ಒನಕೆ ಆಯುಧ ಮಾಡಿಕೊಂಡ ಓಬವ್ವ ಶೌರ್ಯದ ಸಂಕೇತ: ಬಲ್ಕೀಶ್ ಬಾನು

| Published : Nov 12 2025, 01:30 AM IST

ಒನಕೆ ಆಯುಧ ಮಾಡಿಕೊಂಡ ಓಬವ್ವ ಶೌರ್ಯದ ಸಂಕೇತ: ಬಲ್ಕೀಶ್ ಬಾನು
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ಒನಕೆಯನ್ನೇ ಆಯುಧ ಮಾಡಿಕೊಂಡು ವೈರಿಪಡೆಯನ್ನು ದಿಟ್ಟತನದಿಂದ ಎದುರಿಸಿದ ವೀರಮಹಿಳೆ ಒನಕೆ ಓಬವ್ವ ಧೈರ್ಯ ಮತ್ತು ಶೌರ್ಯದ ಪ್ರತೀಕ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಕೊಂಡಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತನ್ನ ಒನಕೆಯನ್ನೇ ಆಯುಧ ಮಾಡಿಕೊಂಡು ವೈರಿಪಡೆಯನ್ನು ದಿಟ್ಟತನದಿಂದ ಎದುರಿಸಿದ ವೀರಮಹಿಳೆ ಒನಕೆ ಓಬವ್ವ ಧೈರ್ಯ ಮತ್ತು ಶೌರ್ಯದ ಪ್ರತೀಕ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಕೊಂಡಾಡಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಛಲವಾದಿ ಮಹಾಸಭಾ ಇವರು ಏರ್ಪಡಿಸಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಜನ್ಮತಃ ಧೈರ್ಯ, ಸ್ಥೈರ್ಯ, ಕುಟುಂಬ ನಿರ್ವಹಣೆಯ ಚಾಕಚಕ್ಯತೆ ದೇವರು ಕೊಟ್ಟ ವರವಾಗಿದ್ದು, ಓಬವ್ವ ಪತಿ ತನಗೆ ವಹಿಸಿದ ಜವಾಬ್ದಾರಿಯನ್ನು ತಾನೊಂದು ಹೆಣ್ಣು ಎಂದೂ ಎಣಿಸದೇ, ಜೀವದ ಹಂಗು ತೊರೆದು, ಧೈರ್ಯದಿಂದ ನಿರ್ವಹಿಸುವ ಮೂಲಕ ಹೈದರಾಲಿ ಸೇನೆಯನ್ನು ಬಗ್ಗುಬಡಿದ ಈಕೆ ಎಲ್ಲರಿಗೂ ಮಾದರಿ ಮತ್ತು ಕರ್ತವ್ಯಪ್ರಜ್ಞೆಯ ಸಂಕೇತವಾಗಿದ್ದಾಳೆ. ಇಂತಹ ವೀರ ಮಹಿಳೆಯನ್ನು ಪಡೆದ ನಮ್ಮ ಸಮಾಜ ನಿಜಕ್ಕೂ ಪುಣ್ಯ ಮಾಡಿದೆ. ನಮ್ಮ ಸಮಾಜವನ್ನು ಕಾಪಾಡಲು ಹಾಗೂ ಸಮಾಜದ ಒಳಿತು ಮತ್ತು ಏಳ್ಗೆಗಾಗಿ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಜಾತಿ, ಧರ್ಮ, ಭಾಷೆ ಮರೆತು ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರ ನೇತೃತ್ವದಲ್ಲಿ ಒಟ್ಟಾದ ರೀತಿಯಲ್ಲಿ ಇಂದಿಗೂ ನಾವು ಒಟ್ಟಾಗಿ ಇರುವ ಅವಶ್ಯಕತೆ ಇದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನ ನಮಗೆಲ್ಲ ದಾರಿ ದೀಪವಾಗಿದ್ದು, ಎಲ್ಲರೂ ಸಾಮರಸ್ಯದಿಂದ ಬಾಳೋಣ ಎಂದು ಕರೆ ನೀಡಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ ಮಾತನಾಡಿ, ಒನಕೆ ಓಬವ್ವ ಎಂಬ ಹೆಸರೇ ಒಂದು ಶಕ್ತಿ. ಧೈರ್ಯಕ್ಕೆ ಮಾದರಿಯಾದ ಮಹಿಳೆ. ಚಿತ್ರದುರ್ಗ ಕೋಟೆಯನ್ನು ರಕ್ಷಿಸಿದ ವೀರವನಿತೆ. ಒನಕೆ ಓಬವ್ವ ಯಾರೆಂದು ನಮ್ಮ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಯುವಜನತೆಗೆ ತಿಳಿಸಬೇಕು. ಇಂತಹ ಕಾರ್ಯಕ್ರಮದಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಎಲ್ಲ ವರ್ಗದವರೂ ಸೇರಿ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಆಚರಿಸಬೇಕೆಂಬುದು ಸರ್ಕಾರದ ಉದ್ದೇಶವಾಗಿದ್ದು ಎಲ್ಲರೂ ಒಟ್ಟಾಗಿ ಆಚರಿಸೋಣ ಎಂದು ಕರೆ ನೀಡಿದರು.

