ಕಾನೂನು, ಸುವ್ಯವಸ್ಥೆ ಕಾಪಾಡಲು ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲ

| Published : Jun 11 2024, 01:33 AM IST

ಕಾನೂನು, ಸುವ್ಯವಸ್ಥೆ ಕಾಪಾಡಲು ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲ
Share this Article
  • FB
  • TW
  • Linkdin
  • Email

ಸಾರಾಂಶ

ಬೆದರಿಕೆಯಿಂದ ಕುಟುಂಬವೊಂದು ವಿಷ ಸೇವಿಸಿ ಆ ಮನೆಯ ಯಜಮಾನ ಮೃತಪಟ್ಟಿದ್ದು, ನಂತರವೂ ತಹಸೀಲ್ದಾರ್ ಆಸ್ಪತ್ರೆ ಮತ್ತು ಅವರ ಮನೆಗೆ ಭೇಟಿ ನೀಡಿ ನೆರವಿನ ಹಸ್ತ ಚಾಚಿ ಸಾಂತ್ವನ ಹೇಳುವ ಕೆಲಸ ಮಾಡದೆ ಬೇಜವಾಬ್ದಾರಿತನ ತೋರಿಸಿದ್ದು, ಇದನ್ನು ಕ್ಷಮಿಸಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು, ಇದರಿಂದ ಜನತೆ ನೆಮ್ಮದಿಯಿಂದ ಬದುಕಲು ಅಸಾಧ್ಯವಾಗಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆರೋಪಿಸಿದರು.

ಪಟ್ಟಣದ ಆಡಳಿತ ಸೌಧದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಎಡವಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಚಂದಗಾಲು ಗ್ರಾಮದ ಪ್ರಕರಣದ ವಿಚಾರದಲ್ಲಿ ತಹಸೀಲ್ದಾರರು ಮುನ್ನೆಚ್ಚರಿಕೆ ವಹಿಸಿದ್ದರೆ ಆ ಕುಟುಂಬ ಆತ್ಮಹತ್ಯೆಗೆ ಯತ್ನಿಸಿ ಎರಡು ಜೀವಗಳು ಬಲಿಯಾಗುತ್ತಿರಲಿಲ್ಲ, ಮತ್ತು ನಾವು ಬಂದು ಈ ರೀತಿ ಹೋರಾಟ ಮಾಡುವ ಪ್ರಸಂಗ ಎದುರಾಗುತ್ತಿರಲಿಲ್ಲ ಎಂದು ತಿಳಿಸಿದರಲ್ಲದೆ ಮುಂದೆ ಅವರು ತಮ್ಮ ತಪ್ಪನ್ನು ತಿದ್ದಿಕೊಂಡು ಕೆಲಸ ಮಾಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬೆದರಿಕೆಯಿಂದ ಕುಟುಂಬವೊಂದು ವಿಷ ಸೇವಿಸಿ ಆ ಮನೆಯ ಯಜಮಾನ ಮೃತಪಟ್ಟಿದ್ದು, ನಂತರವೂ ತಹಸೀಲ್ದಾರ್ ಆಸ್ಪತ್ರೆ ಮತ್ತು ಅವರ ಮನೆಗೆ ಭೇಟಿ ನೀಡಿ ನೆರವಿನ ಹಸ್ತ ಚಾಚಿ ಸಾಂತ್ವನ ಹೇಳುವ ಕೆಲಸ ಮಾಡದೆ ಬೇಜವಾಬ್ದಾರಿತನ ತೋರಿಸಿದ್ದು, ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದರು.

