ಶೃಂಗೇರಿ ಯಕ್ಷಗಾನ ನವರಸ ಕಲೆಗಳಲ್ಲಿ ಪ್ರಮುಖವಾಗಿದೆ. ಇದು ತನ್ನದೇ ಆದ ಪ್ರೇಕ್ಷಕ ವರ್ಗ ಹೊಂದಿದ್ದು, ಇಂದಿಗೂ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಯಕ್ಷಗಾನ ಕಲೆ ಅಳಿವು ಉಳಿವು ಪ್ರೇಕ್ಷಕನ ಕೈಯಲ್ಲಿದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ಶಿವಶಂಕರ್ ಭಟ್ ಗುಡ್ಡೇಪಾಲು ಹೇಳಿದರು.
: ಶಿವಶಂಕರ್ ಭಟ್ ಗುಡ್ಡೇಪಾಲು । ಶೃಂಗೇರಿಯಲ್ಲಿ ಯಕ್ಷಗಾನ ತಾಳಮದ್ದಳೆ,ಕಲಾವಿದರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಶೃಂಗೇರಿಯಕ್ಷಗಾನ ನವರಸ ಕಲೆಗಳಲ್ಲಿ ಪ್ರಮುಖವಾಗಿದೆ. ಇದು ತನ್ನದೇ ಆದ ಪ್ರೇಕ್ಷಕ ವರ್ಗ ಹೊಂದಿದ್ದು, ಇಂದಿಗೂ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಯಕ್ಷಗಾನ ಕಲೆ ಅಳಿವು ಉಳಿವು ಪ್ರೇಕ್ಷಕನ ಕೈಯಲ್ಲಿದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ಶಿವಶಂಕರ್ ಭಟ್ ಗುಡ್ಡೇಪಾಲು ಹೇಳಿದರು.
ಪಟ್ಟಣದ ಜಿ ಎಸ್ ಬಿ ಸಭಾಭವನದಲ್ಲಿ ಹೊನ್ನವಳ್ಳಿ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ ಹಾಗೂ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಯಕ್ಷಗಾನ ಕಲೆ ಕರಾವಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದರೂ ,ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ತನ್ನದೇ ಆದ ಪ್ರೇಕ್ಷಕ ವರ್ಗ ಹೊಂದಿದೆ.ಯಾವುದೇ ಒಂದು ಕಲೆ ಬೆಳೆ ಬೇಕಾದರೆ ಪ್ರೇಕ್ಷಕ ಅಭಿಮಾನಿ ಮುಖ್ಯ. ಯಕ್ಷಗಾನ ಕಲೆಯನ್ನು ಪ್ರೇಕ್ಷಕರು ಬೆಳೆಸಿ ಉಳಿಸಿ ಕೊಂಡು ಬಂದಿದ್ದಾರೆ. ಕಲೆ ಬೆಳೆಯುವ ಜೊತೆ ಕಲಾವಿದನ ಬದುಕು ಕೂಡ ಉಳಿಸಿದಂತಾಗುತ್ತದೆ. ಕೆಲ ಕಲಾವಿದರಿಗೆ ಈ ಕಲೆಯೇ ಬದುಕು. ಅದು ಅನಿವಾರ್ಯ ಕೂಡ ಆಗಿದೆ. ಮುಂದಿನ ಪೀಳಿಗೆಗೂ ಯಕ್ಷಗಾನ ಕಲೆ ಉಳಿಸಿ ಬೆಳೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಹೊನ್ನವಳ್ಳಿ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ನಾಗೇಶ್ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ ಯಕ್ಷಗಾನ ಕಲೆ ಶ್ರೇಷ್ಠ, ಅದ್ಭುತ ಕಲೆ. ಭಾಗವತಿಕೆ, ಪೌರಾಣಿಕ,ಐತಿಹಾಸಿಕ,ಸಾಮಾಜಿಕ ಹಾಗೂ ಇನ್ನಿತರೆ ಕಥಾ ವಸ್ತುಗಳೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಕಲಾ ಪರಂಪರೆ ಇಂದಿಗೂ ಜೀವಂತ ವಾಗಿರಿಸಿದೆ. ಸಿನೇಮಾ, ಧಾರಾವಾಹಿ,ಮೊಬೈಲ್ ಹಾವಳಿಗಳ ಇಂದಿನ ಆಧುನಿಕ ಜಗತ್ತಿನಲ್ಲಿ ಈ ಕಲೆ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಇಂತಹ ಶ್ರೇಷ್ಠ ಕಲಾ ಪರಂಪರೆ ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮದಾಗಿದೆ ಎಂದರು.ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಶಿವಶಂಕರ್ ಭಟ್ ಗುಡ್ಡೇಪಾಲು, ಮತ್ತಿತರ ಕಲಾವಿದರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಸೂರ್ಯನಾರಾಯಣ ಭಟ್ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.ರೋಟರಿ ಕ್ಲಬ್ ಅಧ್ಯಕ್ಷ ಸುರೇಶ್ ಹೆಗ್ಡೆ,ಅನಸೂಯ ಕೃಷ್ಣ ಮೂರ್ತಿ,ಸುಮಿತ್ ಮತ್ತಿತರರಿದ್ದರು. ತ್ರಿಶಂಕು ಸ್ವರ್ಗ,ವಿಶ್ವಾಮಿತ್ರ ಮೇನಕೆ ಪ್ರಸಂಗ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
19 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಜಿ ಎಸ್ ಬಿ ಸಭಾಭವನದಲ್ಲಿ ಆಯೋಜಿಸಿದ್ದ ಯಕ್ಷಗಾನ ತಾಳಮದ್ದಳೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಶಿವಶಂಕರ್ ಭಟ್ ಗುಡ್ಡೇಪಾಲು ರವರನ್ನು ಸನ್ಮಾನಿಸಲಾಯಿತು.