತಾರೆ. ಅವರು ಕೇಳುವ ಪ್ರಶ್ನಾವಳಿಗೆ ಸಮರ್ಪಕ ಮಾಹಿತಿ ನೀಡಿ, ಸಹಕರಿಸಬೇಕು ಎಂದು ಹೇಳಿದರು.

ಶಿರಸಿ ಉಪವಿಭಾಗದ ಮಟ್ಟದ 4 ತಾಲೂಕಿನಲ್ಲಿ ಖಾಸಗಿ ನಿವಾಸಿಗಳು ಬೆಳೆ ಸಮೀಕ್ಷೆ ನಡೆಸಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡುತ್ತಾರೆ. ಕಂದಾಯ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಕ್ಷೇತ್ರ ಸಿಬ್ಬಂದಿ ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ಬೆಳೆ ಸಮೀಕ್ಷೆ ನಂತರ ಮೊಬೈಲ್‌ ಸಂದೇಶ ರೈತರಿಗೆ ರವಾನೆಯಾಗುತ್ತದೆ. ಆಕ್ಷೇಪಣೆ ಇದ್ದಲ್ಲಿ ಕಂದಾಯ, ಕೃಷಿ ಅಥವಾ ತೋಟಗಾರಿಕಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಶಿರಸಿ ತಾಲೂಕಿನಲ್ಲಿ 66460 ಕ್ಷೇತ್ರದಲ್ಲಿ 59639 ಕ್ಷೇತ್ರದ ಬೆಳೆ ಸಮೀಕ್ಷೆ ಮುಕ್ತಾಯಗೊಂಡು ಶೇ.89.99 ಪ್ರಗತಿಯಾಗಿದೆ. ಸಿದ್ದಾಪುರ ತಾಲೂಕಿನ 64817 ಕ್ಷೇತ್ರದಲ್ಲಿ 47136 ಕ್ಷೇತ್ರದ ಬೆಳೆ ಸಮೀಕ್ಷೆ ಮುಕ್ತಾಯಗೊಂಡು ಶೇ.72.89 ಪ್ರಗತಿಯಾಗಿದೆ. ಯಲ್ಲಾಪುರ ತಾಲೂಕಿನ 22654 ಕ್ಷೇತ್ರದಲ್ಲಿ 18955 ಕ್ಷೇತ್ರದ ಬೆಳೆ ಸಮೀಕ್ಷೆ ಮುಕ್ತಾಯಗೊಂಡು ಶೇ.83.9 ಪ್ರಗತಿಯಾಗಿದ್ದು, ಮುಂಡಗೋಡ ತಾಲೂಕಿನ 17540 ಕ್ಷೇತ್ರದಲ್ಲಿ 15901 ಕ್ಷೇತ್ರದ ಬೆಳೆ ಸಮೀಕ್ಷೆ ಮುಕ್ತಾಯಗೊಂಡು ಶೇ.90.89 ಪ್ರಗತಿಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಿರಸ್ತೇದಾರ ಡಿ.ಆರ್. ಬೆಳ್ಳಿಮನೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಮತ್ತಿತರರು ಇದ್ದರು.