ಹಾನಗಲ್ಲ ವಿರಕ್ತ ಮಠ ಮತ್ತು ಹುಬ್ಬಳ್ಳಿ ಮೂರುಸಾವಿರ ಮಠದ ಯಾವುದೇ ಆಸ್ತಿಗಳು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳಿಂದ (ಮೂಜಗು) ಮಾರಾಟ ಅಥವಾ ಪರಭಾರೆ ಆಗಿಲ್ಲ ಎಂದು ತಿಪಟೂರು ಷಡಕ್ಷರಿಮಠದ ರುದ್ರಮುನಿ ಶ್ರೀಗಳು ಹೇಳಿದ್ದಾರೆ.

ಹಾನಗಲ್ಲ: ಹಾನಗಲ್ಲ ವಿರಕ್ತ ಮಠ ಮತ್ತು ಹುಬ್ಬಳ್ಳಿ ಮೂರುಸಾವಿರ ಮಠದ ಯಾವುದೇ ಆಸ್ತಿಗಳು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳಿಂದ (ಮೂಜಗು) ಮಾರಾಟ ಅಥವಾ ಪರಭಾರೆ ಆಗಿಲ್ಲ ಎಂದು ತಿಪಟೂರು ಷಡಕ್ಷರಿಮಠದ ರುದ್ರಮುನಿ ಶ್ರೀಗಳು ಹೇಳಿದ್ದಾರೆ.

ಹಾನಗಲ್ಲಿನಲ್ಲಿ ಹಾನಗಲ್ಲ ಲಿಂ.ಕುಮಾರಶಿವಯೋಗಿಗಳ 96ನೇ ಸ್ಮರಣೋತ್ಸವದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಕೆಲವರು ಉದ್ದೇಶಪೂರ್ವಕವಾಗಿ ಮಠದ ಹೆಸರು ಕೆಡಿಸಲು, ಶ್ರೀಗಳಿಗೆ ಅಗೌರವ ತರಲು ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಹುಬ್ಬಳ್ಳಿ ಮಠಕ್ಕೆ ಮೊದಲ ವರ್ಷಕ್ಕೆ ಕೇವಲ ₹60 ಸಾವಿರ ವರಮಾನವಿತ್ತು. ಈಗ ಅದನ್ನು ಗುರುಸಿದ್ಧ ರಾಜಯೋಗೀಂದ್ರರು ₹10 ಲಕ್ಷಕ್ಕೆ ಏರಿಸಿದ್ದಾರೆ. ಇಷ್ಟರಲ್ಲೇ ₹15 ಕೋಟಿ ವೆಚ್ಚದಲ್ಲಿ ಶ್ರೀಮಠದ ಅಭಿವೃದ್ಧಿ ಕೆಲಸಗಳೂ ಆರಂಭವಾಗಲಿವೆ. ಅಲ್ಲಿನ ಭೂಮಿ ವ್ಯಾಜ್ಯಗಳನ್ನು ಸಮಾಧಾನದಿಂದ ಬಗೆಹರಿಸಿದ್ದಾರೆ. ಸ್ವಾಮಿಗಳ ಮನಸ್ಸು ಸಮಾಧಾನದ ಮನಸ್ಸು. ಅವರು ಯಾರಿಗೂ ಎದುರಾಡುವುದಿಲ್ಲ. ಅನಗತ್ಯ ಪ್ರತಿಕ್ರಿಯೆಗಳನ್ನೂ ಕೊಡುವುದಿಲ್ಲ. ಅದಕ್ಕಾಗಿ ಅವರ ಮೇಲೆ ಹರಿಹಾಯುವುದು ಸರಿ ಅಲ್ಲ. ಅದನ್ನು ನಾವು ಸಹಿಸುವುದಿಲ್ಲ ಎಂದು ಟೀಕಾಕಾರರಿಗೆ ಎಚ್ಚರಿಕೆ ನೀಡಿದರು.ಹುಬ್ಬಳ್ಳಿಯಲ್ಲಿ ಕೆಎಲ್‌ಇ ಸಂಸ್ಥೆಗೆ ಜಾಗೆ ನೀಡಿದ್ದರಲ್ಲಿ ತಪ್ಪೇನಿಲ್ಲ. ಅದು ಹಿಂದಿನ ಗುರುಗಳ ಸಂಕಲ್ಪದ ತೀರ್ಮಾನವಾಗಿತ್ತು. ಆ ಜಾಗೆ ಆಸ್ಪತ್ರೆಗಾಗಿ ವಿನಿಯೋಗವಾಗಬೇಕಾಗಿತ್ತು. ಅನಿವಾರ್ಯವಾಗಿ ಕೊಡಬೇಕಾಯಿತು. ಇದಕ್ಕೆ ಸ್ವಾಮಿಗಳ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದು ಸರಿ ಅಲ್ಲ ಎನ್ನುತ್ತ ರುದ್ರಮುನಿ ಮಹಾಸ್ವಾಮಿಗಳು ಭಾವುಕರಾದರು. ಸ್ವಾಮಿಗಳನ್ನು ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ. ಸ್ವಾಮಿಗಳಿಗೂ ತಾಳ್ಮೆ ಬೇಕು. ಎಲ್ಲವೂ ಸರಿಯಾಗುತ್ತದೆ. ನಾನು ಕೂಡ ಹುಬ್ಬಳ್ಳಿ ಮಠದ ವಿಷಯದಲ್ಲಿ ಹಲವು ವ್ಯಾಜ್ಯಗಳಿಗೆ ಮುಂದಾಗಿದ್ದೆ. ಮಠದ ಹಿತಕ್ಕಾಗಿ ಎಲ್ಲದರಿಂದ ಹಿಂದೆ ಸರಿದು ಮಠದ ಒಳ್ಳೆಯ ಕೆಲಸಕ್ಕೆ ಬೆಂಬಲಿಸುತ್ತಿದ್ದೇನೆ. ನಾನು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರರ ಬೆನ್ನಿಗೆ ಬಂಡೆಯಾಗಿ ನಿಲ್ಲುತ್ತೇನೆ ಎಂದು ಘೋಷಿಸಿದರು.

ತೊಡೆತಟ್ಟಿದ್ದ ರುದ್ರಮುನಿ:ಹಿಂದೆ ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿಷಯದಲ್ಲಿ ಇದೇ ಗುರುಸಿದ್ದ ರಾಜಯೋಗೀಂದ್ರರ ವಿರುದ್ಧವೇ ಹತ್ತಾರು ಆರೋಪ ಮಾಡಿ, ಸುದೀರ್ಘ ಕಾನೂನು ಹೋರಾಟವನ್ನೂ ಹೂಡಿದ್ದ ರುದ್ರಮುನಿ ದೇವರು ಈಗ ಏಕಾಯೇಕಿ ಈ ಹೇಳಿಕೆ ನೀಡಿರುವುದು, ತಮ್ಮ ನಿಲುವಿಗೆ ಉಲ್ಟಾ ಹೊಡೆದಿರುವುದು, ಶ್ರೀಗಳ ಬೆನ್ನಿಗೆ ಬಂಡೆಯಂತೆ ನಿಲ್ಲುವುದಾಗಿ ಹೇಳಿರುವುದು ಉಭಯ ಮಠಗಳ ಭಕ್ತರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.