ಮತದಾನ ಪ್ರಮಾಣ ಹೆಚ್ಚಳಕ್ಕೆ ಸ್ವೀಪ್ ಸಮಿತಿ ನಾನಾ ಕಸರತ್ತು

| Published : Apr 07 2024, 01:49 AM IST / Updated: Apr 07 2024, 09:51 AM IST

ಮತದಾನ ಪ್ರಮಾಣ ಹೆಚ್ಚಳಕ್ಕೆ ಸ್ವೀಪ್ ಸಮಿತಿ ನಾನಾ ಕಸರತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನದ ಮಹತ್ವ ಹಾಗೂ ನೈತಿಕ ಮತದಾನದ ಬಗ್ಗೆ ಜಿಲ್ಲಾ ಸ್ವೀಪ್ ಸಮಿತಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಲೇ ಇದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ನಾನಾ ಕಸರತ್ತುಗಳನ್ನು ನಡೆಸಿದ್ದು, ಭೀಕರ ಬಿಸಿಲು ನಡುವೆ ಮತದಾರರು ಹಕ್ಕು ಚಲಾಯಿಸುವಂತೆ ಮತಗಟ್ಟೆ ಕರೆತರುವುದು ಸ್ವೀಪ್ ಸಮಿತಿಗೆ ದೊಡ್ಡ ಸವಾಲಾಗಿಸಿದೆ.

ಮತದಾನದ ಮಹತ್ವ ಹಾಗೂ ನೈತಿಕ ಮತದಾನದ ಬಗ್ಗೆ ಜಿಲ್ಲಾ ಸ್ವೀಪ್ ಸಮಿತಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಲೇ ಇದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಸ್ವೀಪ್ ಸಮಿತಿ ಸಕ್ರಿಯವಾಗಿದ್ದು, ಸೈಕಲ್ ಜಾಥಾ, ಕಾಲೇಜು, ವಿವಿಗಳಲ್ಲಿ ಉಪನ್ಯಾಸ, ವಾರ್ಡ್‌ವಾರು ಜಾಗೃತಿ ಅಭಿಯಾನ, ಬೀದಿನಾಟಕ, ಉದ್ಯೋಗ ಖಾತ್ರಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಮತದಾನ ಮಹತ್ವ ಕುರಿತು ಮಾಹಿತಿ ನೀಡುವುದು, ತಪ್ಪದೇ ಮತದಾನ ಮಾಡುವಂತೆ ಕೋರಿ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪೋಷಕರಿಗೆ ಪತ್ರ ಬರೆಸುವುದು, ಹೀಗೆ ನಾನಾ ರೀತಿಯ ಮತದಾನದ ಜಾಗೃತಿ ಕಾರ್ಯದಲ್ಲಿ ನಿರತವಾಗಿದೆ.

ಈ ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮಾತದಾನವಾಗಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸ್ವೀಪ್ ಸಮಿತಿ ಜಾಗೃತಿ ಕುರಿತಾಗಿ ನಾನಾ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಗತಗೊಳಿಸುತ್ತಿದೆ. ಇಷ್ಟಾಗಿಯೂ ಜಿಲ್ಲೆಯಲ್ಲಿ ಮತದಾನ ಶೇಕಡವಾರು ಪ್ರಮಾಣ ಏರಿಕೆಗೆ ಬರಗಾಲದ ವಲಸೆ, ಜಿಲ್ಲೆಯಲ್ಲಿರುವ ಪ್ರಖರ ಬಿಸಿಲು ಅಡ್ಡಿಯಾಗುವ ಸಾಧ್ಯತೆಯಿದೆ.

ಬರಗಾಲದ ವಲಸೆಯೇ ದೊಡ್ಡ ಸಮಸ್ಯೆ: ಬರಗಾಲದಿಂದಾಗಿ ಜಿಲ್ಲೆಯ ಸಾವಿರಾರು ಜನರು ಬೆಂಗಳೂರು ಸೇರಿದಂತೆ ಮಹಾನಗರಗಳಿಗೆ ವಲಸೆ ಹೋಗಿದ್ದು, ಈ ವರ್ಷ ವಲಸೆ ಪ್ರಮಾಣ ದೊಡ್ಡಸಂಖ್ಯೆಯಲ್ಲಿದೆ. ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಾದರೆ, ಸ್ಪರ್ಧಿಸಿರುವ ಅಭ್ಯರ್ಥಿಗಳೇ ಮತದಾರರ ವಿಳಾಸ, ಮೊಬೈಲ್ ಸಂಖ್ಯೆಗಳನ್ನು ಪಡೆದು, ಊರಿಗೆ ಕರೆತರುವ ಕಾಳಜಿ ತೆಗೆದುಕೊಳ್ಳುತ್ತಾರೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ವಲಸೆ ಹೋದ ಕಾರ್ಮಿಕರನ್ನು ಕರೆತರುವ ಜವಾಬ್ದಾರಿ ಯಾರೂ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಸಹಜವಾಗಿ ಮತದಾನದ ಪ್ರಮಾಣ ಕುಸಿಯುತ್ತದೆ.