ಛಲವಾದಿ ಸಮಾಜ ಛಲ ಮೈಗೂಡಿಸಿಕೊಂಡು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸೇರಿಂದಂತೆ ಸರ್ವಾಂಗೀಣ ಅಭಿವೃದ್ಧಿಯಾಗಬೇಕು ಎಂದು ಹಾರೈಸಿದರು.

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕುಂದನ್ ಬಸವರಾಜ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕೋಟೆ ಮತ್ತು ಕಹಳೆಯನ್ನು ಆಯುಧವಾಗಿ ಹೊಂದಿದ್ದವ ಛಲವಾದಿ. ಕಹಿ ನುಂಗಿ ಸಿಹಿ ಉಗಿಯುವವ ಛಲವಾದಿ. ಛಲ ಬಿಡದೆ ವಾದಿಸುವವನೇ ಛಲವಾದಿ. ಹಿಂಜರಿಯದವ, ಪಟ್ಟು ಬಿಡದೇ ಸಾಧಿಸಿಯೇ ತೀರುತ್ತೇನೆಂಬುವವ ಛಲವಾದಿ. ಗಟ್ಟಿಯಾದ ಬೇರುಗಳನ್ನು ಹೊಂದಿರುವ ಛಲವಾದಿ ಸಮಾಜ ಬಸವ ತತ್ವಗಳನ್ನು ಸಾರಿತು. ಇಂತಹ ಸಮಾಜದಲ್ಲಿ ಜನಿಸಿದ ಓಬವ್ವ, ಚಿತ್ರದುರ್ಗದ ಕೋಟೆ ರಕ್ಷಣೆಯಲ್ಲಿ ಟೊಂಕಕಟ್ಟಿ ನಿಂತು ಯಶಸ್ವಿಯಾದ ನಂತರ ಸ್ವತಃ ಚಿತ್ರದುರ್ಗದ ರಾಜ ವೀರ ಮದಕರಿನಾಯಕರೇ ಓಬವ್ವನ ಮನೆಗೆ ಬಂದು ಓಬವ್ವರನ್ನು ತಂಗ್ಯವ್ವ ಎಂದು ಸಂಭೋದಿಸಿ, ಚಿತ್ರದುರ್ಗದ ಇತಿಹಾಸದಲ್ಲಿ ಸದಾ ನಿನ್ನ ಹೆಸರು ಅಜರಾಮರವಾಗಿರುತ್ತದೆ. ನಿನ್ನ ಶಕ್ತಿ, ಪರಾಕ್ರಮ ಸದಾ ನೆಲೆಯಾಗಿರುತ್ತದೆ ಎಂದು ಶ್ಲಾಘಿಸುವುದರೊಂದಿಗೆ ಓಬವ್ವನಿಗೆ ಮೂರು ವರಗಳನ್ನು ನೀಡುತ್ತಾರೆ ಎಂದು ಸ್ಮರಿಸಿದರು.

ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಎಚ್ ಎಸ್ ಕುಮಾರಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಎಸ್‌ಪಿ ರಮೇಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಉಮೇಶ್ , ನಿವೃತ್ತ ನ್ಯಾಯಾಧೀಶ ದೇವೇಂದ್ರ, ಸಮಾಜದ ಮುಖಂಡರು ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.