ಕಳೆದ ಒಂದು ವರ್ಷದಿಂದ ನಿರಂತರವಾಗಿ ಕ್ಷೇತ್ರದಲ್ಲಿ ಇಂತಹ ಹತ್ತಾರು ಘಟನೆಗಳು ನಡೆಯುತ್ತಿದ್ದು, ಈವರೆಗೆ ನಾನು ಸುಮ್ಮನಿದ್ದೆ. ಆದರೆ ಮುಂದೆ ಇದು ಪುನರಾವರ್ತನೆಯಾದರೆ ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ. ಹಾಗಾಗಿ ಅಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಡದೆ ಜನರ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಪೊಲೀಸ್ ಇಲಾಖೆಯವರು ಸಂಪೂರ್ಣವಾಗಿ ವಿಫಲರಾಗಿದ್ದು, ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪು ಮಾಡಿರುವ ಎಲ್ಲರ ವಿರುದ್ಧವು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಾವು ಬೀದಿಗಳಿದು ಕಾನೂನು ಕೈಗೆ ತೆಗೆದುಕೊಂಡರೆ ಅದನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ಥಳದಲ್ಲಿದ್ದ ಹೆಚ್ಚುವರಿ ಎಸ್ಪಿ ಡಾ. ನಂದಿನಿ ಅವರಿಗೆ ಹೇಳಿದರು.

ಸ್ಥಳದಲ್ಲಿದ್ದ ಹುಣಸೂರು ಉಪವಿಭಾಗಾಧಿಕಾರಿ ಡಾ. ಮಹಮದ್ ಹ್ಯಾರೀಸ್ ಸುಮೈರ್ ಅವರಿಗೆ ತಹಸೀಲ್ದಾರರ ವಿರುದ್ಧ ಹಲವಾರು ದೂರುಗಳನ್ನು ಹೇಳಿದ ಸಾ.ರಾ. ಮಹೇಶ್, ಈ ಬಗ್ಗೆ ನೀವು ಖುದ್ದಾಗಿ ತನಿಖೆ ನಡೆಸಿ ಅವರ ವೈಫಲ್ಯಗಳನ್ನು ಕಂಡು ಹಿಡಿದು ಎಲ್ಲವನ್ನು ಸರಿಪಡಿಸಬೇಕೆಂದರು.

ಮೃತ ಮಹದೇವನಾಯಕನ ಕುಟುಂಬಕ್ಕೆ ಸರ್ಕಾರದ ವತಿಯಿಂದ 25 ಲಕ್ಷ ರು. ಪರಿಹಾರ ನೀಡುವುದರ ಜತೆಗೆ ಕರ್ತವ್ಯ ಲೋಪವೆಸಗಿರುವ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಅವರನ್ನು ಕೂಡಲೇ ಅಮಾನತ್ತು ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಜನರ ಹಿತದೃಷ್ಟಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಂಗಲ್ ಲಾಡ್ಜ್ ಮಾಜಿ ಅಧ್ಯಕ್ಷ ಎಂ. ಅಪ್ಪಣ್ಣ, ದಲಿತ ಮುಖಂಡ ನಾಗರಾಜು, ನಾಯಕ ಸಮಾಜದ ಮುಖಂಡರಾದ ಕೃಷ್ಣನಾಯಕ, ಗಣೇಶನಾಯಕ ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಸಿ.ಜೆ. ದ್ವಾರಕೀಶ್, ಮಾಜಿ ಸದಸ್ಯರಾದ ಎಂ.ಟಿ. ಕುಮಾರ್, ಅಮಿತ್ ವಿ. ದೇವರಹಟ್ಟಿ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದ್ರಾಕ್ಷಾಯಿಣಿ, ತಾಲೂಕು ಅಧ್ಯಕ್ಷೆ ರಾಜಲಕ್ಷ್ಮೀ, ಕೆ.ಆರ್. ನಗರ ಪಟ್ಟಣದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಜೆಡಿಎಸ್ ಮುಖಂಡರಾದ ಸುರೇಶ್, ಎಚ್.ಆರ್. ಮಧುಚಂದ್ರ, ಮೋಹನಕುಮಾರಿ, ವಕೀಲರಾದ ಅಂಕನಹಳ್ಳಿ ತಿಮ್ಮಪ್ಪ, ಡಿ.ಆರ್. ರಮೇಶ್, ಭಾಗ್ಯಮ್ಮ ಕೃಷ್ಣೇಗೌಡ, ನೂರಾರು ಮಂದಿ ಕಾರ್ಯಕರ್ತರು ಇದ್ದರು.