ಇನ್ನು ಜಿಲ್ಲೆಯಲ್ಲಿ ಬರದ ಜತೆ ಭೀಕರ ಬಿಸಿಲು ಹೆಚ್ಚು ಕಾಡುತ್ತಿದೆ. ಸಹಜವಾಗಿ ಬೇಸಿಗೆಯಲ್ಲಿ ಬರುವ ಚುನಾವಣೆಗಳಲ್ಲಿ ಮತದಾರರು ಬೆಳಗ್ಗೆಯೇ ಮತದಾನ ಮಾಡಿ ಮನೆ ಸೇರಿಕೊಳ್ಳುತ್ತಾರೆ. ಅದರಲ್ಲೂ ವೃದ್ಧರು, ಮಹಿಳೆಯರು ತೀವ್ರ ಬಿಸಿಲಿನ ಕಾರಣಕ್ಕೆ ಮತಗಟ್ಟೆಗಳತ್ತ ಸುಳಿಯುವುದಿಲ್ಲ. ಬೆಳಗ್ಗೆ ಹಾಗೂ ಸಂಜೆ 4 ಗಂಟೆ ಬಳಿಕ ಮತಕೇಂದ್ರಗಳತ್ತ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಕೆಲವು ಮತಕೇಂದ್ರಗಳ ಬಳಿ ನೆರಳಿನ ವ್ಯವಸ್ಥೆಯೂ ಇರುವುದಿಲ್ಲ. ಇದು ಮತಕೇಂದ್ರಗಳಿಗೆ ಬರುವ ಜನರ ನಿರಾಸಕ್ತಿಯನ್ನು ಹೆಚ್ಚಿಸುತ್ತದೆ.

ಮತದಾನ ಪ್ರಮಾಣ ಏರಿಕೆಗೆ ಮಾಡಬೇಕಾದದ್ದೇನು?: ಸ್ವೀಪ್ ಸಮಿತಿಯಿಂದ ಮತದಾನ ಕುರಿತು ಜಾಗೃತಿಯ ಜತೆಗೆ ಮತಗಟ್ಟೆಗಳಲ್ಲಿನ ಕನಿಷ್ಠ ಸೌಕರ್ಯಗಳನ್ನು ನೀಡುವುದರಿಂದ ಮತದಾನ ಪ್ರಮಾಣ ಏರಿಕೆಗೆ ಹೆಚ್ಚು ಪೂರಕವಾಗುತ್ತದೆ.

ಮತ ಕೇಂದ್ರಗಳಲ್ಲಿ ನೆರಳಿನ ವ್ಯವಸ್ಥೆ, ತಂಪಾದ ಕುಡಿಯುವ ನೀರು, ಮತದಾರರ ಸಾಲು ದೊಡ್ಡದಾಗಿದ್ದರೆ ಆಸನಗಳ ವ್ಯವಸ್ಥೆ ಮಾಡಿಕೊಡುವುದರಿಂದ ಮತದಾರರು ಬಿಸಿಲು ಲೆಕ್ಕಿಸದೇ ಮತಗಟ್ಟೆಗಳಿಗೆ ಬರಲು ಉತ್ಸುಕರಾಗುತ್ತಾರೆ. ಈ ಹಿಂದೆ ಅನೇಕ ಚುನಾವಣೆಗಳಲ್ಲಿ ಜಿಲ್ಲೆಯ ಮತಕೇಂದ್ರಗಳಲ್ಲಿ ಕೂಲರ್‌ಗಳ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಕ್ರಮಗಳನ್ನು ಕೈಗೊಂಡಲ್ಲಿ ನಿರೀಕ್ಷಿತ ಯಶಸ್ಸು ಸಾಧ್ಯ.ಮತದಾನಕ್ಕೆ ಬರಲು ಜನರು ಹಿಂದೇಟು ಹಾಕುತ್ತಿರುವುದೇಕೆ? ಎಂಬುದರ ಕುರಿತು ತಿಳಿಯಲು ಬಿಎಲ್‌ಒಗಳ ಮೂಲಕ ಮನೆಮನೆ ಸರ್ವೆ ಮಾಡಿಸಲಾಗುತ್ತಿದೆ. ಮೂಲ ಸಮಸ್ಯೆ ಅರಿತು ಪರಿಹಾರಕ್ಕೆ ಪ್ರಯತ್ನಿಸುತ್ತೇವೆ ಎನ್ನುತ್ತಾರೆ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು.

ಈ ಬಾರಿ ಬಿಸಿಲು ತೀವ್ರವಾಗಿದೆ. ಜನರು ಹೊರಗಡೆ ಬರುವುದೇ ಕಷ್ಟವಾಗಿದೆ. ಹೀಗಾಗಿ ಸ್ವೀಪ್ ಸಮಿತಿ ಮತಕೇಂದ್ರಗಳಲ್ಲಿ ನೆರಳಿನ ವ್ಯವಸ್ಥೆ ಮತ್ತಿತರ ಸೌಕರ್ಯ ಕಲ್ಪಿಸಿಕೊಡುವಂತಾಗಬೇಕು ಎನ್ನುತ್ತಾರೆ ವಿದ್ಯಾನಗರ ನಿವಾಸಿ ಗೋವಿಂದರಾಜು.